Advertisement

Belagavi ಅಧಿವೇಶನದಲ್ಲಿ ಬಳ್ಳಾರಿ ಬಾಣಂತಿಯರ ಸಾವಿನ ಬಿಸಿ: ಚರ್ಚೆಗೆ ಬಿಜೆಪಿ ನಿರ್ಧಾರ

10:51 PM Dec 07, 2024 | Team Udayavani |

ಬೆಂಗಳೂರು: ಬಳ್ಳಾರಿ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ಬೆಳಗಾವಿ ಅಧಿವೇಶನದಲ್ಲಿ ಸರಕಾರಕ್ಕೆ ಬಿಸಿ ಮುಟ್ಟಿಸಲು ತಯಾರಿ ನಡೆಸಿದೆ.
ಈ ಕುರಿತು ಶನಿವಾರ ಬಿಜೆಪಿ ಸಭೆಯಲ್ಲೂ ಚರ್ಚೆಯಾಗಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಅಧಿವೇಶನ ಆರಂಭವಾಗುವ ಸೋಮವಾರ ಬೆಳಗ್ಗೆ ಬಳ್ಳಾರಿಗೆ ಭೇಟಿ ನೀಡಿ ಅನಂತರ ಬೆಳಗಾವಿಯ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ.

Advertisement

ಮೊದಲ ದಿನದ ಕಲಾಪದಲ್ಲೇ ಇದನ್ನು ತುರ್ತಾಗಿ ಚರ್ಚೆಗೆ ಎತ್ತಿಕೊಂಡು ಕ್ರಮ ಜರಗಿಸಬೇಕೆಂದು ಒತ್ತಡ ಹೇರಲೂ ಬಿಜೆಪಿ ತಯಾರಿ ಮಾಡಿಕೊಂಡಿದೆ.

ಪಕ್ಷದ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್‌, ಕಪ್ಪು ಪಟ್ಟಿಯಲ್ಲಿದ್ದ ನಿಷೇಧಿತ ಕಂಪೆನಿಗೆ ಔಷಧ ಸರಬರಾಜು ಮಾಡಲು ಟೆಂಡರ್‌ ಕೊಟ್ಟಿದ್ದೇಕೆ? ದೋಷಪೂರಿತ ಔಷಧ ಬಳಕೆ ಆದದ್ದು ಹೇಗೆ? ಯಾರ್ಯಾರು ಎಷ್ಟೆಷ್ಟು ಕಿಕ್‌ಬ್ಯಾಕ್‌ ಪಡೆದಿದ್ದಾರೆ? ಕಿಕ್‌ಬ್ಯಾಕ್‌ ಪಡೆದೇ ಇದನ್ನು ಬಳಕೆ ಮಾಡಿರುವುದು. ಇದೊಂದು ಸರಕಾರಿ ಪ್ರಾಯೋಜಿತ ಸರಣಿ ಸಾವು. ಇದರ ಸಂಪೂರ್ಣ ಹೊಣೆಯನ್ನು ಸರಕಾರವೇ ಹೊರತಬೇಕು ಎಂದು ಆಗ್ರಹಿಸಿದರು.

25 ಲಕ್ಷ ರೂ. ಪರಿಹಾರಕ್ಕೆ ಆಗ್ರಹ
ಐವರು ಬಾಣಂತಿಯರ ಸಾವಿನ ಬಳಿಕ ಆರೋಗ್ಯ ಸಚಿವರು ಭೇಟಿ ಕೊಡುವುದಾಗಿ ಹೇಳಿದ್ದಾರೆ. ಇದು ಮೊಸಳೆ ಕಣ್ಣೀರಿನ ಭೇಟಿಯಷ್ಟೇ. ಔಷಧ ನಿಯಂತ್ರಕರ ಅಮಾನತಿನಿಂದ ನ್ಯಾಯ ಸಿಗುವುದಿಲ್ಲ. ಕೂಡಲೇ ಸಚಿವ ದಿನೇಶ್‌ ಗುಂಡೂರಾವ್‌ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು. ಸರಕಾರದ ನಿರ್ಲಕ್ಷ್ಯದಿಂದ ಬಾಣಂತಿಯರ ಸಾವು ಸಂಭವಿಸಿದ್ದು, ಮೃತರ ಪ್ರತಿ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ಕೊಡಬೇಕು. ಇಡೀ ಪ್ರಕರಣದ ತನಿಖೆಯನ್ನು ನ್ಯಾಯಾಂಗಕ್ಕೆ ಒಪ್ಪಿಸಬೇಕು. ಸರ್ಕಾರ ಸ್ಪಂದಿಸದೇ ಇದ್ದಲ್ಲಿ ಉಪವಾಸ ಸತ್ಯಾಗ್ರಹ ಮಾಡಬೇಕಾದೀತು ಎಂದು ಪಿ. ರಾಜೀವ್‌ ಎಚ್ಚರಿಕೆ ನೀಡಿದರು.

ಸಂವೇದನೆ ಕಳೆದುಕೊಂಡ ಸರಕಾರ: ಜೋಶಿ
ಬೆಂಗಳೂರು: ಐವರು ಬಾಣಂತಿಯರ ಸಾವು, ನವಜಾತ ಶಿಶುಗಳ ಮರಣ ಬೇಸರ ತರಿಸಿದೆ. ಭ್ರಷ್ಟಾಚಾರದಿಂದ ಕಳಪೆ ಗುಣಮಟ್ಟದ  ಔಷಧ ಪೂರೈಕೆಯಾಗಿದೆ. ಜನರ ಜೀವದ ಜತೆ ಚೆಲ್ಲಾಟ ಆಡುತ್ತಿದ್ದಾರೆ. ಈ ಸರಕಾರ ಸಂವೇದನಾಶೀಲತೆ ಕಳೆದುಕೊಂಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ, ವಾಲ್ಮೀಕಿ, ಅಬಕಾರಿ ಹಗರಣಗಳಿಂದ ಸಂರಕ್ಷಿಸಿಕೊಳ್ಳಲು ಮುಖ್ಯಮಂತ್ರಿಗಳು ಆಡಳಿತವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಉಡಾಫೆಯ ಮಾತುಗಳನ್ನಾಡುತ್ತಿದ್ದಾರೆ. ಆರೋಗ್ಯ ಕ್ಷೇತ್ರ ರಾಜ್ಯ ಸರ್ಕಾರದ ಪ್ರಮುಖ ವಿಷಯ. ಮಳೆ ಜಾಸ್ತಿಯಾದರೂ, ಜನಸಂಖ್ಯೆ ಹೆಚ್ಚಾದರೂ, ಕಡಿಮೆ ಆದರೂ ಅದೆಲ್ಲದಕ್ಕೂ ಕೇಂದ್ರ ಸರ್ಕಾರ ಕಾರಣ ಎನ್ನುವ ಜನ ಇವರು ಎಂದು ದೂರಿದರು.

ದಿನೇಶ್‌ ಗುಂಡೂರಾವ್‌ ಅವರಿಗೆ ಸಂವೇದನಾಶೀಲತೆ ಇಲ್ಲ. ಸಿದ್ದರಾಮಯ್ಯನವರ ಬಾಲಬಡುಕರಂತೆ ವರ್ತಿಸುವುದರಲ್ಲಿ ಅವರು ಸಂತೃಪ್ತಿ ಕಾಣುತ್ತಿದ್ದಾರೆ. ಅವರಿಗೆ ನೈತಿಕತೆ ಇದ್ದರೆ ಮೊದಲು ರಾಜೀನಾಮೆ ಕೊಡಬೇಕಾಗಿತ್ತು ಎಂದರು.

ವರದಿ ಬಳಿಕ ಕ್ರಮ: ಸಿಎಂ
ಚಾಮರಾಜನಗರ: ಬಳ್ಳಾರಿ ಜಿಲ್ಲಾಸ್ಪತ್ರೆಗೆ ಆರೋಗ್ಯ ಸಚಿವರು ಹಾಗೂ ಇಲಾಖೆ ಅಧಿಕಾರಿಗಳು ಕೂಡ ಭೇಟಿ ನೀಡಿ ಬಾಣಂತಿ ಸಾವಿನ ಕುರಿತು ಪರಿಶೀಲನೆ ನಡೆಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕೊಳ್ಳೇಗಾಲ ತಾಲೂಕಿನಲ್ಲಿ ಶನಿವಾರ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು, ಹೆಲಿಪ್ಯಾಡ್‌ನ‌ಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬಳ್ಳಾರಿ ಜಿಲ್ಲಾಸ್ಪತ್ರೆಯ ಮೇಲೆ ಲೋಕಾಯುಕ್ತ ದಾಳಿಯಾಗಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ, ನಾಲ್ಕು ಬಾಣಂತಿಯರು ಮರಣ ಹೊಂದಿದಾಗ ಸಭೆ ಕರೆಯಲಾಗಿತ್ತು. ಐದನೇ ಬಾಣಂತಿ ಮೃತಪಟ್ಟಿರುವ ಬಗ್ಗೆ ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿಯೂ ಚರ್ಚೆ ನಡೆದಿದೆ. ಕಳಪೆ ಗುಣಮಟ್ಟದ ಔಷಧ ಸರಬರಾಜು ಮಾಡುತ್ತಿರುವ ಕಂಪೆನಿಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಹಾಗೂ ಔಷಧ ನಿಯಂತ್ರಕರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.

ತಪ್ಪಿತಸ್ಥರ ವಿರುದ್ಧ ಕ್ರಮ
ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ. ವರದಿ ಬಂದ ಅನಂತರ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next