Advertisement

Belagavi Session; ವಕ್ಫ್ ಪರಮಾಧಿಕಾರ ಮೊಟಕಿಗೆ ಬಿಜೆಪಿ ಪಟ್ಟು

12:07 AM Dec 10, 2024 | Team Udayavani |

ಬೆಳಗಾವಿ: ರಾಜ್ಯಾದ್ಯಂತ ತೀವ್ರ ಕೋಲಾಹಲ ಸೃಷ್ಟಿಸಿ ರೈತರು, ಮಠ -ಮಾನ್ಯಗಳ ಆಸ್ತಿಗೆ ಕಂಟಕ ತಂದಿರುವ ವಕ್ಫ್ ಮಂಡಳಿ ಪರಮಾಧಿಕಾರವನ್ನು ಮೊಟಕುಗೊಳಿಸಬೇಕು ಮತ್ತು ಅನ್ವರ್‌ ಮಾಣಿಪ್ಪಾಡಿ ವರದಿ ಜಾರಿಗೆ ತರಬೇಕು ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸರಕಾರವನ್ನು ಆಗ್ರಹಿಸಿದರು.

Advertisement

ವಿಧಾನ ಪರಿಷತ್ತಿನಲ್ಲಿ ಸೋಮವಾರ ನಿಯಮ 68ರ ಅಡಿ ನಡೆದ ಚರ್ಚೆ ವೇಳೆ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕೂ ಮೊದಲು ಶಿಯಾ ಮತ್ತು ಸುನ್ನಿಗಳ ನಡುವಿನ ಆಸ್ತಿ ವಿಚಾರಕ್ಕೆ ತಂದ ಕಾನೂನಿಗೆ 1954ರಲ್ಲಿ ಪ್ರಧಾನಿ ನೆಹರು ವಕ್ಫ್ ಮಂಡಳಿ ರಚಿಸಿ ಬಲ ತುಂಬಿದರು. 1995ರಲ್ಲಿ ಪಿ.ವಿ. ನರಸಿಂಹರಾವ್‌ ಅಧಿಕಾರ ನೀಡಿದರೆ, 2013ರಲ್ಲಿ ಮನಮೋಹನ ಸಿಂಗ್‌ ಪರಮಾಧಿಕಾರ ನೀಡಿದರು. ಇದಕ್ಕೆ 1974ರಲ್ಲಿ ರಾಜ್ಯ ಸರಕಾರ ಗೆಜೆಟ್‌ ನೋಟಿಫಿಕೇಶನ್‌ ಮಾಡಿ ರೈತರು, ಮಠಮಾನ್ಯಗಳ ಜಮೀನು ಸೇರಿಸಿ ತಾರತಮ್ಯ ಮಾಡಿಟ್ಟಿತು ಎಂದು ಗಂಭೀರ ಆರೋಪ ಮಾಡಿದರು. ಸಿ.ಟಿ. ರವಿ ಮಾತನಾಡಿ, ವಕ್ಫ್ ಗೆ ಕಾಂಗ್ರೆಸ್‌ ವಿಪರೀತ ಪರಮಾಧಿಕಾರ ಕೊಟ್ಟಾಗಿದೆ. ಇದರಿಂದಾಗಿಯೇ ಇಂದು ಎಲ್ಲವೂ ವಕ್ಫ್ ಆಸ್ತಿ ಎಂದು ಹೇಳುತ್ತಿದ್ದಾರೆ ಎಂದರು.

ಏಟು-ಎದಿರೇಟು
ವಕ್ಫ್ ಕುರಿತು ವಿಪಕ್ಷ ಸದಸ್ಯರು ಮಾತನಾಡುವಾಗ ಆಡಳಿತ ಪಕ್ಷದ ಸದಸ್ಯರಾದ ನಸೀರ್‌ ಅಹಮದ್‌, ಸಲಿಂ ಅಹಮದ್‌, ಜಬ್ಟಾರ್‌ಖಾನ್‌ ಮೇಲಿಂದ ಮೇಲೆ ಎದ್ದುನಿಂತು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಸಿ.ಟಿ.ರವಿ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದರು. ಆಗ ಗದ್ದಲವಾಗಿ ಸಭಾಪತಿ ಬಸವರಾಜ ಹೊರಟ್ಟಿ ಸದನ ಕಲಾಪವನ್ನು 10 ನಿಮಿಷ ಮುಂದೂಡಿದರು. ಕೊನೆಗೂ ವಾಗ್ವಾದ ನಿಲ್ಲದ್ದರಿಂದ ಉಪಸಭಾಪತಿಗಳು ಸದನವನ್ನು ಮಂಗಳವಾರಕ್ಕೆ ಮುಂದೂಡಿದರು.

ನೀವು ಜಮೀರ್‌ನ ಕೆಡಿಸಿದಿರೋ? ಜಮೀರ್‌ ನಿಮ್ಮನ್ನು ಕೆಡಿಸಿದರೋ?
ಸಚಿವ ಜಮೀರ್‌ ಅಹಮದ್‌ ನಿಮ್ಮ ಸ್ನೇಹಿತರೇ ಆಗಿದ್ದರು ಎಂದ ಆಡಳಿತ ಪಕ್ಷದ ಸದಸ್ಯರು ಸಿ.ಟಿ. ರವಿ ಅವರನ್ನು ಕುಟುಕಿದಾಗ, ಜಮೀರ್‌ ನನ್ನ ಜತೆಗಿದ್ದಾಗ ರಾಮ ಮಂದಿರ ಆಗಲಿ ಅಂತಿದ್ದರು. ಆದರೆ, ಈಗ ಅವರ ನಿಲುವು ಬದಲಾಗಿದೆ. ನೀವು ಜಮೀರ್‌ ಅಹಮದ್‌ ಖಾನ್‌ ಅವರನ್ನು ಕೆಡಿಸಿದಿರೋ ಅಥವಾ ಅವರು ನಿಮ್ಮನ್ನು ಕೆಡಿಸಿದರೋ ಗೊತ್ತಿಲ್ಲ. ಅಂತೂ ಸಚಿವರು ವಕ್ಫ್ ಅದಾಲತ್‌ ಮಾಡಿದ ಅನಂತರವೇ ಜನರ ನೆಮ್ಮದಿಗೆ ಕೊಳ್ಳಿ ಬಿತ್ತು. ರೈತರಿಗೆ ನೋಟಿಸ್‌ಗಳು ಬಂದವು ಎಂದು ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ವಕ್ಫ್ ಅದಾಲತ್‌ಅನ್ನು ಸಂವಿಧಾನದ ಯಾವ ನಿಯಮದ ಆಧಾರದ ಮೇಲೆ ವಕ್ಫ್ ಸಚಿವರು ನಡೆಸಿದರು? ಎಂಬುದನ್ನು ಮೊದಲು ಆಡಳಿತ ಪಕ್ಷದವರು ರಾಜ್ಯದ ಜನರಿಗೆ ಹೇಳಬೇಕು. ಈ ವಿಚಾರದಲ್ಲಿ ಜನರ ಪಾಲಿಗೆ ಭಸ್ಮಾಸುರ ಆಗಬೇಡಿ.
– ಸಿ.ಟಿ. ರವಿ, ಬಿಜೆಪಿ ಸದಸ್ಯ

Advertisement

ರಾಜ್ಯದಲ್ಲಿ ಹಿಂದುಳಿದವರು ಮತ್ತು ದಲಿತರ ಹೆಣ ಹೂಳಲು ಶ್ಮಶಾನಗಳು ಸಿಕ್ಕುತ್ತಿಲ್ಲ. ಇಂದಿಗೂ ಬಡವರಿಗೆ ಭೂಮಿ ಇಲ್ಲ. ಮನೆ ಕಟ್ಟಲು ಜಾಗವಿಲ್ಲ. ಹೀಗಿರುವಾಗ ರಾಜ್ಯದಲ್ಲಿ ಅಂದಾಜು 3 ಲಕ್ಷ ಎಕರೆ ಭೂಮಿ ವಕ್ಫ್ ಬೋರ್ಡ್‌ ವಶದಲ್ಲಿದೆ. ಈ ಭೂಮಿಯನ್ನು ಎಲ್ಲ ಸಮುದಾಯಗಳಿಗೂ ಸಮಾನವಾಗಿ ಹಂಚಿಬಿಡಿ.
– ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್‌ ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next