ಬೆಂಗಳೂರು: ಬೇಲೇಕೇರಿ ಮತ್ತು ನವಮಂಗಳೂರು ಬಂದರು ಮೂಲಕ ನಡೆದಿದೆ ಎನ್ನಲಾದ ಅಕ್ರಮ ಅದಿರು ಸಾಗಣೆ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಲು ಚಿಂತನೆ ನಡೆಸಿರುವ ರಾಜ್ಯದ ಕಾಂಗ್ರೆಸ್ ಸರಕಾರದ ಕ್ರಮದ ವಿರುದ್ಧ ರಾಜಕೀಯವಾಗಿಯೇ ಹೋರಾಟ ನಡೆಸಲು ಬಿಜೆಪಿ ತೀರ್ಮಾನಿಸಿದೆ.
ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿ ಗಾರಿಕೆ ಕುರಿತಂತೆ ತನಿಖೆಯನ್ನು 2013ರಲ್ಲಿ ಎಸ್‌ಐಟಿಗೆ ವಹಿಸಲಾಗಿತ್ತು. ಎಸ್‌ಐಟಿ ಇನ್ನೂ ತನಿಖೆ ಪೂರ್ಣಗೊಳಿಸಿ ತನ್ನ ವರದಿ ಸಲ್ಲಿಸಿಲ್ಲ. ಹೀಗಿರುವಾಗ ಸಿಬಿಐ ತಿರಸ್ಕರಿಸಿರುವ ಬೇಲೇಕೇರಿ, ನವಮಂಗಳೂರು ಬಂದರು ಮೂಲಕ ನಡೆ ದಿದೆ ಎನ್ನಲಾದ ಅಕ್ರಮ ಅದಿರು ಸಾಗಣೆ ಪ್ರಕರಣವನ್ನು ಮತ್ತೆ ಇದೇ ಎಸ್‌ಐಟಿಗೆ ವಹಿಸುವ ಉದ್ದೇಶದ ಹಿಂದೆ ರಾಜಕೀಯ ಸೇಡು ಇರುವ ಹಿನ್ನೆಲೆಯಲ್ಲಿ ರಾಜಕೀಯ ವಾಗಿಯೇ ಹೋರಾಟ ನಡೆಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬಿಜೆಪಿ ಬಂದಿದೆ.
ಬೇಲೇಕೇರಿ, ನವಮಂಗಳೂರು ಬಂದರಿನಿಂದ ಅಕ್ರಮವಾಗಿ ಅದಿರು ಸಾಗಿಸಿದ ಪ್ರಕರಣ ಗೋಜಲಿನಿಂದ ಕೂಡಿದ್ದು, ಆರೋಪ ಸಾಬೀತುಪಡಿಸಲು ಆವಶ್ಯಕ ದಾಖಲೆಗಳನ್ನು ಪತ್ತೆಹಚ್ಚುವುದು ಕಷ್ಟಸಾಧ್ಯ. ಹೀಗಾಗಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲು ಸಾಧ್ಯವಿಲ್ಲ ಎಂದು ಹೇಳಿ ಪ್ರಾಥಮಿಕ ಹಂತದಲ್ಲೇ ಸಿಬಿಐ ತನಿಖೆಯನ್ನು ಮುಕ್ತಾಯಗೊಳಿಸಿದೆ. ಅದರಂತೆ ಸರಕಾರದ ಮುಖ್ಯ ಕಾರ್ಯದರ್ಶಿ ಗಳಿಗೆ ಪತ್ರವನ್ನೂ ಬರೆದಿದೆ. ದಾಖಲೆಗಳೇ ಲಭ್ಯವಿಲ್ಲ ಎಂದ ಮೇಲೆ ಈ ಪ್ರಕರಣವನ್ನು ಮತ್ತೆ ಕೆದಕುವುದು ರಾಜಕೀಯ ಸೇಡಿನ ಕ್ರಮವೇ ಹೊರತು ಬೇರೇನೂ ಅಲ್ಲ ಎಂಬುದು ಬಿಜೆಪಿ ನಾಯಕರ ಆರೋಪ.
ಬಂದರುಗಳ ಮೂಲಕ ಅಕ್ರಮ ಅದಿರು ಸಾಗಣೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಬಳಿ ದಾಖಲೆಗಳಿದ್ದರೆ ಇದುವರೆಗಿನ ತನಿಖೆ ವೇಳೆ ಅದನ್ನು ಸಿಬಿಐಗೆ ಒಪ್ಪಿಸಬಹುದಿತ್ತು. ಸಿಬಿಐ ಬಗ್ಗೆ ನಂಬಿಕೆ ಇಲ್ಲದಿದ್ದರೆ ದಾಖಲೆಗಳನ್ನು ನೇರವಾಗಿ ಸು. ಕೋರ್ಟ್‌ಗೆ ಸಲ್ಲಿಸಲೂ ಅವಕಾಶವಿತ್ತು. ಆದರೆ, ಸರಕಾರ ಇದುವರೆಗೆ ಅಂತಹ ಯಾವುದೇ ಪ್ರಯತ್ನ ಮಾಡಿಲ್ಲ. ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷ ಸುಮ್ಮನಿದ್ದು, ಇದೀಗ ಎಸ್‌ಐಟಿ ತನಿಖೆಗೆ ಪ್ರಕರಣ ವಹಿಸಲು ನಿರ್ಧರಿಸಿರುವುದು ರಾಜಕೀಯ ದುರುದ್ದೇಶದ ಕ್ರಮ. ಹೀಗಾಗಿ ಇದರ ವಿರುದ್ಧ ರಾಜಕೀಯವಾಗಿಯೇ ಹೋರಾಟ ನಡೆಸಲಿದ್ದೇವೆ ಎಂದು ಹೇಳುತ್ತಾರೆ.