Advertisement

ಬಿಜೆಪಿ ವಕ್ತಾರ ಎಂ.ಜಿ. ಮಹೇಶ ಉಚ್ಚಾಟನೆಗೆ ಕರವೇ ಒತ್ತಾಯ

04:02 PM Jul 04, 2022 | Team Udayavani |

ಬೆಳಗಾವಿ: ಇಲ್ಲಿಯ ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರ ಮಾಡುವ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿರುವ ಬಿಜೆಪಿ ವಕ್ತಾರ ಎಂ.ಜಿ. ಮಹೇಶ ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ರವಿವಾರ ಪ್ರತಿಭಟನೆ ನಡೆಸಿದರು.

Advertisement

ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್‌ ಅವರಿಗೆ ಮನವಿ ರವಾನಿಸಿದ ಕಾರ್ಯಕರ್ತರು, ಸುವರ್ಣ ವಿಧಾನಸೌಧ ಉತ್ತರ ಕರ್ನಾಟಕದ ಶಕ್ತಿ ಕೇಂದ್ರ. ಇದು ಉತ್ತರ ಕರ್ನಾಟಕದ ಅಭಿವೃದ್ಧಿಗೆ ದಿಕ್ಸೂಚಿ ಆಗಬೇಕೆನ್ನುವುದು ಉತ್ತರ ಕರ್ನಾಟಕದ ಜನತೆಯ ಆಶಯವಾಗಿದೆ.

ಬಿಜೆಪಿ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗಾಗಿ ರಾಜ್ಯಮಟ್ಟದ ಕಚೇರಿಗಳನ್ನು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಉತ್ತರ ಕರ್ನಾಟಕದ ಮಠಾಧಿಧೀಶರ ಎದುರು ಪ್ರಮಾಣ ಮಾಡಿದ್ದರು. ಆದರೆ ಇನ್ನೂವರೆಗೆ ಕಚೇರಿ ಸ್ಥಳಾಂತರಗೊಂಡಿಲ್ಲ ಎಂದು ದೂರಿದರು.

ಬಿಜೆಪಿ ವಕ್ತಾರ ಎಂ.ಜಿ. ಮಹೇಶ್‌ ಅವರು ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸುವರ್ಣ ವಿಧಾನಸೌಧಕ್ಕೆ ಕಚೇರಿಗಳನ್ನು ಸ್ಥಳಾಂತರ ಮಾಡಿದರೆ ಈ ಭಾಗದ ಅಭಿವೃದ್ಧಿ ಆಗುತ್ತದೆ ಎನ್ನುವುದು ತಪ್ಪು ಎಂದು ಹೇಳಿಕೆ ನೀಡುವ ಮೂಲಕ ಉತ್ತರ ಕರ್ನಾಟಕದ ಜನತೆಯ ಆಶೋತ್ತರಗಳಿಗೆ ಅವಮಾನಿಸಿದ್ದಾರೆ. ಅವರ ಹೇಳಿಕೆಯಿಂದ ಬೆಳಗಾವಿಯಲ್ಲಿ ನಿರ್ಮಿಸಲಾಗಿರುವ ಸುವರ್ಣವಿಧಾನ ಸೌಧದ ಅಸ್ತಿತ್ವಕ್ಕೆ ಧಕ್ಕೆಯಾಗಿದೆ. ಈ ಭಾಗದ ಶಕ್ತಿ ಕೇಂದ್ರದ ಘನತೆ, ಗೌರವ ಹಾಳಾಗಿದ್ದು, ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿರುವ ಬಿಜೆಪಿ ವಕ್ತಾರ ಎಂ.ಜಿ. ಮಹೇಶ್‌ ಅವರನ್ನು ಕೂಡಲೇ ಬಿಜೆಪಿಯಿಂದ ಉಚ್ಛಾಟಿಸಬೇಕು ಎಂದು ಆಗ್ರಹಿಸಿದರು.

ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳನ್ನು ಸ್ಥಳಾಂತರ ಮಾಡುವ ನಿರ್ಧಾರ ಕೈಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ತಾವು ಕನಿಷ್ಠ ಮೂರು ತಿಂಗಳಿಗೊಮ್ಮೆ ಸುವರ್ಣ ವಿಧಾನಸೌಧದಲ್ಲಿ ಸಚಿವ ಸಂಪುಟದ ಸಭೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿದರು. ಪದಾಧಿಕಾರಿಗಳಾದ ಮಹಾದೇವ ತಳವಾರ, ಸುರೇಶ ಗವನ್ನವರ, ಗಣೇಶ ರೋಖಡೆ, ದೇವೇಂದ್ರ ತಳವಾರ, ಸತೀಶ ಗುಡ್ಡದವರ, ವಿನಾಯಕ ಬೋವಿ, ಗೋಪಿ ರಾಠೊಡ, ಸತೀಶ ಗಾಡಿವಡ್ಡರ, ರಮೇಶ ಯರಗಣ್ಣವರ, ಅಭಿ ಅಗಸಗಿ, ಚೇತನ ಮಾಸ್ತಿಹೊಳಿ, ಮಹೇಶ ಶಿಗ್ಗಿಹಳ್ಳಿ, ವಾಸು ಬಸನಾಯ್ಕ, ಸಂತೋಷ ತೇಲಿಮನಿ, ಹೊಳೆಪ್ಪ ಸುಲಧಾಳ, ಪ್ರಕಾಶ ಲಮಾನಿ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next