ಪ್ರಕೃತಿ ನಿರ್ಮಿತ ಸುಂದರ ಮಡಿಲಿನಲ್ಲಿ, ಹಚ್ಚ ಹಸಿರಿನ ಬೆಟ್ಟಗಳ ಮಧ್ಯದಲ್ಲಿರುವ ಸಿದ್ಧೇಶ್ವರ ಇಲ್ಲಿ ಸ್ವಯಂಭೂ ಲಿಂಗ ಸ್ವರೂಪಿ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಲ್ಲೂರಿನ ಈ ದೇಗುಲವು ಶ್ರೀಶೈಲದ ಶಿವನನ್ನು ನೆನಪಿಸುವಂತಿದೆ.
ಕಲ್ಲೂರಿನಿಂದ 3 ಕಿ.ಮೀ. ದೂರದಲ್ಲಿರುವ ಸಿದ್ಧೇಶ್ವರನು 35 ಮೀ. ಎತ್ತರದಲ್ಲಿರುವ ಬೃಹತ್ ಬಂಡೆಗಳ ಮೇಲೆ ಪ್ರತಿಷ್ಠಾಪಿತನಾಗಿದ್ದಾನೆ. ಚಾಲುಕ್ಯರ ಶೈಲಿಯಲ್ಲಿರುವ ಈ ದೇಗುಲಕ್ಕೆ 1893ರಲ್ಲಿ ಪುನರ್‌ಸ್ಪರ್ಶ ಸಿಕ್ಕಿದೆ. ದೇವಸ್ಥಾನವು ಗರ್ಭಗೃಹವನ್ನು ಹೊಂದಿದ್ದು, ತೆರೆದ ನವರಂಗ ಕಣ್ಸೆಳೆಯುವಂತಿದೆ.
ಗರ್ಭಗುಡಿಯಲ್ಲಿ ಉದ್ಭವ ಲಿಂಗವಿದ್ದು, ಬಲಭಾಗದಲ್ಲಿ ಹಸಿರು ಮಚ್ಚೆ ಗೋಚರವಾಗುತ್ತದೆ. ಇದನ್ನು “ಭಕ್ತರು ಸಿದ್ಧೇಶ್ವರನ ಬಲಗಣ್ಣು’ ಅಂತಲೇ ನಂಬಿದ್ದಾರೆ. ಅಲ್ಲಿ ಝರಿಯೂ ಹರಿಯುತ್ತದೆ. “ಅಮರ ಶಿಲ್ಪಿ’ ಜಕಣಾಚಾರಿಯ ಕಲಾಕುಸುರಿ ಈ ದೇಗುಲದ ಪ್ರಧಾನ ಆಕರ್ಷಣೆ. ಗರ್ಭಗುಡಿಯು ಕದಂಬರ ಶೈಲಿಯ ಗೋಪುರವನ್ನು ಹೊಂದಿದೆ. ಕಲ್ಲಿನ ಕಂಬಗಳ ಕೆತ್ತನೆ ಮನ ಸೆಳೆಯುತ್ತದೆ.
ಬಲಭಾಗದ ಬೆಟ್ಟದ ಅಂಚಿನಲ್ಲಿ ಕಲ್ಯಾಣ ಬಸವೇಶ್ವರರ ಚಿಕ್ಕ ದೇಗುಲವಿದೆ. ಬಸವಣ್ಣನವರು ಕೂಡಲಸಂಗಮಕ್ಕೆ ತೆರಳುವಾಗ ಇಲ್ಲಿ ಕೆಲಕಾಲ ತಂಗಿದ್ದರಂತೆ. ಅಲ್ಲದೆ, ಚಿತ್ರದುರ್ಗದ ಮುರುಘರಾಜೇಂದ್ರ ಶ್ರೀಗಳು, ಎಡೆಯೂರು ಕ್ಷೇತ್ರದ ಮೂಲ ಪೀಠಾಧೀಶರು ಮತ್ತು ಮುನಿಗಳು ತಪಗೈದ ಪುಣ್ಯ ತಾಣವಿದು. ದೇಗುಲದ ಹಿಂಭಾಗ ಗವಿಯಿದ್ದು, ಶಬರಿಕೊಳ್ಳದವರೆಗೆ ಚಾಚಿದೆ ಎಂದು ಹೇಳುತ್ತಾರೆ. ಅದರ ಮೇಲ್ಭಾಗದಿಂದ ಆಲದ ಜಡೆಯಲ್ಲಿ ನೀರು ಉಕ್ಕುತ್ತದೆ. ಭಕ್ತರಿಗೆ ಇದು ತೀರ್ಥಪ್ರಸಾದ.
ಯುಗಾದಿಯ ಪಾಡ್ಯದ ದಿನದಂದು ಸಾಯಂಕಾಲ, ಸಿದ್ಧೇಶ್ವರ ವಿಗ್ರಹದ ಮೇಲೆ ಸೂರ್ಯನ ಕಿರಣಗಳು ಬೀಳುವುದನ್ನು ಭಕ್ತರು ಕಣ್ತುಂಬಿಕೊಳ್ಳುತ್ತಾರೆ. ಪುರಾತನ ಕಾಲದಿಂದಲೂ ದೇಗುಲದ ಪೂಜೆಯ ಕಾರ್ಯವನ್ನು ಕಲ್ಲೂರ ಗ್ರಾಮದ ಹೂಗಾರ ಮನೆತನದವರು ನಿರ್ವಹಿಸಿಕೊಂಡು ಬರುತ್ತಿದ್ದಾರೆ. ದೇವರ ಜಾತ್ರೆ ಡಿಸೆಂಬರ್‌ನಲ್ಲಿ ಜರುಗುತ್ತದೆ. ದೇಗುಲದ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಮಟ್ಟಿಯವರ ಪರಿಶ್ರಮದ ಫಲವಾಗಿ ಎರಡು ಕಲ್ಯಾಣ ಮಂಟಪಗಳು ನಿರ್ಮಾಣಗೊಂಡಿವೆ. ದಾಸೋಹ ಭವನವು ಅಷ್ಟೇ ಅಚ್ಚುಕಟ್ಟಾಗಿ ತಲೆಯೆತ್ತಿದೆ. ಪ್ರತಿ ಅಮಾವಾಸ್ಯೆ ಹಾಗೂ ಸೋಮವಾರಗಳಂದು ಅನ್ನಪ್ರಸಾದದ ವ್ಯವಸ್ಥೆ ಇರುತ್ತದೆ.
ಸಂಜೀವಿನಿ ತೀರ್ಥ..!
ಬೆಟ್ಟದ ಮೇಲ್ಭಾಗದಲ್ಲಿ ನೂರಾರು ವರ್ಷಗಳಿಂದ ಆಲದ ಬೇರುಗಳು ಜಟೆಯಂತೆ ಒಂದಕ್ಕೊಂದು ಹೆಣೆದುಕೊಂಡು, ಬೆಟ್ಟದಡಿಯಲ್ಲಿ ಇಳಿದು, ಗಂಗೆಯ ಪಡಿಯಲ್ಲಿ ನೀರಿನ ಸಿಂಚನ ಮಾಡುತ್ತಿವೆ. “ಈ ನೀರು ಮೂಲಿಕೆ ಸಸ್ಯಗಳ ಬೇರುಗಳ ಮೂಲಕ ಬರುವ ಕಾರಣ, ಇದು ಔಷಧೀಯ ಗುಣ ಹೊಂದಿದೆ’ ಎನ್ನುತ್ತಾರೆ ಸ್ಥಳೀಯರು.
ದರುಶನಕೆ ದಾರಿ…
ಕಲ್ಲೂರ ಕ್ಷೇತ್ರವು ಬೆಳಗಾವಿಯಿಂದ 115 ಕಿ.ಮೀ., ಸವದತ್ತಿಯಿಂದ 30 ಕಿ.ಮೀ. ಹಾಗೂ ರಾಮದುರ್ಗದಿಂದ 13 ಕಿ.ಮೀ. ಅಂತರದಲ್ಲಿದೆ.
– ಸುರೇಶ ಗುದಗನವರ