ಸವದತ್ತಿ : ಬೆಳಗಾವಿ ವೈದ್ಯಕೀಯ ಮಹಾವಿದ್ಯಾಲಯದ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಬೆಳಗಾವಿಯಿಂದ ಗದಗ ಜಿಲ್ಲೆಗೆ ತೆರಳುವಾಗ ಸವದತ್ತಿ ತಾಲೂಕಿನ ಯಕ್ಕೇರಿ ಗ್ರಾಮದ ಹತ್ತಿರ ಅಪಘಾತ ಸಂಭವಿಸಿ ವಾಹನ ಪಲ್ಟಿ ಆದ ದುರ್ಘಟನೆ ಬುಧವಾರ ಜರುಗಿದೆ.
ಬೆಳಗಾವಿಯಿಂದ ಗದಗ ಜಿಲ್ಲೆಗೆ ಫುಟ್‍ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ತೆರಳುತ್ತಿದ್ದ ಸಂದರ್ಭ ಟಿಪ್ಪರ್ ಅಡ್ಡ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ವಿದ್ಯಾರ್ಥಿಗಳಿದ್ದ ವಾಹನ ಪಲ್ಟಿಯಾಗಿದೆ.
ಘಟನೆ ನಡೆದ ಕೂಡಲೇ ಗ್ರಾಮಸ್ಥರು ವಿದ್ಯಾರ್ಥಿಗಳ ನೆರವಿಗೆ ಧಾವಿಸಿದ್ದಾರೆ. ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಒಟ್ಟು ವಾಹನದಲ್ಲಿ 21 ವಿದ್ಯಾರ್ಥಿಗಳಿದ್ದು ಬಹುತೇಕರು ಗಾಯಗೊಂಡಿದ್ದಾರೆ. ಓರ್ವ ವಿದ್ಯಾರ್ಥಿಗೆ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಕಾಲೇಜು ಪ್ರಾಂಶುಪಾಲರ ವಿನಂತಿ ಮೇರೆಗೆ ವಿದ್ಯಾರ್ಥಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಗೆ ಕಳುಹಿಸಲಾಗಿದೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ ಪ್ರಶಾಂತ ಪಾಟೀಲ, ಟಿಎಚ್‍ಓ ಡಾ. ಮಹೇಶ ಚಿತ್ತರಗಿ ಸಹಿತ ಪೊಲೀಸರು ಭೇಟಿ ನೀಡಿದ್ದಾರೆ.
ಸವದತ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.