Advertisement

Belagavi Session; ಪಂಚಮಸಾಲಿ ಹೋರಾಟಕ್ಕೆ ಸಿಎಂ ಕೋರ್ಟ್‌ ಆದೇಶ ಅಸ್ತ್ರ

12:30 AM Dec 10, 2024 | Team Udayavani |

ಬೆಳಗಾವಿ: ಪಂಚಮಸಾಲಿಗಳ ಪಾದಯಾತ್ರೆಗೆ ತಡೆಯೊಡ್ಡಿದ ಸರಕಾರದ ವಿರುದ್ಧ ವಿಪಕ್ಷ ಬಿಜೆಪಿ ಮುಗಿಬಿದ್ದಿದ್ದು ಇದೇ ಕಾರಣಕ್ಕೆ ಮೊದಲ ದಿನವೇ ಸೃಷ್ಟಿಯಾಗಿದ್ದ ಗದ್ದಲಕ್ಕೆ ಮಧ್ಯಾಹ್ನ ಭೋಜನ ವಿರಾಮದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ವಿಪಕ್ಷ ಸದಸ್ಯರನ್ನು ಸುಮ್ಮನಾಗಿಸುವ ಮೂಲಕ ಬ್ರೇಕ್‌ ಹಾಕಿದರು.

Advertisement

ಪಂಚಮಸಾಲಿ 2ಎ ಮೀಸಲಾತಿ ವಿಚಾರವಾಗಿ ಹಿಂದಿನ ಸರಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ ಹಾಗೂ ನ್ಯಾಯಾಲಯದ ಆದೇಶವನ್ನು ಸದನ ಮುಂದೆ ಮಂಡಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ ಬಳಿಕ ವಿಪಕ್ಷ ಸದಸ್ಯರು ತಮ್ಮ ಧರಣಿ ಕೈಬಿಟ್ಟರು.

ಸೋಮವಾರ ಬೆಳಗ್ಗೆ ಸಂತಾಪ ಸೂಚನಾ ನಿರ್ಣಯದ ಅನಂತರ ಸ್ಪೀಕರ್‌ ಖಾದರ್‌ ಅವರು ವಿಧಾನಸಭಾಧ್ಯಕ್ಷರ ಪೀಠದ ನವೀಕರಣದ ಬಗ್ಗೆ ಸದನಕ್ಕೆ ಮಾಹಿತಿ ನೀಡಲು ಮುಂದಾದರು. ಆಗ ವಿಪಕ್ಷ ನಾಯಕ ಆರ್‌. ಅಶೋಕ್‌ ಅವರು ವಕ್ಫ್ ವಿವಾದದ ಬಗ್ಗೆ ನಿಲುವಳಿ ಸೂಚನೆ ಪ್ರಸ್ತಾವನೆ ಕೊಟ್ಟಿದ್ದು, ಚರ್ಚೆಗೆ ಅವಕಾಶ ಕೊಡಬೇಕೆಂದು ಆಗ್ರಹಿಸಿದರು. ಆದರೆ, ಸ್ಪೀಕರ್‌ ಅವರು ಬಸವಣ್ಣನವರ ಅನುಭವ ಮಂಟಪದ ತೈಲ ವರ್ಣಚಿತ್ರದ ಬಗ್ಗೆ ಮಾಹಿತಿ ನೀಡಲು ಮುಂದಾದರು. ಆ ಬಳಿಕ ವಿಧಾನ ಸಭೆಯ ನಿಯಮಾವಳಿಯ ಪ್ರಕಾರ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಳ್ಳುವುದಾಗಿ ಹೇಳಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಅಶೋಕ್‌, ಇಲ್ಲಿ ಅನುಭವ ಮಂಟಪದ ಅನಾವರಣ ಮಾಡುತ್ತಿದ್ದರೆ ಅತ್ತ ರೈತರ ಜಮೀನನ್ನು ವಕ್ಫ್ ಮಂಡಳಿಗೆ ನೀಡಲಾಗುತ್ತಿದೆ ಎಂದರು. ಇದು ಆಡಳಿತ ಪಕ್ಷದ ಸಚಿವರನ್ನು ಕೆರಳಿಸಿತು. ರಾಜ್ಯದಲ್ಲಿ ಎಮರ್ಜೆನ್ಸಿ ಹೇರಲಾಗಿದೆಯೇ ಎಂದು ಪ್ರಶ್ನಿಸಿದ ಬಿಜೆಪಿ ಶಾಸಕರು ಸದನದ ಬಾವಿಗೆ ಇಳಿದು ಘೋಷಣೆ ಕೂಗುತ್ತಿದ್ದಂತೆಯೇ ಸ್ಪೀಕರ್‌ 2.30ಕ್ಕೆ ಕಲಾಪ ಮುಂದೂಡಿದರು. ಮಧ್ಯಾಹ್ನ ಕಲಾಪ ಸಮಾವೇಶಗೊಂಡಾಗ ಬಿಜೆಪಿ ಸದಸ್ಯರು ಬಾವಿಯಲ್ಲೇ ಇದ್ದರು. ಯತ್ನಾಳ್‌ ಮಧ್ಯಪ್ರವೇಶಿಸಿ, ಸಿಎಂ ಸಭೆ ನಡೆಸಿ ಇದಕ್ಕೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು. ಕಂದಾಯ ಸಚಿವ ಕೃಷ್ಣ ಬೈರೇಗೌಡ, ಶಾಸಕ ಸುನೀಲ್‌ ಕುಮಾರ್‌, ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next