Advertisement

Belagavi Session; ಉತ್ತರ ಕರ್ನಾಟಕ ಸಮಸ್ಯೆಗೆ ಸಿಗಲಿ ‘ಉತ್ತರ’

10:17 PM Dec 08, 2024 | Team Udayavani |

ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕವನ್ನು ಭಾವನಾತ್ಮಕವಾಗಿ ನೋಡುವುದಾದರೆ ಒಂದು ಅಭಿವೃದ್ಧಿ-ಅದೃಷ್ಟ, ಇನ್ನೊಂದು ಶೌರ್ಯದ ಸಂಕೇತವಾಗಿ ಗೋಚರಿಸುತ್ತದೆ. ಆದರೆ ದಶಕಗಳಿಂದ ಪ್ರಗತಿ ಹಣೆಪಟ್ಟಿಯೊಂದಿಗೆ ಕಣ್ಣೀರಿಡುತ್ತಿರುವ ನೀರಾವರಿ ಯೋಜನೆಗಳು, ಅನಾರೋಗ್ಯ ಸ್ಥಿತಿಯ ಆರೋಗ್ಯ ಕ್ಷೇತ್ರ-ಅಪೌಷ್ಟಿಕತೆ, ಗುಣಮಟ್ಟದ ಸಮಸ್ಯೆಗೆ ಸಿಲುಕಿದ ಶಿಕ್ಷಣ ವ್ಯವಸ್ಥೆ, ಅಪೂರ್ಣ ಸ್ಥಿತಿಯ ಡಾ|ಡಿ.ಎಂ.ನಂಜುಂಡಪ್ಪ ವರದಿ, ಸಾರಿಗೆ ಸಂಪರ್ಕದ ಕೊರತೆ, ರಸ್ತೆಗಳ ದುಸ್ಥಿತಿ, ಐಟಿ-ಬಿಟಿ ಕೊರತೆ, 371(ಜೆ)ಎಂಬ ತ್ರಿಶಂಕು ಸ್ವರ್ಗ ಹೀಗೆ ಉತ್ತರ ಕರ್ನಾಟಕದ ವಾಸ್ತವದ ಸಮಸ್ಯೆ ಬೆಳೆಯುತ್ತಲೇ ಹೋಗುತ್ತದೆ. ರಾಜ್ಯದ ಅರ್ಧದಷ್ಟು ಭಾಗ ಅಂದರೆ 14 ಜಿಲ್ಲೆಗಳನ್ನೊಳಗೊಂಡ ಉತ್ತರ ಕರ್ನಾಟಕಕ್ಕೆ ಎಲ್ಲ ಸರ್ಕಾರಗಳಿಂದ ಸಿಕ್ಕಿದ್ದು ಭರವಸೆ. ಸ್ವಾತಂತ್ರÂ ಬಂದು 75 ವರ್ಷದ ಸಂಭ್ರಮಾಚರಣೆ ಕೈಗೊಂಡರೂ ಉತ್ತರ ಕರ್ನಾಟಕದ ಸರಾಸರಿ ನೀರಾವರಿ ಸೌಲಭ್ಯ ಶೇಕಡಾ 21-25ರೊಳಗಿದೆ. ರಾಜಕೀಯ ಇಚ್ಛಾಶಕ್ತಿ, ಸಂಘಟಿತ ಧ್ವನಿಯ ಕೊರತೆಯೂ ಇದೆ. ಉತ್ತರದ ಸಂಕಷ್ಟದ ಸರಮಾಲೆ-ಮೌನರೋದನ ಕಥೆ-ವ್ಯಥೆಯಿದು.

Advertisement

ಮುಗಿಯದ ಕೃಷ್ಣಾ ಮೇಲ್ದಂಡೆ ಯೋಜನೆ ಕಣ್ಣೀರು
ಉತ್ತರ ಕರ್ನಾಟಕ ಭಾಗದ ನೀರಾವರಿ ಯೋಜನೆ­ಗಳು ಇನ್ನೂ ಕಣ್ಣೀರಲ್ಲೇ ಕೈತೊಳೆಯುತ್ತಿವೆ. ಅಂದಾಜು 15.36 ಲಕ್ಷ ಎಕರೆಗೆ ನೀರುಣಿಸುವ ಉದ್ದೇಶದ ಆಲಮಟ್ಟಿ ಜಲಾಶಯ ಇಂದಿಗೂ ಸಮರ್ಪಕ ಬಳಕೆಯಾ­ಗಿಲ್ಲ. 1976ರ ನ್ಯಾ|ಬಚಾವತ್‌ ಆಯೋಗ 173 ಟಿಎಂಸಿ ಅಡಿ, 2013ರಲ್ಲಿ ನ್ಯಾ| ಬ್ರಿಜೇಶಕುಮಾರ ಆಯೋಗ 133 ಟಿಎಂಸಿ ಅಡಿಯಷ್ಟು ನೀರು ಹಂಚಿಕೆ ಮಾಡಿದ್ದರೂ ಸಮರ್ಪಕ ಬಳಕೆ ಸಾಧ್ಯವಾಗಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ)-3ನೇ ಹಂತಕ್ಕೆ 2011ರ ಡಿಸೆಂಬರ್‌ನಲ್ಲಿಯೇ ಅಂದಾಜು 17,000 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಿದ್ದು, ಇದೀಗ 1 ಲಕ್ಷ ಕೋಟಿ ರೂ. ವೆಚ್ಚದ ಸಮೀಪಕ್ಕೆ ಸಾಗಿದೆ. ಆಲಮಟ್ಟಿ ಜಲಾಶಯ 519 ಮೀಟರ್‌ನಿಂದ 524 ಮೀಟರ್‌ ಹೆಚ್ಚಳ ಮಾಡಲು ಒಪ್ಪಿಗೆ ಸಿಕ್ಕಿದ್ದು, 22 ಗ್ರಾಮಗಳು, 1 ಲಕ್ಷ ಎಕರೆ ಭೂಮಿ ಮುಳುಗಡೆ ಆಗಲಿದೆ. ಇನ್ನೂ ಅನುಷ್ಠಾನವಾಗಿಲ್ಲ. ಇದು ಜಾರಿಯಾದರೆ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ರಾಯಚೂರು ಜಿಲ್ಲೆಗಳಿಗೆ ನೀರು ದೊರೆಯಲಿದೆ. ಇದರಿಂದ ರೈತರ ಬಾಳು ಹಸನಾಗಲಿದೆ.
ಏನು ಪರಿಹಾರ: ಕೇಂದ್ರ ಸರ್ಕಾರ ಇದಕ್ಕೆ ನೆರವು ಕೊಡಬೇಕಿದ್ದು, ರಾಜ್ಯ ಸರ್ಕಾರ ಪ್ರತಿ ವರ್ಷ 20 ಸಾವಿರ ಕೋಟಿ ರೂ. ಅನುದಾನ ನೀಡಬೇಕು.

ಹೆಚ್ಚುತ್ತಲೇ ಇದೆ ತುಂಗಭದ್ರಾ ಜಲಾಶಯದ ಹೂಳು
ತುಂಗಭದ್ರಾ ಜಲಾಶಯದಲ್ಲಿ ಸುಮಾರು 32-33 ಟಿಎಂಸಿ ಅಡಿಯಷ್ಟು ಹೂಳು ತುಂಬಿದ್ದು, ಕೊಪ್ಪಳ ಜಿಲ್ಲೆ ನವಲಿ ಬಳಿ ಅಂದಾಜು 35 ಟಿಎಂಸಿ ಅಡಿಯಷ್ಟು ನೀರು ಸಂಗ್ರಹದ ಸಮಾನಾಂತರ ಜಲಾಶಯ ನಿರ್ಮಾ­ಣಕ್ಕೆ ದಶಕಗಳ ಕೂಗು ಇಂದಿಗೂ ಹಾಗೆಯೇ ಉಳಿದಿದೆ. ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆ ರೈತರಿಗೆ ಎರಡು ಬೆಳೆಯಲ್ಲ, ಒಂದೇ ಬೆಳೆಗೆ ಸಮರ್ಪಕ ನೀರು ಇಲ್ಲವಾಗಿದೆ. ಕೊನೆ ಭಾಗಕ್ಕೆ ಕುಡಿಯಲು, ಕೃಷಿ ನೀರು ತಲುಪಿಸಲು ಕಾಲುವೆ ಮೇಲೆ ಪೊಲೀಸ್‌ ಬಂದೋಬಸ್ತ್ ಮಾಡಬೇಕಾಗಿದೆ.
ಏನು ಪರಿಹಾರ: ನವಲಿ ಬಳಿ ಸಮಾನಾಂತರ ಅಣೆಕಟ್ಟು ನಿರ್ಮಾಣ ಮಾಡಬೇಕು. ಇದಕ್ಕಾಗಿ ನೆರೆ ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳ ಜೊತೆಗೆ ಮಾತುಕತೆ ನಡೆಸುವ ಮೂಲಕ ಪರಿಹಾರ ಕಂಡುಕೊಳ್ಳಬೇಕು.

ಒಂದು ಹನಿ ನೀರನ್ನೂ ತಾರದ “ಮಹಾದಾಯಿ’
ಸುಮಾರು 4 ದಶಕಗಳ ಬೇಡಿಕೆಯ ಮಹ­ದಾಯಿ, ಎರಡೂವರೆ ದಶಕಗಳ ಕಳಸಾ-­ಬಂಡೂರಿ ನಾಲಾ ಯೋಜನೆಗೆ ನಡೆದಷ್ಟು ಹೋರಾಟ ಮತ್ತೂಂದು ಇಲ್ಲ ಎಂದೇ ಹೇಳಬಹುದಾಗಿದೆ. ಮಹದಾಯಿ ನ್ಯಾಯಾಧಿ ಕರಣವು ರಾಜ್ಯಕ್ಕೆ 8 ಟಿಎಂಸಿ ಅಡಿ ವಿದ್ಯುತ್‌ ಉತ್ಪಾದನೆ ಸೇರಿದಂತೆ ಒಟ್ಟು 13.42 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿ ಆದೇಶಿಸಿದೆ. ಈ ಯೋಜನೆಗೆ ಅಧಿಸೂಚನೆ, ಡಿಪಿ­ಆರ್‌ಗೆ ಒಪ್ಪಿಗೆ ಎಂದು ಫ್ಲೆಕ್ಸ್‌ ಬ್ಯಾನರ್‌ಗಳಲ್ಲಿ ಮಿಂಚಿದ್ದು, ರಾಜಕೀಯ ನಾಯಕರ ಭಾಷಣಕ್ಕೆ ಕಾರಣವಾಗಿದ್ದಲ್ಲದೆ, ಸಂಭ್ರಮಾಚರಣೆ ಯನ್ನೂ ನಡೆಸಿ ಖುಷಿಪಡಲಾಗಿತ್ತು. ಇಷ್ಟೆಲ್ಲ ಆದರೂ, ಕಳಸಾ-ಬಂಡೂರಿ ನಾಲಾ ಯೋಜನೆಯ 7.56 ಟಿಎಂಸಿ ಅಡಿ ನೀರಿನಲ್ಲಿ ಒಂದು ಹನಿ ನೀರನ್ನೂ ತರಲು ಸಾಧ್ಯವಾಗಿಲ್ಲ.ಇದಲ್ಲದೆ ಹತ್ತಾರು ಯೋಜನೆಗಳು ಅನುದಾನವಿಲ್ಲದೆ ಬಡವಾಗಿವೆ.
ಏನು ಪರಿಹಾರ: ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವಾಲ­ಯದ ಜೊತೆ ಮಾತುಕತೆ ನಡೆಸಿ ಯೋಜನೆ ಅನುಷ್ಠಾನಗೊಳಿಸಬೇಕು.

ಉತ್ತರ ಭಾಗದ ಆರೋಗ್ಯ ಕ್ಷೇತ್ರಕ್ಕೆ ತಟ್ಟಿದ ಅನಾರೋಗ್ಯ
ಉತ್ತರ ಕರ್ನಾಟಕದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಜಿಲ್ಲಾಸ್ಪತ್ರೆವರೆಗೂ ಒಂದಿದ್ದರೆ ಒಂದಿಲ್ಲ ಎನ್ನುವ ಸ್ಥಿತಿ ಇದೆ. ಬಹುತೇಕ ಜಿಲ್ಲೆಗಳಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ, ಮಹಿಳೆಯ­ರಲ್ಲಿ ರಕ್ತಹೀನತೆ ಹೆಚ್ಚಿದೆ. ಪ್ರಾಥಮಿಕ
ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿದ್ದರೆ, ಸಲಕರಣೆಗಳಿಲ್ಲ, ಸಲಕರಣೆಗಳಿ­ದ್ದರೆ ಔಷಧ ಇಲ್ಲ, ಹಲವೆಡೆ ಇವುಗಳಾವುವೂ ಸರಿಯಾಗಿಲ್ಲ. ಅವಿಭಜಿತ ಕಲಬುರಗಿ ಜಿಲ್ಲೆ-86, ಬೀದರ-34, ಅವಿಭ­ಜಿತ ಬಳ್ಳಾರಿ-35, ರಾಯಚೂರು-26, ಕೊಪ್ಪಳ-28, ವಿಜಯಪುರ-42, ಬಾಗಲಕೋಟೆ-40, ಗದಗ-19, ಧಾರವಾಡ-­29, ಹಾವೇರಿ-27, ಬೆಳಗಾವಿ-74, ಉತ್ತರ ಕನ್ನಡ -30 ಹೀಗೆ ಒಟ್ಟು 470 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 24/7 ಪಿಎಚ್‌ಸಿಗಳೆಂದು ಪರಿವರ್ತಿಸಲಾ­ಗಿದೆಯಾದರೂ ಅಲ್ಲಿಯೂ ಇದೇ ದುಸ್ಥಿತಿ ಇದೆ.
ಏನು ಪರಿಹಾರ: ಉತ್ತರ ಕರ್ನಾಟಕದ ಕಿಮ್ಸ್‌, ಬಿಮ್ಸ್‌, ರಿಮ್ಸ್‌ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಕರ್ಯಗಳನ್ನು ಕಲ್ಪಿಸುವ ಜವಾಬ್ದಾರಿ ಸರ್ಕಾರದ ಮುಂದಿದೆ. ಸಕಾಲಕ್ಕೆ ವೈದ್ಯರ ನೇಮಕ ಮಾಡಬೇಕು.

Advertisement

ಕಲ್ಯಾಣ ಭಾಗದಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ನರ್ತನ
ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಬೀದರ ಜಿಲ್ಲೆಯಲ್ಲಿ 100 ಮಕ್ಕಳಲ್ಲಿ 30 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರಂತೆ. ಮಕ್ಕಳಲ್ಲಿ ವಯೋಮಾನಕ್ಕೆ ತಕ್ಕ ಕಡಿಮೆ ತೂಕದಲ್ಲಿ ಕಲಬುರಗಿ ಜಿಲ್ಲೆ ಹೆಚ್ಚಿನ ಪ್ರಮಾಣದಲ್ಲಿದ್ದು ಶೇ.56.6 ಮಕ್ಕಳೆಂದು ಅಂದಾಜಿಸಲಾಗಿದೆ. ನಂತರದ ಸ್ಥಾನ ಬಳ್ಳಾರಿ, ಯಾದಗಿರಿ, ಕೊಪ್ಪಳ, ಬಾಗಲಕೋಟೆ ಜಿಲ್ಲೆಯದ್ದಾಗಿದೆ. ಇನ್ನು ಎತ್ತರಕ್ಕೆ ತಕ್ಕಂತೆ
ಕಡಿಮೆ ತೂಕದ ಮಕ್ಕಳಲ್ಲಿ ರಾಯಚೂರು ಜಿಲ್ಲೆಯಲ್ಲಿ ಶೇ.34.2 ಇದ್ದರೆ ನಂತರದ ಸ್ಥಾನ ಬೀದರ, ವಿಜಯಪುರ, ಬೆಳಗಾವಿ ಜಿಲ್ಲೆಗಳದ್ದಾಗಿದೆ. ಕುಂಠಿತ ಬೆಳವಣಿಗೆ ಹೊಂದಿದ ಮಕ್ಕಳಲ್ಲಿ ಕೊಪ್ಪಳ ಜಿಲ್ಲೆಯ ಶೇ.55.7 ಇದ್ದರೆ ನಂತರದ ಸ್ಥಾನ ಕಲಬುರಗಿ, ಯಾದಗಿರಿ, ಬಳ್ಳಾರಿ, ಬಾಗಲಕೋಟೆ ಜಿಲ್ಲೆಗಳದ್ದಾಗಿದೆ.
ಏನು ಪರಿಹಾರ: ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಅಪೌಷ್ಟಿಕತೆ ನಿವಾರಣೆಗೆ ಒತ್ತು ನೀಡಬೇಕು. ಇದಕ್ಕಾಗಿ ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಅಪೌಷ್ಟಿಕ ನಿವಾರಣಾ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಸಂಬಂಧ ಅನುದಾನವನ್ನು ಸರ್ಕಾರವು ಕಾಲ ಕಾಲಕ್ಕೆ ಬಿಡುಗಡೆ ಮಾಡಬೇಕು.

ಕಳೆಗುಂದಿದ ಉತ್ತರ ಕರ್ನಾಟಕದ ಪ್ರವಾಸೋದ್ಯಮ
ವಿಶ್ವವಿಖ್ಯಾತ ಹಂಪಿ, ಬಾದಾಮಿ, ವಿಜಯಪುರ ಹೀಗೆ ಸಾಲು ಸಾಲು ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿದ್ದರೂ ಪ್ರವಾಸೋದ್ಯಮ ನಿರೀಕ್ಷಿತ ಮಟ್ಟದಲ್ಲಿ ಬೆಳೆದಿಲ್ಲ. ಗದಗ ಜಿಲ್ಲೆಯ ಲಕ್ಕುಂಡಿಯ ಶಿಲ್ಪಕಲಾ ಸಂಪತ್ತು ತಿಪ್ಪೆಗುಂಡಿ­ಯಲ್ಲಿ ಮುಳುಗಿದೆ. ಶಾಸನಗಳು ದನಕಟ್ಟುವ ಸಾಧನಗಳಾಗಿ ಬಳಕೆ ಆಗುತ್ತಿವೆ. ಗದುಗಿನ ವೀರನಾರಾಯಣ ದೇಗುಲ ಇತ್ತೀಚೆಗಷ್ಟೇ ಅತಿಕ್ರಮಣದಿಂದ ಮುಕ್ತಿಗೊಂಡು ಮೂಲ­ರೂಪ­ದಲ್ಲಿ ಗೋಚರಿಸುವಂತಾಗಿದೆ. ಅದ್ಬುತ ಕಲಾಕೃತಿಯ ಹುಬ್ಬಳ್ಳಿಯ ಚಂದ್ರಮೌಳೇಶ್ವರ ದೇಗುಲ ಸ್ಥಳೀಯರಿಗೂ ಪರಿಚಯವಿಲ್ಲದಂತಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಸರ್ಗವಿದ್ದರೂ ಪ್ರವಾಸಿಗರ ಸೆಳೆಯಲು ಮೂಲ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿದೆ.
ಏನು ಪರಿಹಾರ: ಲಕ್ಕುಂಡಿ, ಬಾದಾಮಿ, ಐಹೊಳೆ, ಪಟ್ಟದಕಲ್ಲು ಸೇರಿದಂತೆ ಪ್ರಮುಖ ತಾಣಗಳ ಅಭಿವೃದ್ಧಿಗೆ ಒತ್ತು ನೀಡಿ ಸೌಕರ್ಯ ಕಲ್ಪಿಸಬೇಕು. ವಿಶ್ವಪಾರಂಪರಿಕ ತಾಣಗಳ ಮಾದರಿಯಲ್ಲಿ ಅನುದಾನ ನೀಡಬೇಕು.

ಗುಣಮಟ್ಟದ ಶಿಕ್ಷಣ, ಕ್ರೀಡಾ ಕ್ಷೇತ್ರಕ್ಕೆ ಸೌಲಭ್ಯ ಕೊರತೆ
ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯು ಪರೀಕ್ಷಾ ಫಲಿತಾಂಶದಲ್ಲಿ ನೀರಸ ಪ್ರದರ್ಶನವಿದೆ. ಇದಕ್ಕೆ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಸರ್ಕಾರಿ ಪದವಿ, ಎಂಜಿನಿಯರಿಂಗ್‌ ಕಾಲೇಜುಗಳು ಅತಿಥಿ ಉಪನ್ಯಾಸಕರಿಂದಲೇ ನಡೆಯುವಂತಾ­ಗಿದೆ. ಪ್ರೌಢಶಾಲೆಗಳಲ್ಲಿಯೂ ಅತಿಥಿ ಶಿಕ್ಷಕರನ್ನು ಅವಲಂಬಿಸಬೇಕಾಗಿದೆ. ಇಂದಿಗೂ ಇಲ್ಲಿನ ಹಲವು ಜಿಲ್ಲೆಗಳ ವಿದ್ಯಾರ್ಥಿಗಳು ಪಿಯು ಕಾಲೇಜು, ವೃತ್ತಿ ಶಿಕ್ಷಣಕ್ಕೆ ಹೋಗಬೇಕಾದರೆ ಕನಿಷ್ಠ 30-40 ಕಿಮೀ ಕ್ರಮಿಸಬೇಕು. ಕ್ರೀಡಾ ಪ್ರೋತ್ಸಾಹವೂ ಇದಕ್ಕೆ ಹೊರತಾಗಿಲ್ಲ. ಜಿಲ್ಲಾ, ತಾಲೂಕು ಮಟ್ಟದಲ್ಲಿ ಉತ್ತಮ ಮೈದಾನಗಳಿಲ್ಲ. ವಿಜಯಪುರ-ಬಾಗಲಕೋಟೆ ಜಿಲ್ಲೆಗಳಲ್ಲಿ ವಿಶ್ವ ಪ್ರತಿನಿಧಿಸುವ ಸಾಮರ್ಥ್ಯ ಸೈಕ್ಲಿಸ್ಟ್‌ಗಳಿದ್ದರೂ ಅವರು ವಿಶ್ವಮಟ್ಟದಲ್ಲಿ ಸ್ಪರ್ಧೆ ಮಾಡುವುದಕ್ಕೆ ತಕ್ಕುದಾದ ಅಭ್ಯಾಸ ಮಾಡುವ ಟ್ರಾÂಕ್‌ ಇಲ್ಲವಾಗಿದ್ದು, ಪ್ರೋತ್ಸಾಹ ಹೆಚ್ಚಬೇಕಿದೆ.

ಏನು ಪರಿಹಾರ: ಉತ್ತರ ಕರ್ನಾಟಕದ ಮಕ್ಕಳು-ಶಿಕ್ಷಕರ ಅನುಪಾತ ಕೊರತೆಯನ್ನು ತಗ್ಗಿಸಬೇಕು. ಸರ್ಕಾರಿ ಶಾಲೆಗಳಿಗೆ ಸಮರ್ಪಕವಾಗಿ ಶಿಕ್ಷಕರ ನ್ನು ಸರ್ಕಾರ ನೇಮಕ ಮಾಡಬೇಕು. ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಉತ್ತಮ ಸೌಕರ್ಯ ಕಲ್ಪಿಸಬೇಕು. ಅಂತಾರಾಷ್ಟ್ರೀಯ ದರ್ಜೆಯ ಮೈದಾನಗಳು ನಿರ್ಮಾಣ ಆಗಬೇಕು.

ಕುಡಿಯುವ ನೀರಿನ ಕೊರತೆ, ಕಲುಷಿತ ನೀರಿನ ಭಯ!
ಉತ್ತರ ಕರ್ನಾಟಕದಲ್ಲಿ ಬೇಸಿಗೆ ಎದುರಾದರೆ ಸಾಕು ಪ್ರತಿವರ್ಷ ಕುಡಿಯುವ ನೀರಿಗೆ ಪರ­ದಾಟ ಶುರುವಾಗುತ್ತದೆ. ನದಿಗಳು ಬತ್ತುತ್ತಿದ್ದು, ಒಂದು ಟಿಎಂಸಿ ಅಡಿ ನೀರನ್ನು 1, 2 ಕೋಟಿ ರೂ. ನೀಡಿಯೂ ಮಹಾರಾಷ್ಟ್ರದ ಮುಂದೆ ಮಂಡಿಯೂರಬೇಕಿದೆ. ಯಾದಗಿರಿ, ರಾಯಚೂರು ಕೆಲ ಜಿಲ್ಲೆಗಳಲ್ಲಿ ನೀರಿನಲ್ಲಿ ಆರ್ಸೆನಿಕ್‌ (ವಿಷ ಪಾಷಣ)ಅಂಶವಿದ್ದು, ಚರ್ಮ ಕ್ಯಾನ್ಸರ್‌, ಮೂತ್ರಪಿಂಡ, ಹೃದಯ ರೋಗಗಳನ್ನು ತಂದೊಡ್ಡಿದೆ. ಕೊಪ್ಪಳ, ಗದಗ ಜಿಲ್ಲೆಗಳಲ್ಲಿ ನೀರಿನಲ್ಲಿ ಪ್ಲೋರೈಡ್‌ ಅಂಶ ಅಧಿಕವಾಗಿದೆ. ಕಲ್ಯಾಣ ಕರ್ನಾಟಕ ಸೇರಿ ಹಲವು ಜಿಲ್ಲೆಗಳಲ್ಲಿ ಕಲುಷಿತ ನೀರು ಸೇವನೆ ಕಾರಣದಿಂದ ಅತಿಸಾರ ಕಾಯಂ ಸಮಸ್ಯೆಯಾಗಿದೆ. ಇದಕ್ಕೆ ಹಲವರು ಈಗಾಗಲೇ ಜೀವ ಕಳೆದುಕೊಂಡಿದ್ದಾರೆ.

ಏನು ಪರಿಹಾರ: ಕಲ್ಯಾಣ ಕರ್ನಾಟಕದಲ್ಲಿ ಕಲುಷಿತ ನೀರು ಪೂರೈಕೆಯಿಂ­ದಾಗುವ ಅನಾಹುತಗಳನ್ನು ತಡೆಯಲು ಶಾಶ್ವತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಜಲಜೀವನ ಮಿಷನ್‌ ತ್ವರಿತ ಅನುಷ್ಠಾನ ಮಾಡಬೇಕು.

ಬೆಂಗಳೂರು ಬಿಟ್ಟು ಬಾರದ ಉದ್ಯಮ, ಐಟಿ-ಬಿಟಿಗಳು
ಉತ್ತರ ಕರ್ನಾಟಕದಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಉದ್ಯಮಗಳೇ ಇಲ್ಲ. ಇಲ್ಲಿನ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಕೈಗಾರಿಕಾ ವಲಯ ಎಂದು ಭೂಮಿ ನಿಗದಿಪಡಿಸಲಾ­ಗಿದ್ದರೂ ಮುಳ್ಳು-ಕಂಟಿಯ ಸ್ಥಳವಾಗಿದ್ದು, ನೀರು, ಸಾರಿಗೆ ಸೌಲಭ್ಯಗಳೂ ಇಲ್ಲ.

ಧಾರವಾ­ಡದ ಮುಮ್ಮಿಗಟ್ಟಿಯಲ್ಲಿ ರಾಜ್ಯದ ಮೊದಲ ಎಫ್‌ಎಂಸಿಜಿ ಕ್ಲಸ್ಟರ್‌ ಆರಂಭ ವಾಗಿದ್ದರೂ ಅನೇಕ ಉದ್ಯಮಗಳಿಗೆ ಭೂಮಿ ಸಿಕ್ಕಿಲ್ಲ. ಯಾದಗಿರಿಯ ಕಡೇಚೂರನಲ್ಲಿ ಫಾರ್ಮಾ ಪಾರ್ಕ್‌ ನಿರ್ಮಾಣವಾಗಿಲ್ಲ. ಗದಗ, ಹಾವೇರಿ ಜಿಲ್ಲೆಗಳು ಉದ್ಯಮಗಳ ಬರವನ್ನು ಎದುರಿಸುತ್ತಿವೆ. ಐಟಿ-ಬಿಟಿ ಹೆಸರಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮ ಬೆಳೆದಿದ್ದು ಬಿಟ್ಟರೆ ಪ್ರಯೋಜನ ಆಗಿಲ್ಲ. ಎಸ್‌.ಎಂ.ಕೃಷ್ಣ ಅವಧಿಯಲ್ಲಿ ಐಟಿ ಪಾರ್ಕ್‌ ನಿರ್ಮಾಣ ಮಾಡಲಾಯಿತು. ಹುಬ್ಬಳ್ಳಿಯ ನವನಗರದಲ್ಲಿ ಆರ್ಯಭಟ ಟೆಕ್‌ ಪಾರ್ಕ್‌ ನಿರ್ಮಾಣ ಮಾಡಲಾಗಿದ್ದು, ಭೂಮಿ ಪಡೆದ ಕೆಲ ಕಂಪನಿಯವರು 10 ವರ್ಷ ಉದ್ಯಮವನ್ನೇ ಆರಂಭಿಸಿಲ್ಲ. ಇದೀಗ ಹಲವು ಸಬೂಬುಗಳನ್ನು ಹೇಳುತ್ತಾ ಭೂಮಿ ಬೇಡ, ನೀಡಿದ ಹಣ ವಾಪಸ್‌ ಕೊಡಿ ಎಂದು ಮೊರೆ ಇಟ್ಟಿದ್ದಾರೆ.
ಏನು ಪರಿಹಾರ: ಬಿಯಾಂಡ್‌ ಬೆಂಗಳೂರು ಅನುಷ್ಠಾನಕ್ಕೆ ಆದ್ಯತೆ ನೀಡ­ಬೇಕು. ಉತ್ತರ ಕರ್ನಾಟಕದ ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಮೂಲ ಸೌಕರ್ಯ ಕಲ್ಪಿಸಬೇಕು.

ಸಂಕಷ್ಟಗಳ ಸರಮಾಲೆಯೊಳಗೆ ಕೃಷಿ – ಅನ್ನದಾತ
ಉತ್ತರ ಕರ್ನಾಟಕ ಕೃಷಿಯು ಅತಿವೃಷ್ಟಿ ಅಥವಾ ಅನಾವೃಷ್ಟಿಗೆ ತುತ್ತಾಗುತ್ತಲೇ ಬರುತ್ತಿದೆ. ಪಂಪ್‌ಸೆಟ್‌ ಆಧಾರಿತ ಕೃಷಿಗೆ ಸಮರ್ಪಕ ವಿದ್ಯುತ್‌ ದೊರೆಯುತ್ತಿಲ್ಲ. ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರಿ ಜಿಲ್ಲೆಯ ಕೆಲ ತಾಲೂಕುಗಳ ಹೊಲಗಳು ರಸಗೊಬ್ಬರ, ಕ್ರಿಮಿನಾಶಕಗಳ ಬಳಕೆಯಿಂದ ವಿಷದ ಬಟ್ಟಲುಗಳಾಗುತ್ತಿವೆ. ದಾಳಿಂಬೆ, ದ್ರಾಕ್ಷಿ, ಚಿಕ್ಕು, ಮಾವು, ಬಾಳೆ ಇನ್ನಿತರ ಹಣ್ಣುಗಳನ್ನು ಬೆಳೆಯುವ ಪ್ರದೇಶ ಇದಾಗಿದ್ದರೂ ಶೈತ್ಯಾಗಾರಗಳ ಕೊರತೆಯಿಂದ ದಲ್ಲಾಳಿಗಳು ಕೇಳಿದ ದರಕ್ಕೆ ಮಾರಬೇಕಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಕಳೆದ ಎರಡು ದಶಕಗಳ ಹಿಂದೆ ಆರಂಭಗೊಂಡ ವೈನ್‌ಪಾರ್ಕ್‌ ಇಂದಿಗೂ ಪೂರ್ಣಗೊಂಡಿಲ್ಲ. ಇನ್ನು ಸಾಕಷ್ಟು ಸಂಖ್ಯೆಯ ಸಕ್ಕರೆ ಕಾರ್ಖಾನೆಗಳಿದ್ದರೂ ಕಬ್ಬು ಬೆಳೆಗಾರರಿಗೆ ಮಾತ್ರ ನಿರೀಕ್ಷಿತ ಲಾಭ ದೊರೆಯುತ್ತಿಲ್ಲ.
ಏನು ಪರಿಹಾರ: ಅತಿವೃಷ್ಟಿ-ಅನಾವೃಷ್ಟಿ ಪರಿಹಾರಗಳ ತ್ವರಿತ ವಿತರಣೆ ಸೇರಿದಂತೆ ಬೆಳೆಸಾಲ, ಬೀಜೋಪಚಾರವನ್ನು ಸಕಾಲದಲ್ಲಿ ನೀಡುವುದರ ಜೊತೆಗೆ ಬೆಂಬಲ ಬೆಲೆ ಖರೀದಿ ಕೇಂದ್ರಗಳ ಸ್ಥಾಪನೆಯಾಗಬೇಕು.

ರಾಜಕೀಯಕ್ಕೆ ಅಸ್ತ್ರ ವಾದ “371(ಜೆ) ಕಲಂ’
371(ಜೆ)ಕಲಂನಡಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಶೈಕ್ಷಣಿಕ ಪ್ರವೇಶ, ಉದ್ಯೋಗ ನೇಮಕದಲ್ಲಿ ಅವಕಾಶಗಳು ಆ ಪ್ರದೇಶದವರಿಗೆ ತಕ್ಕಮಟ್ಟಿಗೆ ಲಭಿಸಿವೆ ಎಂಬ ಸಂತಸವಿದೆ. ಈ ಭಾಗದ ಅಭಿವೃದ್ಧಿಗೆ ಹಣ ಕೇಳಿದರೆ ಎಲ್ಲದಕ್ಕೂ 371(ಜೆ)ಕಲಂನಡಿ ರಚನೆಗೊಂಡ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಕಡೆ ಕೈ ತೋರಿಸುತ್ತಿದೆ. ಸರ್ಕಾರ 3,000 ಕೋಟಿ ರೂ. ಹಣವನ್ನು ಮಂಡಳಿಗೆ ನೀಡಿದ್ದಾಗಿ ತಿಳಿಸುತ್ತಿದೆ. ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಮಾಡಬೇಕೆಂಬ ಬೇಡಿಕೆಗೆ ಸ್ಪಂದನೆ ದೊರೆತಿಲ್ಲ. ಮೊದಲು ಇದೊಂದು ರಾಜಕೀಯ ಅಸ್ತ್ರವೂ ಆಗಿತ್ತು.
ಏನು ಪರಿಹಾರ: ಕಲ್ಯಾಣದ 8 ಜಿಲ್ಲೆಗಳಲ್ಲಿ ಕೇಂದ್ರ ನೀಡಿರುವ ವಿಶೇಷ ಸೌಲಭ್ಯಗಳ ಅನುಷ್ಠಾನಕ್ಕೆ ಅನುದಾನ ಅನುಷ್ಠಾನಕ್ಕೆ ಮೇಲ್ವಿಚಾರಣೆ ಸಮಿತಿ ರಚಿಸಬೇಕು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ವಾರ್ಷಿಕ ಅನುದಾನವನ್ನು ಸಕಾಲಕ್ಕೆ ನೀಡಬೇಕು.

ಅಪೂರ್ಣವಾಗಿಯೇ ಉಳಿದ ನಂಜುಂಡಪ್ಪ ವರದಿ
ಪ್ರಾದೇಶಿಕ ಅಸಮತೋಲನ ನಿವಾರಣೆಗೆ ರೂಪಿಸಲಾಗಿದ್ದ ಆರ್ಥಿಕ ತಜ್ಞ ಡಾ|ಡಿ.ಎಂ.ನಂಜುಂಡಪ್ಪ ನೇತೃತ್ವದ ಆಯೋ­ಗದ ವರದಿಯು ಈವರೆಗೂ ಸಮರ್ಪಕ ಅನುಷ್ಠಾನ ಕಂಡಿಲ್ಲ. 8 ವರ್ಷಗಳ ಕಾಲಮಿತಿ ಯೋಜ­ನೆಯಡಿ ಏನೆಲ್ಲ ಮಾಡಬೇ­ಕೆಂದು ಆಯೋಗ ವರದಿಯಲ್ಲಿ ಹೇಳಿತ್ತು. ಅದರಂತೆ 8 ವರ್ಷಗಳಲ್ಲಿ ಪ್ರತಿ ವರ್ಷ ಬಜೆಟ್‌ನಲ್ಲಿ 2,000 ಕೋಟಿ ರೂಪಾಯಿ ಹಾಗೂ ವಿಶೇಷ ಅಭಿವೃದ್ಧಿ ಯೋಜನೆ­ಯಡಿ ಪ್ರತಿ ವರ್ಷ 2,000 ಕೋಟಿ ರೂ. ಸೇರಿ ಟ್ಟು 32,000 ಕೋಟಿ ರೂ. ವೆಚ್ಚ ಮಾಡಲು ಹೇಳಲಾಗಿತ್ತು. ಸರ್ಕಾರ ಬಜೆಟ್‌ನಲ್ಲಿ ಹಣ ನೀಡಿತಾದರೂ, ಎಸ್‌ಡಿಪಿ ಅಡಿಯಲ್ಲಿ ನೀಡಬೇಕಾದ ಅಂದಾಜು 15-16 ಸಾವಿರ ಕೋಟಿ ರೂ.ವನ್ನು ಇಂದಿಗೂ ನೀಡಿಲ್ಲ.
ಏನು ಪರಿಹಾರ: ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ನೀಡಿದ ನಂಜುಂಡಪ್ಪ ವರದಿ ಬಂದು ದಶಕಗಳೇ ಕಳೆದಿದ್ದರೂ ಕಾಗದಕ್ಕೆ ಸೀಮಿತವಾಗಿದೆ. ಇದು ಕಾರ್ಯರೂಪಕ್ಕೆ ಬರಬೇಕು. ಇದಕ್ಕಾಗಿ ವಿವಿಧ ಕ್ಷೇತ್ರಗಳಿಗೆ ಹಣಕಾಸಿನ ನೆರವು ನೀಡಬೇಕು.

ಜನಪ್ರತಿನಿಧಿಗಳಿಂದ ಬೇಕಿದೆ ಸಂಘಟಿತ-ಗಟ್ಟಿ ಧ್ವನಿ
ವೀರೇಂದ್ರ ಪಾಟೀಲರಿಂದ ಹಿಡಿದು ಬಸವರಾಜ ಬೊಮ್ಮಾಯಿವರೆಗೆ ಉತ್ತರ ಕರ್ನಾಟಕದವರೇ ಆರೇಳು ಜನರು ಮುಖ್ಯಮಂತ್ರಿಯಾಗಿದ್ದರೂ ಉತ್ತರ ಕರ್ನಾಟಕ ಹಿಂದುಳಿದಿದೆ ಎಂದರೆ ಹೇಗೆ, ಯಾರು ಕಾರಣರು ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಇನ್ನು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುವ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ, ಅಭಿವೃದ್ಧಿ ಬಗ್ಗೆ ಹೆಚ್ಚಿನ ಚರ್ಚೆ ನಡೆಯಬೇಕಿದ್ದು, ಈ ಭಾಗದ ಜನಪ್ರತಿನಿಧಿಗಳೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಉತ್ತರ ಕರ್ನಾಟಕ ಅಭಿವೃದ್ಧಿ ಎಂದು ಬಂದಾಗ ಸಂಘಟಿತ ಧ್ವನಿ ಮೊಳಗಬೇಕಿದೆ. ಸದನದಲ್ಲಿ ಸಮರ್ಥ ವಾದ ಮಂಡನೆ, ಅಂಕಿ-ಅಂಶ ಸಮೇತ ವಿಷಯ ಪ್ರಸ್ತಾವನೆ, ಹಿಂದಿನ ಚರ್ಚೆ, ಪ್ರಸ್ತಾಪ ಎಷ್ಟರ ಮಟ್ಟಿಗೆ ಅನುಷ್ಠಾನಗೊಂಡಿದೆ ಎಂಬುದರ ವಾಸ್ತವಾಂಶವನ್ನು ಅನಾವರಣಗೊಳಿಸುವ ಜನಪ್ರತಿನಿಧಿಗಳ ಅವಶ್ಯಕತೆ ಉತ್ತರ ಕರ್ನಾಟಕಕ್ಕೆ ಹೆಚ್ಚಿನದಾಗಿದೆ.

ಏನು ಪರಿಹಾರ: ಉತ್ತರ ಕರ್ನಾಟಕದ ಪ್ರಗತಿಗೆ ಕಲ್ಯಾಣ, ಕಿತ್ತೂರು ಭಾಗದ ಶಾಸಕರು ಅಧಿವೇಶನದಲ್ಲಿ ಒಂದಾಗಿ ಅಭಿವೃದ್ಧಿ ಹಾಗೂ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕು. ಮೊದಲ ವಾರದಲ್ಲಿ ಚರ್ಚೆಗೆ ಪಟ್ಟು ಹಿಡಿಯಬೇಕು. ಪ್ರಮುಖ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬೇಕು.

*ಅಮರೇಗೌಡ ಗೊನವಾರ

Advertisement

Udayavani is now on Telegram. Click here to join our channel and stay updated with the latest news.

Next