Advertisement

ಅಧ್ಯಯನ- ಸಮಿತಿ ಇಲ್ಲದೇ ವಿಭಜನೆ?

10:11 AM Feb 17, 2019 | Team Udayavani |

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಭಜನೆ ವಿಷಯವಾಗಿ ಗಡಿ ಭಾಗದಲ್ಲಿ ಹತ್ತಿಕೊಂಡಿರುವ ಆಕ್ರೋಶದ ಬೆಂಕಿ ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿದೆ. ರಾಜಕೀಯ ಆರೋಪಗಳು ಆರಂಭವಾಗಿವೆ.

Advertisement

ಆರಂಭದಲ್ಲಿ ಬೆಳಗಾವಿಗೆ ಮಾತ್ರ ಸೀಮಿತವಾಗಿದ್ದ ಹೋರಾಟ ನಿಧಾನವಾಗಿ ಎಲ್ಲ ಕಡೆ ವಿಸ್ತರಿಸುತ್ತಿದೆ. ದೇಶದ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ಯಾವುದೇ ತಜ್ಞರ ಸಮಿತಿ ರಚನೆ ಮಾಡದೆ ಅದರ ಸಾಧಕ ಬಾಧಕಗಳ ಬಗ್ಗೆ ಅಧ್ಯಯನ ಮಾಡಿ ವರದಿ ತರಿಸಿಕೊಳ್ಳದೇ ವಿಭಜನೆ ಮಾಡುವ ಪ್ರಯತ್ನ ನಡೆದಿದೆಯೇ ಇಂತಹ ಹತ್ತಾರು ಪ್ರಶ್ನೆಗಳು ಈಗ ಹೋರಾಟಗಾರರಲ್ಲಿ ಮೂಡಿದ್ದು ಸಮ್ಮಿಶ್ರ ಸರಕಾರವನ್ನು ಅನುಮಾನದಿಂದ ನೋಡುವಂತೆ ಮಾಡಿದೆ.

ಬೆಳಗಾವಿಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ವಿಭಜನೆ ಮಾಡಲು ವಿಶ್ವವಿದ್ಯಾಲಯದ ಕಾನೂನಿನಲ್ಲಿ ಅವಕಾಶ ಇಲ್ಲ ಎಂಬುದು ಗೊತ್ತಿದ್ದರೂ ಇಂತಹ ಪ್ರಯತ್ನ ಸರಕಾರದಿಂದ ಯಾವುದಕ್ಕೆ ನಡೆಯಿತು. ಇದಕ್ಕೆ ಮೂಲ ಕಾರಣರು ಯಾರು ಹಾಗೂ ಏನು ಎಂಬುದರ ಬಗ್ಗೆ ಈಗ ಚರ್ಚೆಗಳು ಆರಂಭವಾಗಿವೆ.

ವಿಶ್ವವಿದ್ಯಾಲಯದ ವಿಭಜನೆ ಅಥವಾ ಹಾಸನದಲ್ಲಿ ಹೊಸ ತಾಂತ್ರಿಕ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವ ಸಂಬಂಧ ಯಾವುದೇ ಸಮಿತಿ ರಚನೆ ಮಾಡಿಲ್ಲ. ಅದರಿಂದಾಗುವ ಸಾಧಕ-ಬಾಧಕಗಳ ಕುರಿತು ಅಧ್ಯಯನ ನಡೆದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ವಿಭಜನೆ ಮಾಡುವುದು ಸಾಧುವಲ್ಲ ಎಂದು ಕುಲಪತಿಗಳೇ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಹೀಗಿರುವಾಗ ಏಕಾಏಕಿ ವಿವಿ ವಿಭಜನೆ ಪ್ರಸ್ತಾಪ ಮಾಡಿರುವುದು ಮುಖ್ಯಮಂತ್ರಿಗಳು ಹಾಗೂ ಅವರ ಸಹೋದರ ರೇವಣ್ಣ ಅವರನ್ನು ಅನುಮಾನದಿಂದ ನೋಡುವಂತೆ ಮಾಡಿದೆ. ಬಜೆಟ್‌ ಅಧಿವೇಶನದ ಕೊನೆಯ ದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕಲಾಪದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಭಜನೆ ಪ್ರಸ್ತಾಪ ಕೈಬಿಡಲಾಗಿದೆ ಎಂದು ಘೋಷಣೆ ಮಾಡಬಹುದು ಎಂದು ಉತ್ತರ ಕರ್ನಾಟಕ ಭಾಗದ ಶಾಸಕರು ಹಾಗೂ ಹೋರಾಟಗಾರರು ಭಾವಿಸಿದ್ದರು. ಆದರೆ ವಿಧಾನಸಭೆ ಹಾಗೂ ವಿಧಾನಪರಿಷತ್‌ನಲ್ಲಿ ಮುಖ್ಯಮಂತ್ರಿಗಳು ಯಾವುದೇ ಉತ್ತರ ನೀಡದೇ ವಿವಾದ ಜೀವಂತವಾಗಿರುವಂತೆ ಮಾಡಿದ್ದು ಈ ಭಾಗದ ಜನರಲ್ಲಿ ನಿರಾಸೆ ಉಂಟುಮಾಡಿದೆ.

ಒಂದು ಮೂಲದ ಪ್ರಕಾರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕೆಲ ಹಿರಿಯ ಅಧಿಕಾರಿಗಳ ಮೂಲಕ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ವರದಿ ಪಡೆದುಕೊಂಡಿದ್ದಾರೆ. ಅದರ ಆಧಾರದ ಮೇಲೆಯೇ ಮುಖ್ಯಮಂತ್ರಿಗಳು ಬಜೆಟ್‌ ನಲ್ಲಿ ಇದನ್ನು ಪ್ರಸ್ತಾಪಿಸಿದ್ದಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವ್ಯಾಪ್ತಿಯ ಈ ಅಧಿಕಾರಿಗಳು ರೇವಣ್ಣ ಅವರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.

Advertisement

ಯಾವುದೇ ಒಂದು ವಿಶ್ವವಿದ್ಯಾಲಯ ವಿಭಜನೆ ಮಾಡುವ ಮೊದಲು ಅದಕ್ಕೆ ಸಮಿತಿ ರಚನೆ ಮಾಡಿ ಅದರಿಂದ ಅಧ್ಯಯನ ನಡೆಸಿ ವರದಿ ತರಿಸಿಕೊಳ್ಳಬೇಕು. ಯಾವ ಪ್ರದೇಶದ ಯಾವ ಕಾಲೇಜುಗಳನ್ನು ಹೊಸ ವಿವಿ ವ್ಯಾಪ್ತಿಗೆ ಒಳಪಡಿಸಬೇಕು. ಈಗಿರುವ ವಿಶ್ವವಿದ್ಯಾಲಯದಲ್ಲಿ ಯಾವ ಪ್ರದೇಶದ ಕಾಲೇಜುಗಳನ್ನು ಮುಂದುವರಿಸಬೇಕು ಎಂಬುದರ ಬಗ್ಗೆ ಅಭಿಪ್ರಾಯ ಪಡೆದುಕೊಳ್ಳಬೇಕು. ಇದಕ್ಕೆ ಆಯಾ ಕಾಲೇಜುಗಳ ಸಹಮತ ಕೂಡ ಬಹಳ ಮುಖ್ಯ. ಆದರೆ ಇದಾವುದೂ ನಡೆಯದೇ ತರಾತುರಿಯಲ್ಲಿ ವಿಭಜನೆ ಪ್ರಸ್ತಾಪ ಮಂಡಿಸಲಾಗಿದೆ. ಇದು ತಾಂತ್ರಿಕ ವಿ ವಿ ಕಾನೂನಿಗೆ ವಿರುದ್ಧವಾದುದು ಎಂಬುದು ರಾಣಿ ಚನ್ನಮ್ಮ ವಿವಿ ಸಿಂಡಿಕೇಟ್‌ ಸದಸ್ಯ ಹಾಗೂ ಬಿಜೆಪಿ ಮುಖಂಡ ರಾಜು ಚಿಕ್ಕನಗೌಡರ ಆಭಿಪ್ರಾಯ. ಕಳೆದ ಡಿಸೆಂಬರ್‌ನಲ್ಲಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಹಾಗೂ ವಿಟಿಯು ಕುಲಸಚಿವರಿಗೆ ಪತ್ರ ಬರೆದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ಬೆಂಗಳೂರು ವಿವಿ ವಿಭಜಿಸಿದ ರೀತಿಯಲ್ಲಿ ವಿಭಜಿಸಿ ವಿಶ್ವೇಶ್ವರಯ್ಯನವರ ಹುಟ್ಟೂರಾದ ಮುದ್ದೇನಹಳ್ಳಿಯಲ್ಲಿ ಸ್ಥಾಪಿಸುವ ಸಂಬಂಧ ಸ್ಪಷ್ಟವಾದ ಅಭಿಪ್ರಾಯ ಸಲ್ಲಿಸುವಂತೆ ತಿಳಿಸಿದ್ದರು. ಇದರ ಜೊತೆಗೆ ಕೃಷಿ, ಗ್ರಾಮೀಣಾಭಿವೃದ್ಧಿ ಸಚಿವರು, ಕೋಲಾರ, ಚಿಂತಾಮಣಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಮಾಲೂರು, ಬಂಗಾರಪೇಟೆ ಹಾಗೂ ಮುಳಬಾಗಿಲು ಕ್ಷೇತ್ರಗಳ ಶಾಸಕರ ಪತ್ರಗಳನ್ನು ಸಹ ಸಲ್ಲಿಸಲಾಗಿತ್ತು. 

ಆದರೆ ಈ ವಿಭಜನೆ ಪ್ರಸ್ತಾಪಕ್ಕೆ ಆಗಲೇ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿಟಿಯು ಕುಲಸಚಿವರು ವಿಭಜನೆ ಮಾಡುವುದು ಬೇಡ ಎಂದು ಸಲ್ಲಿಸಿದ ಪತ್ರವನ್ನು ಪರಿಗಣಿಸಿ ಉನ್ನತ ಶಿಕ್ಷಣ ಇಲಾಖೆ ಪ್ರಧಾನ
ಕಾರ್ಯದರ್ಶಿಗಳು ಮರು ಪತ್ರ ಬರೆದು ಸರಕಾರದ ಮುಂದಿನ ನಿರ್ದೇಶನ ಬರುವವರೆಗೆ ಯಾವುದೇ
ಪ್ರಕ್ರಿಯೆ ಕೈಗೊಳ್ಳಬಾರದು ಎಂದು ಸೂಚಿಸಿದ್ದರು.

ಇದು ಅಲ್ಲಿಗೇ ತಣ್ಣಗಾಗಿತ್ತು. ಆದರೆ ಬಜೆಟ್‌ನಲ್ಲಿ ಕುಮಾರಸ್ವಾಮಿ ಅನಿರೀಕ್ಷಿತ ಎಂಬಂತೆ ಈ ವಿಷಯ ಪ್ರಸ್ತಾಪ ಮಾಡಿದ್ದು ಗಡಿ ಭಾಗದಲ್ಲಿ ಪ್ರತಿಭಟನೆಯ ಕಿಡಿಹೊತ್ತಲು ಕಾರಣವಾಯಿತು. ವಿಟಿಯು ವಿಭಜನೆ ಮಾಡಬಾರದು ಎಂದು ಸ್ವತಃ ಕುಲಪತಿ ಕರಿಸಿದ್ದಪ್ಪ ಅವರೇ ಸರಕಾರಕ್ಕೆ ವರದಿ ನೀಡಿದ್ದಾರೆ. ಮೇಲಾಗಿ ಉನ್ನತ ಶಿಕ್ಷಣ ಇಲಾಖೆ ಸಹ ವಿಭಜನೆ ಪರವಾಗಿಲ್ಲ. ಇಷ್ಟಾದರೂ ಸರಕಾರ ಆತುರದಲ್ಲಿ ಇಂತಹ ಪ್ರಯತ್ನಕ್ಕೆ ಕೈಹಾಕಿದೆ. ಎಷ್ಟೇ ಪ್ರಯತ್ನ ಪಟ್ಟರೂ ವಿಟಿಯು ವಿಭಜನೆ ಮಾಡಲು ಬರುವುದಿಲ್ಲ ಎಂದು ಮಾಜಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.

ಎಚ್‌ ಡಿ ಕುಮಾರಸ್ವಾಮಿ ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ ಅದರಲ್ಲಿ ಸ್ಪಷ್ಟತೆ ಕಾಣುತ್ತಿಲ್ಲ. ರೇವಣ್ಣ ಅವರನ್ನು ಕೇಳದೇ ಯಾವುದೇ ನಿರ್ಧಾರ ಕೈಗೊಳ್ಳದ ಸ್ಥಿತಿಯಲ್ಲಿ ಮುಖ್ಯಮಂತ್ರಿಗಳಿದ್ದಾರೆ. ಉತ್ತರ ಕರ್ನಾಟಕದ ಸಚಿವರು ಹಾಗೂ ಶಾಸಕರು ನಾವು ಒಟ್ಟಾಗಿ ಭೇಟಿ ಮಾಡಿದಾಗ ಸಿ ಎಂ ಅವರು ವಿಭಜನೆ ಪ್ರಸ್ತಾಪ ಕೈಬಿಡುವುದಾಗಿ ಭರವಸೆ ನೀಡಿದ್ದರು. ಆದರೆ ಅಧಿವೇಶನದಲ್ಲಿ ಇದು ಹೇಳಿಕೆಯಾಗಿ ಬರಲಿಲ್ಲ. ಹೀಗಾಗಿ ನಮಗೆ ಈಗಲೂ ಅನುಮಾನ ಉಳಿದಿದೆ. ಇದು ತಾರ್ಕಿಕ ಅಂತ್ಯ ಕಾಣುವವರೆಗೆ ನಾವು ಹೋರಾಟ ಕೈಬಿಡುವುದಿಲ್ಲ.
. ಮಹಾಂತೇಶ ಕವಟಗಿಮಠ,
  ಮುಖ್ಯ ಸಚೇತಕರು, ಪ್ರತಿಪಕ್ಷ ವಿಧಾನಪರಿಷತ್‌

ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ವಿಭಜನೆ ಮಾಡುವುದು ಸುಲಭದ ಕೆಲಸ ಆಲ್ಲ. ಅದಕ್ಕೆ ಮುಖ್ಯವಾಗಿ ಕುಲಾಧಿಪತಿಯಾಗಿರುವ ರಾಜ್ಯಪಾಲರ ಅನುಮತಿ ಬೇಕು. ಇದರ ಜೊತೆಗೆ ಸರಕಾರಕ್ಕೆ ಯಾವುದಾದರೂ ಒಂದು ಸಮಿತಿ ಅದರ ಅಧ್ಯಯನ ಮಾಡಿ ವರದಿ ನೀಡಬೇಕು. ವಿವಿ ಕಾರ್ಯಕಾರಿ ಮಂಡಳಿಯಲ್ಲಿ ವಿಭಜನೆಯ ಕುರಿತು ಚರ್ಚೆ ಆಗಬೇಕು. ಆದರೆ ಇದಾವುದೂ ಆಗಿಲ್ಲ. ಎಲ್ಲವೂ ಒಬ್ಬರ ಅಣತಿಯಂತೆ ನಡೆಯುತ್ತಿದೆ.
. ರಾಜು ಚಿಕ್ಕನಗೌಡರ,
 ಸಿಂಡಿಕೇಟ್‌ ಸದಸ್ಯ, ರಾಣಿ ಚನ್ನಮ್ಮ ವಿವಿ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಭಜನೆ ಕುರಿತಂತೆ ಸರಕಾರದಿಂದ ಯಾವುದೇ ಸಮಿತಿ ರಚನೆ ಆಗಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಅಧ್ಯಯನ ಸಹ ನಡೆದಿಲ್ಲ. ಈ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇಲ್ಲ.
ಡಾ| ಎಚ್‌.ಎನ್‌.ಜಗನ್ನಾಥರೆಡ್ಡಿ,
ಕುಲಸಚಿವರು, ವಿಟಿಯು 

ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next