ಬೆಳಗಾವಿ: ನಗರದ ಜೆಎನ್‌ಎಂಸಿ ಆವರಣದಲ್ಲಿರುವ ಸುವರ್ಣ ಈಜುಕೊಳದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ, ಜಿಲ್ಲಾ ಆಯುಷ್ ಇಲಾಖೆ ಹಾಗೂ ಕೆಎಲ್ಇ ವಿಶ್ವವಿದ್ಯಾಲಯ ಸಹಯೋಗದಲ್ಲಿ ಯೋಗ ದಿನಾಚರಣೆ ನಿಮಿತ್ತ ಶುಕ್ರವಾರ ಜಲಯೋಗ ಕಾರ್ಯಕ್ರಮ ನಡೆಯಿತು.
ಕೆಎಲ್ಇ ಈಜು ತರಬೇತುದಾರ ಉಮೇಶ ಕಲಘಟಗಿ ಜಲಯೋಗದಲ್ಲಿ ವಜ್ರಾಸನ, ಉಷ್ಟ್ರಾಸನ, ಪವನಮುಕ್ತಾಸನ, ಭುಜಂಗಾಸನ, ಉತ್ಥಾನ ಪಾದಾಸನ, ಶವಾಸನ, ಕಾಳಾಸನ, ತಾರಾಸನ, ಹನುಮಾನಾಸನ, ಪದ್ಮಾಸನ, ಜ್ಞಾನ ಯೋಗ, ನಿತ್ಯಾಸನ, ಧನುರಾಸನ, ಕೃಷ್ಣಾಸನ, ಮಚ್ಚಾಸನ, ಹಂಸಾಸನ, ಅರ್ಧ ಜಲಾಸನ, ಬಾಲಾಸನ, ಭದ್ರಾಸನಗಳನ್ನು ಪ್ರದರ್ಶಿಸಿದರು.
ಮಾಹೇಶ್ವರಿ ಅಂಧ ಮಕ್ಕಳ ಶಾಲಾ ವಿದ್ಯಾರ್ಥಿಗಳು ಸೂರ್ಯ ನಮಸ್ಕಾರ, ವಿರಾಸನ, ವೃಕ್ಷಾಸನ, ಅರ್ಧ ಚಕ್ರಾಸನ, ಸೂಕ್ತ ವೀರಾಸನಾ, ಉಷ್ಟ್ರಾಸನ, ಪಶ್ಚಿಮೋತ್ಥಾಸನ, ಧನುರಾಸನ, ಚಕ್ರಾಸನ ಪ್ರದರ್ಶಿಸಿದರು.
28 ಅಂತಾರಾಷ್ಟ್ರೀಯ ಪದಕ ಪಡೆದ ರಾಘವೇಂದ್ರ ಅನ್ವೇಕರ ಹಾಗೂ ಮೊಯಿನ್ ಜುನೇದಿ, 3 ಅಂತಾರಾಷ್ಟ್ರೀಯ ಪದಕ ಪಡೆದ ಸಿಮ್ರಾನ ಗೌಂಡಾಲ್ಕರ ಹಾಗೂ ರೋಹನ್ ತಾರಿಹಾಳಕರ, ಸಂಜಯ ಹಂಚಿನಮನಿ ಅವರು ಈಜು ಕೊಳದಲ್ಲಿ ವಿವಿಧ ಪ್ರಕಾರದ ಜಲಯೋಗ ಪ್ರದರ್ಶನ ಮಾಡಿದರು.
ಉತ್ತಮ ಜಲಯೋಗ ಮಾಡಿದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕೆಎಲ್ಇ ವಿವಿ ಕುಲಪತಿ ವಿವೇಕ ಸಾವೋಜಿ, ಜಿಲ್ಲಾ ಆಯುಷ ಅಧಿಕಾರಿ ಡಾ| ಸುರೇಶ ದೊಡವಾಡ, ಶ್ರೀಕಾಂತ ಸುನಧೋಳಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಕೆಎಲ್ಇ ಈಜು ಕೊಳದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.