Advertisement

Belagavi: ಸರಣಿ ಸಾವಿನಿಂದ ಗ್ರಾಮಸ್ಥರು ಕಂಗಾಲು!

05:59 PM Nov 06, 2023 | Team Udayavani |

ಬೆಳಗಾವಿ: ರಾಮದುರ್ಗ ತಾಲೂಕಿನ ತುರನೂರ ಎಂಬ ಗ್ರಾಮದಲ್ಲಿ ಎರಡೂವರೆ ತಿಂಗಳ ಅವಧಿಯಲ್ಲಿ ಸುಮಾರು 30ಕ್ಕೂ ಅಧಿಕ ಜನ ಮೃತಪಟ್ಟಿರುವುದು ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿದೆ. ಗ್ರಾಮದ ಶ್ರೀ ದುರ್ಗಾದೇವಿ ಶಾಪದಿಂದ ಈ ಸರಣಿ ಸಾವುಗಳು ಸಂಭವಿಸಿವೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಆದರೆ ದೇವಿ ಶಾಪವೋ ಅಥವಾ ಕಾಕತಾಳಿಯೋ ಎಂಬುದು ಗೊತ್ತಾಗುತ್ತಿಲ್ಲ. ತುರನೂರ ಗ್ರಾಮದಲ್ಲಿ ಕೆಲ ದಿನಗಳಿಂದ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಬೇರೆ ಬೇರೆ ಕಾರಣದಿಂದ ಮೃತಪಟ್ಟಿದ್ದಾರೆ.

Advertisement

ಸಾವಿಗೆ ಕಾರಣಗಳು ತಿಳಿದು ಬಂದರೂ ಯಾಕೆ ಇಷ್ಟು ಸಾವುಗಳು ಸಂಭವಿಸುತ್ತಿವೆ ಎಂಬುದೇ ಯಕ್ಷಪ್ರಶ್ನೆವಾಗಿ ಕಾಡುತ್ತಿದೆ. ಒಂದೂವರೆ ತಿಂಗಳ ಹಿಂದೆ ಗ್ರಾಮದ ಶ್ರೀ ದುರ್ಗಾದೇವಿ ಮೂರ್ತಿ ವಿರೂಪಗೊಂಡಿತ್ತು. ದೇವಿಗೆ ತಲೆತಲಾಂತರದಿಂದ ಎಣ್ಣೆ ಎರೆಯುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಹೀಗಾಗಿ ಎಣ್ಣೆಯಲ್ಲಿ ದೇವಿ ಮೂರ್ತಿ ಜಿಡ್ಡುಗಟ್ಟಿತ್ತು. ದೇವಸ್ಥಾನದ ಪೂಜಾರಿ ದೇವಿ ಮೇಲಿನ ಜಿಡ್ಡು ತೆಗೆಯುವಾಗ ಮೂರ್ತಿ ತುಸು ಪ್ರಮಾಣದಲ್ಲಿ ಆಕಸ್ಮಿಕವಾಗಿ ವಿರೂಪಗೊಂಡಿದೆ. ಆ ನಂತರದಲ್ಲಿ ಗ್ರಾಮದಲ್ಲಿ ಪದೇ ಪದೇ ಸಾವು ಸಂಭವಿಸಿದ್ದು ದೇವಿ ಶಾಪದಿಂದಲೇ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ. ಕೂಡಲೇ ಗ್ರಾಮದ ಹಿರಿಯರು ಧಾರ್ಮಿಕ ಪಂಡಿತರನ್ನು ಭೇಟಿ ಮಾಡಿ ವಿಷಯ ತಿಳಿಸಿದ್ದಾರೆ.

ಆಗ ದೇವಸ್ಥಾನ, ಮೂರ್ತಿ ಸ್ವಚ್ಛಗೊಳಿಸಿ ಶುಭ ಮುಹೂರ್ತದಲ್ಲಿ ಹೋಮ-ಹವನ ಮಾಡಿದರೆ ಒಳ್ಳೆಯದಾಗಲಿದೆ ಎಂದು ಸಲಹೆ ನೀಡಿದ್ದಾರೆ. ಹೀಗಾಗಿ ಮೂರ್ನಾಲ್ಕು ದಿನಗಳಿಂದ ಸ್ವಚ್ಛತಾ ಕಾರ್ಯ ನಡೆದಿದ್ದು, ಕೆಲವೇ ದಿನಗಳಲ್ಲಿ ದೇವಸ್ಥಾನದಲ್ಲಿ ಹೋಮ-ಹವನ ನಡೆಸಲು ಜತೆಗೆ ನ.15ರಂದು ದೇವಿ ಜಾತ್ರೆ ನಡೆಸಲು ನಿರ್ಧರಿಸಿದ್ದಾರೆ ಎಂದು ಹಿರಿಯರು ಮಾಹಿತಿ ನೀಡಿದರು.

ಈ ಬಗ್ಗೆ ತಹಶೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ ಪ್ರತಿಕ್ರಿಯಿಸಿ, ಗ್ರಾಮದಲ್ಲಿ ಕೆಲ ತಿಂಗಳಿಂದ ಬೇರೆ ಬೇರೆ ಕಾರಣದಿಂದ ಜನರು ಮೃತಪಟ್ಟಿದ್ದಾರೆ. ಹೆಚ್ಚು ವಯಸ್ಸಾದವರೇ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇದೆ. ಯಾವುದಾದರೂ ಆರೋಗ್ಯ
ಸಮಸ್ಯೆ ಇದೆಯಾ? ಎಂಬುದರ ಬಗ್ಗೆ ಮಾಹಿತಿ ಪಡೆದು ಪರಿಶೀಲಿಸಿದ್ದೇವೆ. ರವಿವಾರದಿಂದ ಗ್ರಾಮದಲ್ಲಿ ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next