ಬೆಳಗಾವಿ: ಇಲ್ಲಿನ ಗಾಂಧಿಭವನದಲ್ಲಿ ನಡೆದ ಶ್ರೀಶೈಲ ಪೀಠದ ಜಗದ್ಗುರುಗಳ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ವೀರಶೈವ ಲಿಂಗಾಯತ ಒಳಪಂಗಡಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರ್ಪಡೆಗೆ ಹಕ್ಕೊತ್ತಾಯ ಮಾಡಲಾಯಿತು.
ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮಠಾಧೀಶರು ಒತ್ತಾಯಿಸಿದರು. ಶಿಫಾರಸು ಮಾಡಲು ವಿಳಂಬ ಮಾಡಿದರೆ ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ಹೋರಾಟ ಮಾಡುವ ನಿರ್ಣಯ ವೀರಶೈವ ಲಿಂಗಾಯತ ಮಠಾಧೀಶರು ಕೈಗೊಂಡರು.
ರಾಜ್ಯ ಸರ್ಕಾರ ಮಾಡುವ ಶಿಫಾರಸನ್ನು ತಕ್ಷಣವೇ ಅಂಗೀಕಾರ ಮಾಡಬೇಕೆಂದು ಕೇಂದ್ರಕ್ಕೂ ಒತ್ತಾಯ ಮಾಡಲಾಯಿತು. ದಾವಣಗೆರೆಯಲ್ಲಿ ನಡೆಯುವ ವೀರಶೈವ ಮಹಾಸಭಾದ ಸಮಾವೇಶದಲ್ಲಿ ಪ್ರತಿಭಟನೆಯ ದಿನಾಂಕ ಘೋಷಣೆ ಮಾಡಲು ನಿರ್ಧರಿಸಲಾಯಿತು.
ಶ್ರೀಶೈಲ ಪೀಠದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಜಗದ್ಗುರು, ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿಗಳು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
25ಕ್ಕೂ ಅಧಿಕ ವೀರಶೈವ ಲಿಂಗಾಯತ ಸ್ವಾಮೀಜಿಗಳು ಸಮಾವೇಶದಲ್ಲಿ ಭಾಗಿಯಾಗಿದ್ದರು. ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಶಾಸಕ ಮಹಾಂತೇಶ ಕೌಜಲಗಿ, ವಿಧಾನಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕರಾದ ಮಹಾದೇವಪ್ಪ ಯಾದವಾಡ, ಡಾ. ವಿಶ್ವನಾಥ ಪಾಟೀಲ ಸಮಾವೇಶದಲ್ಲಿ ಭಾಗಿಯಾಗಿದ್ದರು.