Advertisement

Belagavi: ಫ್ಲೈ ಓವರ್‌ ಯೋಜನೆಗೆ ಮರುಜೀವ?

06:43 PM Aug 18, 2023 | Team Udayavani |

ಬೆಳಗಾವಿ: ಎರಡನೇ ರಾಜಧಾನಿ ಸ್ಥಾನಮಾನ ನಿರೀಕ್ಷೆಯಲ್ಲಿರುವ ಬೆಳಗಾವಿ ಜನರಿಗೆ ಬಹಳ ದಿನಗಳ ನಂತರ ಮತ್ತೂಂದು ಕನಸು ನನಸಾಗುವ ಕಾಲ ಕೂಡಿ ಬಂದಿದೆ. ನಗರದಲ್ಲಿ ವಾಹನ ದಟ್ಟಣೆ ಕಡಿಮೆ ಮಾಡುವುದಕ್ಕಾಗಿ ಮೊದಲ ಹಂತದಲ್ಲಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಿಂದ ಬೋಗಾರ್‌ ವೇಸ್‌ವರೆಗೆ ರಸ್ತೆ ಮೇಲ್ಸೇತುವೆ(ಫ್ಲೈಓವರ್‌ )ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿರುವುದು ಈ ಭಾಗದ ಜನರಲ್ಲಿ ಹೊಸ ಕನಸು ಚಿಗುರೊಡೆದಿದೆ. ಅಭಿವೃದ್ಧಿಯ ಹೊಸ ಬಾಗಿಲು ತೆರೆಯುವ ಲಕ್ಷಣಗಳು ಕಾಣುತ್ತಿವೆ.

Advertisement

ಸಚಿವರ ನಿರ್ದೇಶನದಂತೆ ಈ ಓವರ್‌ ನಿರ್ಮಾಣದ ವಿವರವಾದ ಯೋಜನಾ ವರದಿ ಈಗಾಗಲೇ ಸಿದ್ಧವಾಗಿದೆ. ಈ ಮೊದಲು
ಲೋಕೋಪಯೋಗಿ ಇಲಾಖೆ ವತಿಯಿಂದ ಇದರ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಲಾಗಿತ್ತು. ಆದರೆ ಹಣಕಾಸಿನ ಲಭ್ಯತೆ ಕೊರತೆಯಿಂದ ಈಗ ಕಾಮಗಾರಿಯ ಜವಾಬ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವಹಿಸಿಕೊಡಲಾಗಿದೆ. ಎಲ್ಲವೂ
ಅಂದುಕೊಂಡಂತೆ ನಡೆದರೆ ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ಸಿಗಲಿದೆ.

ಫ್ಲೈಓವರ್‌ಗೆ ದಶಕದ ಇತಿಹಾಸ: ಹಾಗೆ  ನೋಡಿದರೆ ಬೆಳಗಾವಿ ನಗರದಲ್ಲಿ ಫ್ಲೈಓವರ್‌ ನಿರ್ಮಾಣಕ್ಕೆ 2015ರಲ್ಲೇ ಚಾಲನೆ ಸಿಕ್ಕಿತ್ತು. ಆಗ ಗಾಂಧಿನಗರದಿಂದ ಸಿಬಿಟಿವರೆಗೆ ಮೇಲ್ಸೇತುವೆ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಅದನ್ನು 100 ಕೋಟಿ ರೂ.ಗಳ ಪ್ರಸ್ತಾವನೆಯೊಂದಿಗೆ ಸ್ಮಾರ್ಟ್‌ ಸಿಟಿ ಯೋಜನೆಯಡಿಯಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಯಿತು. ರಸ್ತೆ ಮೇಲ್ಸೇತುವೆ ವೆಚ್ಚ 185 ಕೋ.ರೂ.ಗಳಿಗೆ ಹೆಚ್ಚಾದ ಕಾರಣ ರಾಜ್ಯ ಸರ್ಕಾರ ಅನುದಾನ ನೀಡಲಿಲ್ಲ. ಇದರಿಂದ ಯೋಜನೆ ಮೇಲೇಳಲೇ ಇಲ್ಲ.

ಸಮ್ಮಿಶ್ರ ಸರಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಎಚ್‌.ಡಿ. ರೇವಣ್ಣ ಅವರು ಫ್ಲೈಓವರ್‌ ನಿರ್ಮಾಣಕ್ಕೆ 100 ಕೋಟಿ
ತೆಗೆದಿಟ್ಟಿದ್ದರು. ಆದರೆ ಯೋಜನೆ ಕಾರ್ಯಗತಕ್ಕೆ ಬರಲಿಲ್ಲ. ಇದಕ್ಕೆ ನಿಗದಿಯಾಗಿದ್ದ 100 ಕೋಟಿ ಅನುದಾನವನ್ನು ಬೇರೆ ಯೋಜನೆಗೆ ಬಳಸಲಾಯಿತು. ಫ್ಲೈಓವರ್‌ ಯೋಜನೆ ನನೆಗುದಿಗೆ ಬಿದ್ದಿತು. ನಂತರ ಬಿಜೆಪಿ ಸರಕಾರದ ಅವಧಿಯಲ್ಲಿ ಇದರ ಬಗ್ಗೆ ಹೆಚ್ಚು ಚರ್ಚೆಯಾಗಲೇ ಇಲ್ಲ.

ಮುಂದೆ 2018ರಲ್ಲಿ ಸ್ಮಾರ್ಟ ಸಿಟಿ ಯೋಜನೆಯಡಿ ರಾಷ್ಟ್ರೀಯ ಹೆದ್ದಾರಿ 4 ರಿಂದ ಗಾಂಧಿನಗರದಿಂದ ಆಶೋಕ ವೃತ್ತದ ಮೂಲಕ ಕೇಂದ್ರ ಬಸ್‌ ನಿಲ್ದಾಣವರೆಗೆ ಮೇಲ್ಸೇತುವೆ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಅದು ಅನುದಾನ ಕೊರತೆಯಿಂದ
ವಿಸ್ತ್ರತ ಯೋಜನಾ ವರದಿ ತಯಾರಿಸುವ ಮೊದಲೇ ನನೆಗುದಿಗೆ ಬಿದ್ದಿತು. ನಂತರ ಯೋಜನೆಯಲ್ಲಿ ಸಾಕಷ್ಟು ಬದಲಾವಣೆಗಳಾದರೂ ಪ್ರಯೋಜನವಾಗಲಿಲ್ಲ. ಗಾಂಧಿನಗರ ಜಂಕ್ಷನ್‌, ಮಹಾಂತೇಶ ನಗರ ಜಂಕ್ಷನ್‌, ಅಶೋಕ ಸರ್ಕಲ್‌
ಜಂಕ್ಷನ್‌ ಮತ್ತು ತರಕಾರಿ ಮಾರುಕಟ್ಟೆ ಜಂಕ್ಷನ್‌ ಈ ಮೊದಲಿನ ಯೋಜನೆ ಒಳಗೊಂಡಿತ್ತು. ಆದರೆ ಅಂದುಕೊಂಡಂತೆ ಆಗಲಿಲ್ಲ.

Advertisement

ಈಗ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಯೋಜನೆಗಾಗಿ ವಿಶೇಷ ಆಸಕ್ತಿ ವಹಿಸಿದ್ದು ಮತ್ತೆ ಫ್ಲೈಓವರ್‌ ಯೋಜನೆಗೆ ಮರುಜೀವ ನೀಡಲು ಮುಂದಾಗಿದ್ದಾರೆ. ಈ ಸಂಬಂಧ ಈಗಾಗಲೇ ಲೋಕೋಪಯೋಗಿ ಇಲಾಖೆ ಮತ್ತು ರಾಷ್ಟ್ರೀ ಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಸಚಿವರು 350 ಕೋಟಿ ರೂ ವೆಚ್ಚದ ಯೋಜನೆಗೆ ಶೀಘ್ರದಲ್ಲೇ
ಚಾಲನೆ ನೀಡುವ ಭರವಸೆ ನೀಡಿದ್ದಾರೆ.

ನವೀಕೃತ ಯೋಜನೆಯಂತೆ ಗಾಂಧಿನಗರದಿಂದ ಆರಂಭವಾಗಲಿರುವ ಫ್ಲೈ ಓವರ್‌ನ ಮೊದಲ ವಿಂಗ್‌ ಕಾಮಗಾರಿ ಕೇಂದ್ರ ಬಸ್‌ ನಿಲ್ದಾಣದವರೆಗೆ ನಡೆಯಲಿದೆ. ಎರಡನೇ ವಿಂಗ್‌ ಯೋಜನೆಯಲ್ಲಿ ಅಶೋಕ ವೃತ್ತದಿಂದ ಆರ್‌ಟಿಒ ವೃತ್ತ, ಚನ್ನಮ್ಮ ವೃತ್ತ ನಂತರ ಬೋಗಾರ್‌ ವೇಸ್‌ವರೆಗೆ ಫ್ಲೈ ಓವರ್‌ ನಿರ್ಮಾಣವಾಗಲಿದೆ ಎಂಬುದು ಅಧಿಕಾರಿಗಳ ಹೇಳಿಕೆ.

ಸಂಚಾರ ದಟ್ಟಣೆ ನಿವಾರಣೆ
ಸಂಚಾರ ದಟ್ಟಣೆ ಕಡಿಮೆ ಮಾಡಲು ನಗರದ ಸಂಕಮ್‌ ಹೋಟೆಲ್‌ ಬಳಿಯಿಂದ ಫ್ಲೈಓವರ್‌ ನಿರ್ಮಾಣ ಆರಂಭವಾಗಲಿದೆ. ಹೆದ್ದಾರಿಯ ಎರಡೂ ಕಡೆಯಿಂದ ಬಸ್‌ ನಿಲ್ದಾಣ, ಆರ್‌ಟಿಒ ವೃತ್ತ ಸೇರಿದಂತೆ ನಗರ ಪ್ರವೇಶಿಸುವ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿರ್ವಹಣೆ ಮಾಡುವುದು ಫ್ಲೈ ಓವರ್‌ ಮುಖ್ಯ ಉದ್ದೇಶವಾಗಿರಬೇಕು. ಅದೇ ರೀತಿಯಲ್ಲಿ ವಿನ್ಯಾಸ ರೂಪಿಸಬೇಕು.

ನಂತರ ಪೀರನವಾಡಿಯವರೆಗೆ ವಿಸ್ತರಿಸುವ ಬಗ್ಗೆ ಪರಿಶೀಲಿಸಬಹುದು ಎಂಬುದು ಸಚಿವ ಸತೀಶ ಜಾರಕಿಹೊಳಿ ಅವರ ಹೇಳಿಕೆ. ಈ ಫ್ಲೆ$çಓವರ್‌ ನಿರ್ಮಾಣಕ್ಕೆ ಸದ್ಯ ಯಾವುದೇ ಭೂ ಸ್ವಾಧೀನ ಸಮಸ್ಯೆ ಇಲ್ಲ. ಒಂದೆರಡು ಕಡೆ ಮಾತ್ರ ಅತೀ ಸಣ್ಣ ಪ್ರಮಾಣದಲ್ಲಿ ಭೂ ಸ್ವಾಧೀನಪಡಿಸಿಕೊಳ್ಳಬೇಕಾಗಬಹುದು. ಇದು ಯೋಜನೆಗೆ ಯಾವುದೇ ತೊಂದರೆಯುಂಟು ಮಾಡಲ್ಲ. ನಾಲ್ಕು ಪಥಗಳಲ್ಲಿ ಈ ಮೇಲ್ಸೇತುವೆ ನಿರ್ಮಾಣವಾಗಲಿದೆ.

ನಗರದ ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡುವುದು ಮತ್ತು ಸಾರ್ವಜನಿಕರ ಬಹು ದಿನಗಳ ಬೇಡಿಕೆಯಂತೆ ಫ್ಲೈ ಓವರ್‌ ನಿರ್ಮಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಈಗಾಗಲೇ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ಅಂದಾಜು 350  ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆ ಸಿದ್ಧವಾಗಿದೆ. ಆದಷ್ಟು ಬೇಗ ಇದಕ್ಕೆ ಚಾಲನೆ ನೀಡಲಾಗುವುದು.
*ಸತೀಶ ಜಾರಕಿಹೊಳಿ,
ಲೋಕೋಪಯೋಗಿ ಸಚಿವರು.

ಫ್ಲೈಓವರ್‌ ನಿರ್ಮಾಣ ಯೋಜನೆ ಬಹುತೇಕ ಅಂತಿಮಗೊಂಡಿದೆ. ಸಣ್ಣ ಪುಟ್ಟ ಬದಲಾವಣೆ ಹೊರತುಪಡಿಸಿ ಯೋಜನೆ ಪ್ರಕಾರ ಈಗ ರಾಷ್ಟ್ರೀಯ ಹೆದ್ದಾರಿ ನಾಲ್ಕರಿಂದ ಬೋಗಾರ್‌ ವೇಸ್‌ ವರೆಗೆ ಸುಮಾರು ನಾಲ್ಕು ಕಿಲೋಮೀಟರ್‌ ವರೆಗೆ ಫ್ಲೈ ಓವರ್‌ ನಿರ್ಮಿಸುವ ಉದ್ದೇಶವಿದೆ. ಒಂದು ವಿಂಗ್‌ದಲ್ಲಿ ಬಸ್‌ ನಿಲ್ದಾಣದವರೆಗೆ ಹಾಗೂ ಎರಡನೇ ವಿಂಗ್‌ದಲ್ಲಿ ಬೋಗಾರ್‌ವೆಸ್‌ವರೆಗೆ ಫ್ಲೈಓವರ್‌ ನಿರ್ಮಾಣವಾಗಲಿದೆ.
ಎಸ್‌.ಎಸ್‌.ಸೊಬರದ
ಕಾರ್ಯ ನಿರ್ವಾಹಕ ಎಂಜನಿಯರ್‌, ಪಿಡಬ್ಲ್ಯುಡಿ

*ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next