ಕುಂದಾಪುರ: ಕುಗ್ರಾಮದ ಕೊಡ್ಲಾಡಿ ಗ್ರಾಮದ ಮಾರ್ಡಿ ಸರಕಾರಿ ಹಿ.ಪ್ರಾ. ಶಾಲೆಗೆ ಬೆಂಗಳೂರಿನ “ಬೆಳಕು’ ತಂಡವು ಸುಣ್ಣ – ಬಣ್ಣ ಬಳಿಯುವ ಮೂಲಕ ಹೊಸತೊಂದು ರೂಪವನ್ನು ನೀಡಿದೆ. ಈಗ ಈ ಶಾಲೆಯ ಗೋಡೆಯಲ್ಲಿ ಚಿತ್ರಗಳ ಚಿತ್ತಾರ, ಕಟ್ಟಡದ ಗೋಡೆ, ಆವರಣ ಗೋಡೆಗೆ ಅಂದದ ಬಣ್ಣದಿಂದ ಸಿಂಗಾರಗೊಂಡು ಕಂಗೊಳಿಸುತ್ತಿದೆ.
ಬೆಳಕು ತಂಡದ 21 ಮಂದಿ ಸ್ವಯಂಸೇವಕರು ಕಳೆದ ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಹೊರಟು ಶನಿವಾರ ಹಾಗೂ ರವಿವಾರ 2 ದಿನಗಳ ಕಾಲ ಶಾಲೆಯ ಸೌಂದರ್ಯ ವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡರು. ಸುಮಾರು 60ಕ್ಕೂ ಅಧಿಕ ವಿದ್ಯಾರ್ಥಿಗಳಿರುವ ಶಾಲೆ ಇದಾಗಿದ್ದು, ಇಡೀ ಶಾಲೆ ಕಟ್ಟಡದ ಒಳಗೆ ಮತ್ತು ಹೊರಗೆ ಸುಣ್ಣ-ಬಣ್ಣ, ಬೋರ್ಡಿಗೆ ಬಣ್ಣ ಬಳಿಯಲಾಗಿದೆ. ಶಾಲೆ ಎದುರಿನ ಗೋಡೆಗೆ ಶಿಕ್ಷಣ ಹಾಗೂ ಮಾಹಿತಿ ಆಧಾರಿತ ಚಿತ್ರಗಳು.
ಹೊರಭಾಗದ ಆವರಣ ಗೋಡೆ ಹಾಗೂ ಶಾಲಾ ಸ್ವಾಗತ ಗೋಪುರಕ್ಕೆ ಬಣ್ಣ ಬಳಿಯುವ ಮೂಲಕ ಇಡೀ ಶಾಲೆಯ ಅಂದ ಹೆಚ್ಚಿಸಲಾಗಿದೆ. ಹಳೆ ವಿದ್ಯಾರ್ಥಿ ಸಂದೀಪ್ ಕೊಡ್ಲಾಡಿ ಕೋರಿಕೆಯಂತೆ ಬೆಳಕು ತಂಡ ಆಗಮಿಸಿ, ಈ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಈಗಾಗಲೇ ಬೆಂಗಳೂರು, ಮಂಡ್ಯ, ಉತ್ತರ ಕನ್ನಡ ಸಹಿತ 9 ಶಾಲೆಗಳ ಸೌಂದರ್ಯ ವೃದ್ಧಿ ಕಾರ್ಯ ನಡೆದಿದ್ದು, ಮಾರ್ಡಿ ಶಾಲೆ ಹತ್ತನೆಯದ್ದಾಗಿದೆ. ತಂಡದ ವಿನಯ್ ಕೆ.ಆರ್. ಪೇಟೆ ಅವರ ಕೈಚಳಕದಿಂದ ಗೋಡೆಗಳ ಮೇಲೆ ಸುಂದರವಾದ ಚಿತ್ರಗಳು ಮೂಡಿದೆ.
ಅಭಿನಂದನೆ
Related Articles
2 ದಿನ ಮಾರ್ಡಿ ಶಾಲೆಯಲ್ಲಿಈ ಕೈಂಕರ್ಯದ ಸಮಾರೋಪ ರವಿವಾರ ಸಂಜೆ ನಡೆಯಿತು. ಹಳೆ ವಿದ್ಯಾರ್ಥಿ ಸಂದೀಪ್ ಕೊಡ್ಲಾಡಿ ಅವರನ್ನು ಸಮ್ಮಾನಿಸಲಾಯಿತು. ಬೆಳಕು ತಂಡದ ಕಾರ್ಯಕ್ಕೆ ಸದಸ್ಯರನ್ನು ಅಭಿನಂದಿಸಲಾಯಿತು. ಸ್ಥಳೀಯರಾದ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ, ಗ್ರಾ.ಪಂ. ಸದಸ್ಯರಾದ ರತ್ನಾಕರ ನಾಯ್ಕ, ಪ್ರವೀಣ್ ಕುಮಾರ್ ಶೆಟ್ಟಿ, ಯೋಗೇಂದ್ರ ನಾಯ್ಕ ಕೊಡ್ಲಾಡಿ, ವಿದ್ಯಾಧರ ಶೆಟ್ಟಿ, ನಿವೃತ್ತ ಯೋಧ ಶಿವರಾಮ ನಾಯ್ಕ, ಉದಯ ಕುಮಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಂಕರ್ ಬಿ.ಕೆ., ಶಾಲಾಭಿವೃದ್ಧಿ, ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಗಜೇಂದ್ರ ನಾಯ್ಕ ಉಪಸ್ಥಿತರಿದ್ದರು.
ಬೆಳಕು ತಂಡ
ಬೆಂಗಳೂರು ಮೂಲದ ಬೆಳಕು ತಂಡ 9 ಮಂದಿ ಸದಸ್ಯರೊಂದಿಗೆ ಸಮಾಜ ಸೇವೆಯ ಕಲ್ಪನೆಯಡಿ ಡಾ| ವಿಷ್ಣುವರ್ಧನ್ ಜನ್ಮ ದಿನದಂದು 2019ರಲ್ಲಿ ಹುಟ್ಟಿಕೊಂಡಿದ್ದು, ಈಗ ಯುವಕರು, ಮಹಿಳೆಯರು, ಯುವತಿಯರ ಸಹಿತ 210 ಮಂದಿ ಸದಸ್ಯರಿದ್ದಾರೆ. ಬಹುತೇಕರು ಎಂಎನ್‌ಸಿ ಕಂಪೆನಿಯಲ್ಲಿ ಕೆಲಸ ಮಾಡುವವರಾಗಿದ್ದು, ತಿಂಗಳಿನಲ್ಲಿ ಒಂದು ದಿನ ಸಮಾಜ ಸೇವೆಗೆ ಮೀಸಲಿಡುತ್ತಾರೆ. ಶಾಲಾ ಸೌಂದರ್ಯ ವೃದ್ಧಿಯ ಜತೆಗೆ ಅನಾಥಾಶ್ರಮ, ವೃದ್ಧಾಶ್ರಮ ಹಾಗೂ ಸ್ಲಂಗಳಿಗೆ ಭೇಟಿ ನೀಡಿ ಅಗತ್ಯ ಸೌಲಭ್ಯ ನೀಡುವುದು, ಪ್ರಾಣಿಗಳ ರಕ್ಷಣೆ ಸಹಿತ ವಿವಿಧ ಸಾಮಾಜಿಕ ಸೇವಾ ಕೈಂಕರ್ಯಗಳಲ್ಲಿ ತೊಡಗಿಸಿ ಕೊಳ್ಳುತ್ತಿದ್ದಾರೆ. ದುಡಿಮೆಯ ಒಂದಷ್ಟು ಹಣವನ್ನು ಸಮಾಜಸೇವೆಗೆ ಬಳಸುತ್ತಿದ್ದಾರೆ. ರಾಜ್ಯ ಮಾತ್ರವಲ್ಲದೆ ಆಂಧ್ರ ಪ್ರದೇಶ, ತಮಿಳುನಾಡು, ಒಡಿಸ್ಸಾ ಮೊದಲಾದ ಹೊರರಾಜ್ಯದವರು ಕೂಡ ಬೆಳಕು ತಂಡದಲ್ಲಿದ್ದಾರೆ.
ಕುಟುಂಬದಂತೆ ಕೆಲಸ
ಬೆಳಕು ತಂಡ ಮಾಡುವ ಕೆಲಸ ಇತರರಿಗೂ ಪ್ರೇರಣೆಯಾಗುವ ನಿಟ್ಟಿನಲ್ಲಿ “ಪಯಣದ ಹಾದಿಗೆ ಪ್ರೇರಣೆ’ ಎಂಬ ಟ್ಯಾಗ್ ಲೈನ್ ನೀಡಲಾಗಿದ್ದು, ಇಡೀ ತಂಡ ಕುಟುಂಬದಂತೆ ಕೆಲಸ ಮಾಡುತ್ತಿದ್ದೇವೆ. ಸದಸ್ಯರೆಲ್ಲರ ಕುಟುಂಬದವರ ಪ್ರೋತ್ಸಾಹ ಮತ್ತು ಸಹಕಾರವಿದೆ.
– ಶಿವಕುಮಾರ್, ಬೆಳಕು ತಂಡದ ಸದಸ್ಯ
ಶ್ಲಾಘನೀಯ ಕಾರ್ಯ
ಶಾಲೆಯ ಅಂದ ಹೆಚ್ಚಿಸುವ ಚಿಂತನೆ ಎಸ್‌ಡಿಎಂಸಿ ಹಾಗೂ ಹಳೆ ವಿದ್ಯಾರ್ಥಿಗಳದ್ದಾಗಿತ್ತು. ಅಂತೆಯೇ ಹಳೆ ವಿದ್ಯಾರ್ಥಿ ಸಂದೀಪ್ ಕೊಡ್ಲಾಡಿಯವರು ಬೆಳಕು ತಂಡದವರ ಬಳಿ ಮಾತನಾಡಿದ್ದು, ಸದಸ್ಯರು ಶಾಲೆಗೆ ಪೇಂಟಿಂಗ್ ಮಾಡುವ ಮೂಲಕ ಅಂದ ಹೆಚ್ಚಿಸಿದ್ದಾರೆ. ಇದೊಂದು ಮೆಚ್ಚುಗೆಯ ಕಾರ್ಯವಾಗಿದೆ.
– ಗೌರಿ, ಮುಖ್ಯಶಿಕ್ಷಕಿ