ಶಿರ್ವ: ಬೆಳಪುವಿನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಸುಮತಿ (66) ಸಂಶಯಾಸ್ಪದವಾಗಿ ಮೃತಪಟ್ಟಿದ್ದಾರೆ.
ಅಮ್ಮನ ಮೈಮೇಲಿದ್ದ ಆಭರಣಗಳು ನಾಪತ್ತೆಯಾಗಿವೆ ಮತ್ತು ಅವರ ಸಾವಿನಲ್ಲಿ ಸಂಶಯ ಕಾಡುತ್ತಿದೆ ಎಂದು ಅವರ ಮಗಳು ಶಿರ್ವ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪತಿಯ ನಿಧನದ ಬಳಿಕ 3 ವರ್ಷಗಳಿಂದ ಅವರು ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಮಕ್ಕಳು ಆಗಾಗ್ಗೆ ಬಂದು ಮಾತನಾಡಿಸಿ ಹೋಗುತ್ತಿದ್ದರು. ಆ. 26ರಂದು ಮಗಳು ವಿಜಯಾ ಬಂದು ಮಾತನಾಡಿಸಿಕೊಂಡು ಮರಳಿದ್ದರು. ಆ. 27ರಂದು ರಾತ್ರಿ ಅಮ್ಮನಿಗೆ ಫೋನ್ ಕರೆ ಮಾಡಿದಾಗ ಸ್ವೀಕರಿಸಿರಲಿಲ್ಲ. ಆದ್ದರಿಂದ ತನ್ನಿಬ್ಬರು ಮಕ್ಕಳನ್ನು ಅಜ್ಜಿಯ ಮನೆಗೆ ಕಳುಹಿಸಿದರು. ಮೊಮ್ಮಕ್ಕಳು ಬಂದು ನೋಡಿದಾಗ ಅಜ್ಜಿ ಮಲಗಿದ್ದು, ಕರೆದರೂ ಏಳುತ್ತಿಲ್ಲ ಎಂದು ತಿಳಿಸಿದ್ದರು. ತತ್‌ಕ್ಷಣ ಮಗಳು ಹೋಗಿ 108 ಆ್ಯಂಬುಲೆನ್ಸ್‌ಗೆ ಕರೆ ಮಾಡಿ ನೆರೆಹೊರೆಯವರ ಸಹಾಯದಿಂದ ಕಾಪುವಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಂದ ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಕೆಯನ್ನು ಪರೀಕ್ಷಿಸಿದ ವೈದ್ಯರು ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ.
ತಾಯಿಯ ಮುಖ ಊದಿಕೊಂಡಿದ್ದು, ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್, ಒಂದು ಜೊತೆ ಬಳೆ, ಉಂಗುರ ನಾಪತ್ತೆಯಾಗಿದೆ. ಮನೆಯ ಉಳಿದ ಎಲ್ಲ ವಸ್ತುಗಳು ಯಥಾಸ್ಥಿತಿಯಲ್ಲಿವೆ. ತಾಯಿಯ ಸಾವಿನಲ್ಲಿ ಸಂಶಯವಿದೆ ಎಂದು ಮಗಳು ವಿಜಯಾ ಶಿರ್ವ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.