Advertisement

Belagavi Winter Session: ಮೊದಲ ವಾರವೇ ಉತ್ತರ ಕರ್ನಾಟಕ ಚರ್ಚೆ ನಡೆಯಲಿ

01:05 AM Dec 06, 2024 | Team Udayavani |

ಬೆಳಗಾವಿ: ಉತ್ತರ ಕರ್ನಾಟಕದ ಸಮಸ್ಯೆ- ಸವಾಲುಗಳಿಗೆ ಪರಿಹಾರ ಹುಡುಕುವ ಉದ್ದೇಶದಿಂದ ಬೆಳಗಾವಿ ಯಲ್ಲಿ ನಡೆಯುತ್ತಿರುವ ಚಳಿ ಗಾಲದ ಅಧಿವೇಶನ ದಾರಿ ತಪ್ಪದಂತೆ ನೋಡಿಕೊಳ್ಳಬೇಕಿದೆ. ಪ್ರತೀ ವರ್ಷ ಇಲ್ಲಿ ಉತ್ತರ ಕರ್ನಾಟಕದ ವಿಷಯಗಳು ಕೊನೆಯ ಎರಡು ದಿನಗಳಲ್ಲಿ ಕಾಟಾಚಾರಕ್ಕೆ ಎಂಬಂತೆ ಚರ್ಚೆಗೆ ಬರುತ್ತವೆ. ಆದರೆ ಈ ಬಾರಿ ಯಿಂದಲಾದರೂ ಮೊದಲ ವಾರವನ್ನು ಅದಕ್ಕೆ ಮೀಸಲಿಡಬೇಕು ಎಂದು ಉತ್ತರ ಕರ್ನಾಟಕದ ಶಾಸಕರು, ರಾಜಕೀಯ ನಾಯಕರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಆಗ್ರಹಿಸಿದ್ದಾರೆ.

Advertisement

ಸೋಮವಾರದಿಂದ ಕಲಾಪ ನಡೆಯಲಿದೆ. ಅಧಿ ವೇಶನದ ಮೊದಲ ವಾರದಲ್ಲೇ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು ಎಂಬ ಆಗ್ರಹ ಕಳೆದ ವರ್ಷವೇ ಕೇಳಿಬಂದಿತ್ತು.

ಅದಕ್ಕೆ ಪರಿಹಾರ ರೂಪಿಸ ಬೇಕು ಎಂಬ ಆಗ್ರಹಗಳು ಕೇಳಿ ಬಂದಿದ್ದವು. ಆಗ ಸರಕಾರ ಇದಕ್ಕೆ ಮನಸ್ಸು ಮಾಡಿರಲಿಲ್ಲ. ಹೀಗಾಗಿ ಕೊನೆಯ ವಾರದಲ್ಲಿ ಎರಡು ದಿನ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದರೂ ಪ್ರಯೋಜನವಾಗಲಿಲ್ಲ. ಕೊನೆಯ ದಿನಗಳಲ್ಲಿ ಶಾಸಕರ ಹಾಜರಾತಿಯೂ ಕಡಿಮೆ ಇರುತ್ತದೆ ಹಾಗೂ ಚರ್ಚೆಗಳೂ ಗಂಭೀರವಾಗಿ ನಡೆಯುವುದಿಲ್ಲ.

ಈ ವರ್ಷ ಚಳಿಗಾಲದ ಅಧಿವೇಶನವನ್ನು 10 ದಿನಗಳ ಬದಲು ಒಂಬತ್ತು ದಿನಕ್ಕೆ ಕಡಿತಗೊಳಿಸಲಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಎರಡನೇ ವಾರ ಎಷ್ಟು ಶಾಸಕರು ಅಧಿವೇಶನದಲ್ಲಿ ಇರುತ್ತಾರೆ ಎಂಬ ಅನುಮಾನಗಳು ಇವೆ. ಇದೇ ಕಾರಣದಿಂದ ಅಧಿವೇಶನದ ಮೊದಲ ವಾರದಲ್ಲೇ ಉತ್ತರ ಕರ್ನಾ ಟಕದ ಸಮಸ್ಯೆ ಬಗ್ಗೆ ಚರ್ಚೆ ಕೈಗೆತ್ತಿಕೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.

ಅಧಿವೇಶನದ ಮೊದಲ ವಾರದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆ ನಡೆದರೆ ಬಹುತೇಕ ಎಲ್ಲ ಶಾಸಕರು ಕಲಾಪದಲ್ಲಿ ಭಾಗಿಯಾಗಿ ಸರಕಾರದ ಮೇಲೆ ಇಲ್ಲಿಯ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಬಹುದು. ಅರ್ಥಪೂರ್ಣ ಚರ್ಚೆಯಾಗ ಬಹುದು. ಸರಕಾರಕ್ಕೂ ಇದರ ಗಂಭೀರತೆಯ ಅರಿವಾಗಬಹುದು ಎಂಬುದು ಈ ಭಾಗದ ಜನರ ನಿರೀಕ್ಷೆ. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಒಂದು ಕಡೆ ಜನಪ್ರತಿನಿಧಿಗಳು, ಹಿರಿಯ ರಾಜಕೀಯ ನಾಯಕರು ಸರಕಾರದ ಮೇಲೆ ಒತ್ತಡ ಹಾಕುತ್ತಿದ್ದರೆ ಇನ್ನೊಂದು ಕಡೆ ಉತ್ತರ ಕರ್ನಾಟಕದ ಹೋರಾಟಗಾರರು ಮತ್ತು ವಿವಿಧ ಸಂಘಟನೆಗಳು ಕೂಡ ಅಧಿವೇಶನದ ಮೊದಲ ವಾರವೇ ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು ಎಂದು ಹಕ್ಕೊತ್ತಾಯ ಮಂಡಿಸಿದ್ದಾರೆ.

Advertisement

ಗೋಗರೆಯುವ ಸ್ಥಿತಿ
ಪ್ರತೀ ಬಾರಿ ಚಳಿಗಾಲದ ಅಧಿವೇಶನ ವೇಳೆ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಬೇಕು. ಇಲ್ಲಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೊಡಬೇಕು ಎಂದು ಈ ಭಾಗದ ಜನಪ್ರತಿನಿಧಿಗಳು ಮತ್ತು ವಿವಿಧ ಸಂಘಟನೆಗಳು ಹೋರಾಟ ಮಾಡುವುದು ವಿಪರ್ಯಾಸ. ಕಳೆದ ಅಧಿವೇಶನದ ಒಂಬತ್ತನೇ ದಿನದ ಕಲಾಪದಲ್ಲಿ ಹಿರಿಯ ನಾಯಕರಾದ ಎಚ್‌.ಕೆ. ಪಾಟೀಲ್‌ ಅವರು ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳು ಎಂದರೆ ಹಾಸ್ಯಾಸ್ಪದ ವಿಷಯವಾಗಿದೆ ಎಂದು ಹೇಳಿದ್ದು ಅಂಗೈ ಹುಣ್ಣಿಗೆ ಕನ್ನಡಿ ಹಿಡಿದಂತಿತ್ತು.ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ನಡೆಯುತ್ತದೆ ಎಂದಾಗ ಉತ್ತರ ಕರ್ನಾಟಕ ಭಾಗದ ಜನರು ಸರಕಾರದ ಕಡೆ ಬಹಳ ಕಾತರ ದಿಂದ ನೋಡುತ್ತಾರೆ.

ಉತ್ತರ ಕರ್ನಾಟಕದಲ್ಲಿ ಸಮಸ್ಯೆ ಗಳಿಗೆ ಕೊರತೆ ಇಲ್ಲ. ರಾಜಕೀಯ ಕೆಸೆರೆರಚಾಟದಲ್ಲಿ ಈ ಭಾಗದ ಮಹತ್ವಾಕಾಂಕ್ಷೆಯ ಕಳಸಾ ಬಂಡೂರಿ ಯೋಜನೆ ಕಳೆದು ಹೋಗಿದೆ. ಮೇಕೆದಾಟು, ಎತ್ತಿನಹೊಳೆಗೆ ಸಿಗುವ ಪ್ರಾಮುಖ್ಯ ಕಳಸಾ ಯೋಜನೆಗೆ ಸಿಕ್ಕಿಲ್ಲ. ಖೀಳೇಗಾಂವ್‌ ಬಸವೇಶ್ವರ ಯೋಜನೆ ಕುಂಟುತ್ತಲೇ ಇದೆ. ರಾಣಿ ಚನ್ನಮ್ಮ ವಿ.ವಿ. ಅನುದಾನ ಕೊರತೆಯಿಂದ ಬಳಲುತ್ತಿದೆ. 18 ವರ್ಷಗಳಿಂದ ನ್ಯಾಯಯುತ ಬೆಲೆಗಾಗಿ ಹೋರಾಡುತ್ತಿರುವ ಕಬ್ಬು ಬೆಳೆಗಾರರು ಇನ್ನೂ ನೆಮ್ಮದಿ ಕಂಡಿಲ್ಲ. ಸರಕಾರಿ ಆಸ್ಪತ್ರೆ, ಶಾಲೆಗಳ ಸ್ಥಿತಿ ಕೂಡ ಭಿನ್ನವಾಗಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲು ಈ ಅಧಿವೇಶನ ಫ‌ಲ ಕೊಡಲಿ ಎಂಬುದು ಎಲ್ಲರ ಒತ್ತಾಸೆ.

ಮೊದಲ ವಾರವೇ ಉತ್ತರ ಕರ್ನಾಟಕ ಕುರಿತ ಚರ್ಚೆ ಸೂಕ್ತ. ಇದರಿಂದ ಈ ಭಾಗದವರು ಸೇರಿದಂತೆ ಎಲ್ಲ ಶಾಸಕರಿಗೆ ಸಲಹೆ ನೀಡಲು ಸಾಧ್ಯವಾಗಲಿದೆ.
– ಬಿ.ಆರ್‌. ಪಾಟೀಲ್‌, ಆಳಂದ ಶಾಸಕ

ಉತ್ತರ ಕರ್ನಾಟಕ ಸಮಸ್ಯೆಗಳು, ಬೇಡಿಕೆ, ಅಭಿವೃದ್ಧಿ ಚರ್ಚೆಗೆ 3-4 ದಿನ ಮೊದಲೇ ಸಮಯ ನಿಗದಿ ಪಡಿಸಲಿ. ಇದು ಬೆಳಗಾವಿಯಲ್ಲಿ ನಡೆಯುವ ಪ್ರತೀ ವರ್ಷದ ಪರಿಪಾಠ ಆಗಲಿ.
– ಅರವಿಂದ ಬೆಲ್ಲದ, ವಿಪಕ್ಷ ಉಪನಾಯಕ

ಡಿ. 9ರಿಂದ ಬೆಳಗಾವಿ ಬೆಂಗಳೂರು ವಿಶೇಷ ವಿಮಾನ
ಚಳಿಗಾಲದ ಅಧಿವೇಶನದ ಹಿನ್ನೆಲೆಯಲ್ಲಿ ಇಂಡಿಗೋ ಏರ್‌ಲೈನ್ಸ್‌ ಸಂಸ್ಥೆಯು ಡಿ. 9ರಿಂದ 19ರ ವರೆಗೆ ಬೆಳಗಾವಿ-ಬೆಂಗಳೂರು ನಡುವೆ ವಿಶೇಷ ವಿಮಾನ ಸಂಚಾರವನ್ನು ಪ್ರಾರಂಭಿಸಲು ನಿರ್ಧರಿಸಿದೆ.

ಡಿ. 9ರಿಂದ ಬೆಂಗಳೂರಿನಿಂದ ಬೆಳಗ್ಗೆ 6ಕ್ಕೆ ಹೊರಟು ಬೆಳಗಾವಿಗೆ 7 ಗಂಟೆಗೆ ತಲುಪಲಿದೆ. ಬೆಳಗಾವಿಯಿಂದ ಬೆಳಗ್ಗೆ 7.30ಕ್ಕೆ ಹೊರಟು ಬೆಂಗಳೂರಿಗೆ 8.30ಕ್ಕೆ ತಲುಪಲಿದೆ.

ಡಿ. 20ರ ಅನಂತರ ಈ ವಿಮಾನ ಸೇವೆಗಳು ಯಥಾಸ್ಥಿತಿ ಮುಂದುವರಿಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next