ಬೆಳಗಾವಿ: ಮಹಾನಗರದ ಮಾರ್ಕೆಟ್ ಪೊಲೀಸ್ ಠಾಣೆ ಆವರಣದಲ್ಲಿ ಪಾಳು ಬಿದ್ದ ಕಟ್ಟಡವನ್ನೇ ಬಳಸಿಕೊಂಡು ಸಿಇಎನ್(ಸೈಬರ್, ಎಕನಾಮಿಕ್, ನಾರ್ಕೋಟಿಕ್) ವಿಶೇಷ ಪೊಲೀಸ್ ಠಾಣೆ ಆರಂಭಿಸಿ ಮಂಗಳವಾರ ಮಹಾನಗರ ಪೊಲೀಸ್ ಆಯುಕ್ತ ಡಾ| ಡಿ.ಸಿ. ರಾಜಪ್ಪ ಉದ್ಘಾಟಿಸಿದರು.
ಇದಕ್ಕಿಂತ ಮುನ್ನ ನಗರ ಪೊಲೀಸ್ ಕಮಿಷನರ್ ಕಚೇರಿ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಇಎನ್(ಸಿಸಿಬಿ) ಪೊಲೀಸ್ ಠಾಣೆಗೆ ಹೊಸ ರೂಪ ಕೊಡಬೇಕೆಂಬ ಉದ್ದೇಶದಿಂದ ಮಾರ್ಕೆಟ್ ಪೊಲೀಸ್ ಠಾಣೆಯ ಪಕ್ಕದ ಆವರಣಕ್ಕೆ ಸ್ಥಳಾಂತರಿಸಿ ಹಳೆಯ ಕಟ್ಟಡವನ್ನೇ ನವೀಕರಣಗೊಳಿಸಿ ಬಳಸಿಕೊಳ್ಳಲಾಯಿತು.
ಕಟ್ಟಡ ಉದ್ಘಾಟಿಸಿ ಮಾತನಾಡಿದ ಡಾ| ಡಿ.ಸಿ. ರಾಜಪ್ಪ, ಬಹಳ ದಿನಗಳಿಂದ ಕಮಿಷನರ್ ಕಚೇರಿ ಆವರಣದಲ್ಲಿಯೇ ಈ ವಿಭಾಗ ಕಾರ್ಯ ನಿರ್ವಹಿಸುತ್ತಿತ್ತು. ತಮ್ಮ ಕಡೆ ಇದ್ದ ಸೌಲಭ್ಯಗಳನ್ನೇ ಬಳಸಿಕೊಳ್ಳಬೇಕೆಂಬ ಯೋಜನೆ ಹಾಕಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಮಾರ್ಕೆಟ್ ಆವರಣದ ಹಳೆಯ ಕಟ್ಟಡ ಉಪಯೋಗಿಸಿಕೊಳ್ಳಲಾಗಿದೆ. ಮಾರ್ಕೆಟ್ ಠಾಣೆ ವ್ಯಾಪ್ತಿಯ ಪ್ರದೇಶದಲ್ಲಿ ಅತಿ ಸೂಕ್ಷ್ಮ ಪ್ರದೇಶಗಳಿವೆ. ಇಲ್ಲಿ ಸಿಇಎನ್(ಸಿಸಿಬಿ) ವಿಭಾಗ ಆರಂಭಿಸುವುದರಿಂದ ಮಾರ್ಕೆಟ್ ಠಾಣೆಗೂ ಬಲ ಬರುತ್ತದೆ ಎಂದು ಹೇಳಿದರು. ಮಾರ್ಕೆಟ್ ಠಾಣೆ ಸುತ್ತಲೂ ಆಗಾಗ ಕೆಲವು ಅಹಿತಕರ ಘಟನೆಗಳು ಸಂಭವಿಸುತ್ತವೆ. ಜತೆಗೆ ಕಿಡಿಗೇಡಿಗಳು ಶಾಂತಿಗೆ ಭಂಗವನ್ನುಂಟು ಮಾಡುತ್ತಿರುತ್ತಾರೆ. ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಸಿಇಎನ್ (ಸಿಸಿಬಿ)ಠಾಣೆ ಹಾಗೂ ಮಾರ್ಕೆಟ್ ಠಾಣೆ ಒಂದೇ ಕಡೆ ಮಾಡಲಾಗಿದೆ. ಸಿಬ್ಬಂದಿಗಳ ಮಧ್ಯೆ ಸಮನ್ವಯತೆ ಸಾಧಿಸುವ ಯಾವುದೇ ಪರಿಸ್ಥಿತಿ ಎದುರಾದರೂ ಅದನ್ನು ಎದುರಿಸಲು ಅನುಕೂಲವಾಗುತ್ತದೆ. ಈ ವ್ಯಾಪ್ತಿಯಲ್ಲಿ ಪೊಲೀಸರ ಓಡಾಟ ಹೆಚ್ಚಾಗುವುದರಿಂದ ಠಾಣೆಗೆ ಬಲ ಸಿಕ್ಕಂತಾಗುತ್ತದೆ ಎಂದರು.
ಸಿಇಎನ್ (ಸಿಸಿಬಿ) ಠಾಣೆಯ ಕೆಲವು ಸಿಬ್ಬಂದಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಮಾರ್ಕೆಟ್ ಠಾಣೆ ವ್ಯಾಪ್ತಿಯಲ್ಲಿ ಕೇಸುಗಳು ಹೆಚ್ಚಾದಾಗ, ಸಮಾಜ ಘಾತುಕ ಶಕ್ತಿಗಳ ಸದೆ ಬಡೆಯಲು ಅಗತ್ಯ ಬಿದ್ದರೆ ಸಿಇಎನ್(ಸಿಸಿಬಿ) ಹಾಗೂ ಮಾರ್ಕೆಟ್ ಠಾಣೆಯ ಸಿಬ್ಬಂದಿಗಳು ಕೂಡಿಯೇ ಕೆಲಸ ನಿರ್ವಹಿಸಬಹುದಾಗಿದೆ ಎಂದು ಹೇಳಿದರು.
ಕಾನೂನು ಸುವ್ಯವಸ್ಥೆ ವಿಭಾಗ ಡಿಸಿಪಿ ಸೀಮಾ ಲಾಟ್ಕರ್, ಅಪರಾಧ ವಿಭಾಗ ಡಿಸಿಪಿ ಮಹಾನಿಂಗ ನಂದಗಾಂವಿ, ನಗರ ಅಪರಾಧ ವಿಭಾಗ ಎಸಿಪಿ ಮಹಾಂತೇಶ್ವರ ಜಿದ್ದಿ, ಮಾರ್ಕೆಟ್ ಉಪವಿಭಾಗದ ಎಸಿಪಿ ಎನ್.ವಿ. ಬರಮನಿ, ಖಡೇಬಜಾರ್ ಉಪವಿಭಾಗದ ಎಸಿಪಿ ಚಂದ್ರಪ್ಪ ಹಾಗೂ ನಗರ ವ್ಯಾಪ್ತಿಯ ಎಲ್ಲ ಠಾಣೆಗಳ ಇನ್ಸಪೆಕ್ಟರ್‌ಗಳು ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.
ಕಮಿಷನರ್ ಕಚೇರಿ ಆವರಣದಲ್ಲಿ ಕೆಲವು ಕಚೇರಿಗಳಿಗೆ ಕೊರತೆ ಇರುವುದರಿಂದ ಮಾರ್ಕೆಟ್ ಆವರಣದಲ್ಲಿಯ ಹಳೆಯ ಕಟ್ಟಡ ಖಾಲಿ ಇತ್ತು. ಹೀಗಾಗಿ ಅದನ್ನೇ ನವೀಕರಿಸಿ ಸಿಇಎನ್ (ಸೈಬರ್, ಎಕನಾಮಿಕ್, ನಾರ್ಕೋಟಿಕ್) ಠಾಣೆಗಾಗಿ ಬಳಸಿಕೊಳ್ಳಲಾಗಿದೆ. ಈ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದರೆ ಮಾರ್ಕೆಟ್ ಠಾಣೆಯ ಇನ್ಸಪೆಕ್ಟರ್ ಅವರೊಂದಿಗೆ ಕೈ ಜೋಡಿಸುವ ಮೂಲಕ ಬಲ ಸಿಕ್ಕಂತಾಗುತ್ತದೆ.
ಡಾ| ಡಿ.ಸಿ. ರಾಜಪ್ಪ,
ಮಹಾನಗರ ಪೊಲೀಸ್ ಆಯುಕ್ತರು