ಬೆಳಗಾವಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗಾಲ ಪೂರ್ವದಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಜಲಜೀವನ್ ಮಿಷನ್ ಕಾಮಗಾರಿ ಇನ್ನೂ ಆರಂಭವಾಗದೇ ಇರುವ ಬಗ್ಗೆ ಉದಯ ವಾಣಿಯಲ್ಲಿ ಇತ್ತೀಚಿಗೆ ಪ್ರಕಟವಾದ ವರದಿಯನ್ನು ಸದನದಲ್ಲಿ ಉಲ್ಲೇಖೀಸಿ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ಅವರು ಸರಕಾರದ ಗಮನ ಸೆಳದರು.
“ಜಲ್ ಜೀವನ್ ಮಿಷನ್‌ಗೆ ಜೀವ ಬರುವುದು ಯಾವಾಗ?’ ಎಂಬ ಶೀರ್ಷಿಕೆಯಡಿ ಉದಯವಾಣಿ ಜಲ್‌ಜೀವನ್ ಮಿಷನ್ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ಆಗಿರುವ ಸಮಸ್ಯೆಯ ಬಗ್ಗೆ ವಿಸ್ತೃತ ವರದಿಯನ್ನು ಅಂಕಿ ಅಂಶ ಸಹಿತ ಪ್ರಕಟಿಸಿತ್ತು.
ಭಂಡಾರಿಯವರು ಸೋಮವಾರ ವಿಧಾನ ಪರಿಷತ್ ಕಲಾಪದ ಮೊದಲ ದಿನ ಶೂನ್ಯವೇಳೆ ಉದಯವಾಣಿ ವರದಿಯನ್ನು ಪೂರ್ಣ ಓದಿ ಸರಕಾರದ ಗಮನವನ್ನು ಸೆಳೆದರು.
ಜಲಜೀವನ್ ಮಿಷನ್ ಯೋಜನೆಗೆ ಉಡುಪಿ ಮತ್ತು ಮಂಗಳೂರಿನಲ್ಲಿ ಗ್ರಹಣ ಹಿಡಿದಿದ್ದು, ಸರಕಾರ ಈ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದರು. ಜಲಜೀವನ್ ಮಿಷನ್ ಯೋಜನೆ ಜಾರಿಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಪ್ರಗತಿ ಕಾಣುತ್ತಿಲ್ಲ ಜಲಜೀವನ್ ಮಿಷನ್ ಯೋಜನೆಗೆ ಜೀವವಿಲ್ಲದಂತಾಗಿದೆ ಎಂದರು.
ಈ ಯೋಜನೆಯಡಿ ಹಲವು ಗ್ರಾಮ ಪಂಚಾಯತ್‌ಗಳಿಗೆ ನೀರು ಪೂರೈಕೆ ಆಗುತ್ತಿಲ್ಲ. ಕಾಮಗಾರಿಗಾಗಿ ರಸ್ತೆಯನ್ನು ಅಗೆತ ಮಾಡಲಾಗುತ್ತಿದೆ. ಆದರೆ, ಪೈಪ್‌ಲೈನ್ ಅಳವಡಿಕೆ ಸಂಪೂರ್ಣವಾಗಿ ಮುಗಿದಿಲ್ಲ. ಉಡುಪಿ ಮತ್ತು ಮಂಗಳೂರಿನಲ್ಲಿ ಈ ಯೋಜನೆ ಪ್ರಗತಿ ಕಾಣುತ್ತಿಲ್ಲ ಎಂದು ಸದನದ ಗಮನಕ್ಕೆ ತಂದರು.
24 ಗಂಟೆ ನೀರು ಪೂರೈಕೆ ಸಂಗ್ರಹದ ಅಗತ್ಯವಿದೆ. ನೀರಿನ ಮೂಲ ಶೋಧನೆ ಆಗಿಲ್ಲ. ಗ್ರಹಣ ಹಿಡಿದಿರುವ ಜಲ ಜೀವನ್ ಮೀಷನ್ ಯೋಜನೆಯನ್ನು ಪುನರ್ ಆರಂಭಿಸಿ ಮನೆ ಮನೆಗೆ ನೀರು ಕೊಡುವ ಕೆಲಸ ಸರಕಾರ ಮಾಡಬೇಕು ಎಂದು ಆಗ್ರಹಿಸಿದರು. ಮಧ್ಯಪ್ರವೇಶ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಸಮಸ್ಯೆಯನ್ನು ಶೀಘ್ರ ಪರಿಹರಿಸುವ ಭರವಸೆ ನೀಡಿದರು.