Advertisement

ಹಳ್ಳಿಗಳ ಅಭಿವೃದ್ಧಿಗೆ ರರ್ಬನ್‌ ಯೋಜನೆ

04:17 PM Feb 03, 2021 | Team Udayavani |

ಬೆಳಗಾವಿ: ಕಿರಿದಾದ ರಸ್ತೆಗಳು ವಿಶಾಲವಾಗಿವೆ. ಮಣ್ಣು  ಮತ್ತು ಡಾಂಬರ್‌ ರಸ್ತೆಗಳಿಗೆ ಕಾಂಕ್ರೀಟ್‌ ರೂಪ ಬಂದಿದೆ. ಹಳ್ಳಿಗಳು ಎಂದರೆ ಮೂಗು ಮುರಿಯುವ ಜನ ಈ ಕಡೆ ತಿರುಗಿ ನೋಡುವಂತಾಗಿದೆ. ಇದಕ್ಕೆಲ್ಲಾ ಕಾರಣವಾಗಿದ್ದು ರರ್ಬನ್‌ (ರೂರಲ್‌-ಅರ್ಬನ್‌) ಎಂಬ ಕೇಂದ್ರ ಸರಕಾರದ ವಿನೂತನ ಯೋಜನೆ.

Advertisement

ನಗರಕ್ಕೆ ಸ್ಮಾರ್ಟ್‌ಸಿಟಿ ಯೋಜನೆ ಇರುವಂತೆ ಹಳ್ಳಿಗಳಿಗೆ ರರ್ಬನ್‌ ತರಲಾಗಿದೆ. ನಗರ ಪ್ರದೇಶದ ಮಾದರಿಯಲ್ಲಿ ಗ್ರಾಮಗಳಿಗೆ ರಸ್ತೆ, ಕುಡಿಯುವ ನೀರು, ಸುಸಜ್ಜಿತ ಬಸ್‌ ನಿಲ್ದಾಣ ಸೇರಿದಂತೆ ಎಲ್ಲ ರೀತಿಯ ಮೂಲಸೌಕರ್ಯಗಳನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶ.

ಜಿಲ್ಲೆಯಲ್ಲಿ ಆಯ್ಕೆಯಾಗಿರುವ ಬೆಳಗಾವಿ ತಾಲೂಕಿನ 4 ಗ್ರಾಮ ಪಂಚಾಯತ್‌ಗಳ ಒಂಬತ್ತು ಹಳ್ಳಿಗಳ ಚಿತ್ರ ಈಗ ರರ್ಬನ್‌ ಯೋಜನೆಯಿಂದ ಬದಲಾಗುತ್ತಿದೆ. ಕರ್ನಾಟಕದ ಗಡಿ ಭಾಗದಲ್ಲಿರುವ ಕಂಗ್ರಾಳಿ ಬಿ.ಕೆ ಕೃಷಿಯಿಂದ ಸಮೃದ್ಧವಾದ ಪ್ರದೇಶ. ಹಲವು ವರ್ಷಗಳ ಹಿಂದೆ ಮೂಲಭೂತ ಸೌಲಭ್ಯಗಳಿಂದ ನರಳುತ್ತಿದ್ದ ಗ್ರಾಮ ಈಗ ಮೊದಲಿನಂತಿಲ್ಲ. ವಿವಾದಗಳಿಂದ ಹೊರಬಂದಿದೆ. ಅಭಿವೃದ್ಧಿ ಮುಖ್ಯ ಎಂಬುದನ್ನು ಮನಗಂಡಿರುವ ಗ್ರಾಮದ ಜನರು ಸುಧಾರಣೆಯ ಕಡೆ ಮುಖಮಾಡಿದ್ದಾರೆ.

ಬೆಳಗಾವಿಯಿಂದ ಎಂಟು ಕಿ.ಮೀ ದೂರದಲ್ಲಿರುವ ಕಂಗ್ರಾಳಿ ಬಿ.ಕೆ ಸುಮಾರು 20 ಸಾವಿರ ಜನಸಂಖ್ಯೆ ಇರುವ ಗ್ರಾಮ. ಬಸ್‌ ನಿಲ್ದಾಣ, ಸಮರ್ಪಕ ರಸ್ತೆ, ಗಟಾರು ಮೊದಲಾದ ಸಮಸ್ಯೆಗಳು ಇಲ್ಲಿ ನಿರಂತರವಾಗಿದ್ದವು. ನಗರಕ್ಕೆ ಹೊಂದಿಕೊಂಡಿದ್ದರೂ ಆಗಾಗ ಕಾಡುವ ಗಡಿ ತಂಟೆ ಮತ್ತು ಗ್ರಾಮೀಣ ಪ್ರದೇಶ ಎಂಬ ಕಾರಣಕ್ಕೆ ಇದು ನಿರ್ಲಕ್ಷಕ್ಕೆ ತುತ್ತಾಗಿತ್ತು. ಆದರೆ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ರರ್ಬನ್‌ ಯೋಜನೆ ಬಂದ ನಂತರ ಗ್ರಾಮದ ಚಿತ್ರ ಬದಲಾಗುತ್ತಿದೆ.

ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ರರ್ಬನ್‌ ಯೋಜನೆಯ ಕಾಮಗಾರಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಮುಖಾಂತರ ಗ್ರಾಪಂಗಳಿಂದ ನಡೆಯುತ್ತವೆ. ಯೋಜನೆಯ ಪ್ರಾಯೋಗಿಕ ಹಂತವಾಗಿ ಬೆಳಗಾವಿ ಜಿಲ್ಲೆಯು ಆಯ್ಕೆಯಾಗಿದ್ದು ಇದರಲ್ಲಿ ನಾಲ್ಕು ಗ್ರಾಪಂಗಳನ್ನು ಗುರುತಿಸಲಾಗಿದೆ. ಮೊದಲ ಹಂತದ ಪ್ರಯೋಗ ಯಶಸ್ವಿಯಾಗಿದೆ. ಕಂಗ್ರಾಳಿ ಖುರ್ದ, ಕಂಗ್ರಾಳಿ ಬಿ ಕೆ, ಮಂಡ್ರೋಳಿ ಮತ್ತು ಅಂಬೇವಾಡಿ ಸೇರಿದಂತೆ ಒಟ್ಟು ಒಂಬತ್ತು ಗ್ರಾಮಗಳನ್ನ ಗುರುತಿಸಲಾಗಿದ್ದು ಈ ಗ್ರಾಮಗಳಿಗೆ 116 ಕೋಟಿ ರೂ. ವೆಚ್ಚಮಾಡಲಾಗುತ್ತಿದೆ. ಇದರಲ್ಲಿ 86 ಕೋಟಿ ರೂ ಗಳನ್ನು ಶಾಸಕರು, ಸಂಸದರ ನಿಧಿ, ಗ್ರಾಮ ಪಂಚಾಯತ್‌ ಅನುದಾನದಲ್ಲಿ ಬಳಕೆ ಮಾಡಲಾಗುತ್ತದೆ. ಉಳಿದ 30 ಕೋಟಿ ರೂ. ಹಣದಲ್ಲಿ ಕೇಂದ್ರ ಸರಕಾರ ಶೇ. 60 ಹಾಗೂ ರಾಜ್ಯ ಸರಕಾರ ಶೇ.40 ಹಣ ಕೊಡುತ್ತದೆ ಎಂಬುದು ಅಧಿಕಾರಿಗಳ ಹೇಳಿಕೆ.
ಯೋಜನೆಯಡಿ ಆಯ್ಕೆಯಾದ ಗ್ರಾಮದಲ್ಲಿನ ಮುಖ್ಯ ಸಮಸ್ಯೆಗಳನ್ನು ಗುರುತಿಸಿ ಅದಕ್ಕೆ ಒತ್ತು ನೀಡಲಾಗುತ್ತಿದೆ. ಅದರಂತೆ ಕಂಗ್ರಾಳಿ ಬಿ ಕೆ ಗ್ರಾಮದಲ್ಲಿ ರಸ್ತೆ, ಬಸ್‌ ನಿಲ್ದಾಣ ಕಾಮಗಾರಿಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ.

Advertisement

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಮೂಲಕ ಕಂಗ್ರಾಳಿ ಬಿ ಕೆ ಗ್ರಾಮದಲ್ಲಿ ಈಗಾಗಲೇ ಸುಸಜ್ಜಿತ ಬಸ್‌ ನಿಲ್ದಾಣ ಕಾಮಗಾರಿ ಪೂರ್ಣಗೊಂಡಿದೆ. 140 ಸೋಲಾರ್‌ ದೀಪಗಳನ್ನು ಅಳವಡಿಸಲಾಗಿದೆ. ಸ್ಮಾರ್ಟ ಕ್ಲಾಸ್‌ ಮಾಡಲಾಗಿದೆ. ಆರೋಗ್ಯ ಉಪಕೇಂದ್ರದ ನಿರ್ಮಾಣ ಪ್ರಗತಿಯಲ್ಲಿದೆ. ಕಾಂಕ್ರಿಟ್‌ ರಸ್ತೆ ನಿರ್ಮಾಣ ಕಾಮಗಾರಿ ಭರದಿಂದ ನಡೆದಿದೆ. ಸ್ಮಾರ್ಟ್‌ಸಿಟಿ ಯೋಜನೆಯ ಮಾದರಿಯಲ್ಲಿ ರಸ್ತೆ ಬದಿಗೆ ಸೈಕಲ್‌ ಟ್ರಾಕ್‌ ನಿರ್ಮಾಣ ಮಾಡುವ ಯೋಜನೆಯಿದ್ದು ಇದರಿಂದ ಇಡೀ ಗ್ರಾಮಕ್ಕೆ ಹೊಸ ರೂಪವೇ ಬರಲಿದೆ.
ರಸ್ತೆ, ಸ್ಮಾರ್ಟ್‌ ಬಸ್‌ ನಿಲ್ದಾಣದ ಜೊತೆಗೆ ಈ ಯೋಜನೆಯಡಿ ಚರಂಡಿ, ಡಿಜಿಟಲ್‌ ಗ್ರಂಥಾಲಯ, ವೃತ್ತಿ ಕೌಶಲ ಕೇಂದ್ರಗಳನ್ನು ಸಹ ಗ್ರಾಮದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಎಲ್ಲ ಕಾಮಗಾರಿಗಳಿಗೆ ಮೂರು ವರ್ಷ ಕಾಲಮಿತಿ ನಿಗದಿಪಡಿಸಲಾಗಿದೆ ಎಂಬುದು ಎಂಬುದು ಪಿಡಿಒಗಳ ಹೇಳಿಕೆ.

ಅದೇ ರೀತಿ ಬೆಳಗಾವಿಯಿಂದ ಅನತಿ ದೂರದಲ್ಲಿ ಇರುವ ಕಂಗ್ರಾಳಿ ಖುರ್ದ ಗ್ರಾಮ ಈಗ ಹೊಸ ರೂಪ ಪಡೆದುಕೊಳ್ಳುತ್ತಿದೆ. ಕೆಲವು ವರ್ಷಗಳ ಹಿಂದೆ ಮಹಾರಾಷ್ಟ್ರ ರಾಜ್ಯ ನಾಮಫಲಕ ಹಾಕಿಕೊಂಡು ಕರ್ನಾಟಕದ ಜನರ ಕಂಗೆಣ್ಣಿಗೆ ಗುರಿಯಾಗಿದ್ದ ಬೆಳಗಾವಿ ತಾಲೂಕಿನ ಕಂಗ್ರಾಳಿ ಖುದ್‌ ಗ್ರಾಮದ ಜನರು ಈಗ ವಿವಾದಗಳಿಂದ ಹೊರಬಂದಿದ್ದಾರೆ. ದಿನನಿತ್ಯದ ಜೀವನಕ್ಕೆ ಅಭಿವೃದ್ಧಿ ಮುಖ್ಯ ಎಂಬುದನ್ನು ಮನಗಂಡಿರುವ ಗ್ರಾಮಸ್ಥರು ಸುಧಾರಣೆಯ ಕಡೆ ಆಸಕ್ತಿ ತೋರಿಸುತ್ತಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಮೂಲಕ ಕಂಗ್ರಾಳಿ ಖುರ್ದ ಗ್ರಾಮದಲ್ಲಿ ಈಗಾಗಲೇ ಕಾಂಕ್ರಿಟ್‌ ರಸ್ತೆ ನಿರ್ಮಾಣ ಕಾಮಗಾರಿ ಭರದಿಂದ ನಡೆದಿದೆ. ಸ್ಮಾರ್ಟ್ ಸಿಟಿ ಯೋಜನೆಯ ಮಾದರಿಯಲ್ಲಿ ರಸ್ತೆ ಬದಿಗೆ
ಸೈಕಲ್‌ ಟ್ರಾಕ್‌ ನಿರ್ಮಾಣ ಮಾಡುವ ಉದ್ದೇಶವಿದೆ. ರಸ್ತೆ, ಸ್ಮಾರ್ಟ್‌ ಬಸ್‌ ನಿಲ್ದಾಣದ ಜೊತೆಗೆ ಈ ಯೋಜನೆಯಡಿ ಚರಂಡಿ, ಡಿಜಿಟಲ್‌ ಗ್ರಂಥಾಲಯ, ಆರೋಗ್ಯ ಉಪಕೇಂದ್ರ, ಸೋಲಾರ್‌ ದೀಪಗಳು, ಸ್ಮಾರ್ಟ ಕ್ಲಾಸ್‌, ವೃತ್ತಿ ಕೌಶಲ ಕೇಂದ್ರಗಳನ್ನು ಸಹ ಗ್ರಾಮದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಜಾಗದ ಸಮಸ್ಯೆಗಳಿಂದ ಉಳಿದ ಕಾಮಗಾರಿಗಳು ಇನ್ನೂ ನಿರೀಕ್ಷಿತ ವೇಗ ಪಡೆದುಕೊಂಡಿಲ್ಲ. ಈ ಎಲ್ಲ ಕಾಮಗಾರಿಗಳಿಗೆ 3 ವರ್ಷ ಕಾಲಮಿತಿ ನಿಗದಿಪಡಿಸಲಾಗಿದೆ.

*ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next