ಬೆಳಗಾವಿ: ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ವಾರದೊಳಗೆ ಆರಂಭಿಸಬೇಕು. ಇಲ್ಲದಿದ್ದರೆ ಗುತ್ತಿಗೆದಾರರಿಗೆ ದಂಡ ವಿಧಿಸಬೇಕು ಎಂದು ಮೇಯರ್ ಬಸಪ್ಪ ಚಿಕ್ಕಲದಿನ್ನಿ ಸೂಚನೆ ನೀಡಿದರು. ಮಹಾನಗರ ಪಾಲಿಕೆ ಕೌನ್ಸಿಲ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಲೋಕೋಪಯೋಗಿ ಸ್ಥಾಯಿ ಸಮಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ದಕ್ಷಿಣ ಕ್ಷೇತ್ರದ ವಿವಿಧ ಕಡೆ ರಸ್ತೆಗಳು ಹದಗೆಟ್ಟಿದ್ದು, ಈ ಬಗ್ಗೆ ಗಮನಹರಿಸಬೇಕಾಗಿದೆ. ಜತೆಗೆ ನಗರದ ಬಹುತೇಕ ಕಡೆ ಚರಂಡಿ, ವಿದ್ಯುತ್ ಹೀಗೆ ವಿವಿಧ ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದು ಆರಂಭಿಸಬೇಕು ಎಂದರು.
ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ ಬಾಂಧುರ್ಗೆ ಮಾತನಾಡಿ, ನಗರದ ಎಲ್ಲ ನಾಲಾಗಳ ಸುತ್ತಲೂ ಬೆಳೆದಿರುವ ಗಿಡ-ಮರಗಳ ತೆರವಿಗೆ ಹರಾಜು ಪ್ರಕ್ರಿಯೆ ನಡೆಸಿ ಸ್ವತ್ಛಗೊಳಿಸಬೇಕು. ನಾಲಾಗಳ ಅತಿಕ್ರಮಣವಾಗಿದ್ದು, ಯೋಜನಾಬದ್ಧವಾಗಿ ತಡೆಗೋಡೆ ರಚಿಸಿ ನಾಲಾಗಳ ರಕ್ಷಿಸಬೇಕಾಗಿದೆ. ಅಂದಾಜು ಪಟ್ಟಿ ರಚಿಸಿ, ಕ್ರಿಯಾಯೋಜನೆ ಸಿದ್ಧಪಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಗೋಮಟೇಶ ವಿದ್ಯಾಪೀಠದವರು ರಸ್ತೆ ಅತಿಕ್ರಮಿಸಿ ಶೆಡ್ ನಿರ್ಮಿಸಿದ್ದಾರೆ. ಈ ಕುರಿತು ಸೌಲಭ್ಯ ಕಡಿತಗೊಳಿಸುವಂತೆ ನ್ಯಾಯಾಲಯ ಸೂಚಿಸಿದೆ. ಹೀಗಾಗಿ ವಿದ್ಯಾಪೀಠಕ್ಕೆ ನೀಡಿದ್ದ ಅನುಮತಿ ರದ್ದು, ನೀರು, ವಿದ್ಯುತ್ ಕಡಿತಕ್ಕೆ ಕ್ರಮ ಕೈಗೊಳ್ಳಬೇಕು. ಕಸಾಯಿ ಗಲ್ಲಿಯಲ್ಲಿ ಈಗಾಗಲೇ ನಿರ್ಮಾಣ ಹಂತದಲ್ಲಿರುವ ಕಸಾಯಿಖಾನೆ ಕಾಮಗಾರಿಗೆ ವೇಗ ನೀಡಬೇಕೆಂದು ಅಧಿಕಾರಿಗಳಿಗೆ ಸಲಹೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಅದರ ವಿದ್ಯುತ್ ಸಂಪರ್ಕಕ್ಕೆ 8ಲಕ್ಷ ರೂ. ಹಾಗೂ ಪ್ರತ್ಯೇಕ ಶೌಚಾಲಯ ಸಂಕೀರ್ಣಕ್ಕೆ 5 ಲಕ್ಷ ರೂ. ಹೆಚ್ಚುವರಿ ಅನುದಾನದ ಅಗತ್ಯವಿದೆ ಎಂದರು.
ಅಭಿಯಂತ ಆರ್.ಎಸ್. ನಾಯಕ ಮಾತನಾಡಿ, ಪಾಂಗುಳ ಗಲ್ಲಿಯಲ್ಲಿ ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆ ಮುಂದುವರಿದಿದೆ. ಫೆಡರಲ್ ವಿದ್ಯುತ್ ಕಂಬಗಳ ಅಳವಡಿಕೆ ಕಾರ್ಯ ನಡೆದಿದ್ದು, ಪ್ರತಿ 12 ಸಂಪರ್ಕಕ್ಕೆ ಒಂದರಂತೆ ಜಂಕ್ಷನ್ ಬಾಕ್ಸ್ ಕಲ್ಪಿಸಬೇಕು. ಅಲ್ಲಿ ಪ್ರತಿ ಅಂಗಡಿ, ಮುಂಗಟ್ಟಿಗೆ ಪಾಲಿಕೆಯಿಂದ ಸಂಪರ್ಕ ಕಲ್ಪಿಸಲು ಸಾಧ್ಯವಿಲ್ಲ. ಹೀಗಾಗಿ ಆಯಾ ನಿವೇಶನ ಅಥವಾ ಕಟ್ಟಡಗಳ ಮಾಲೀಕರು ಅದನ್ನು ಸ್ವಂತ ಖರ್ಚಿನಲ್ಲೇ ಸಂಪರ್ಕ ಪಡೆಯಬೇಕೆಂದು ಹೇಳಿದರು. ದಿನೇಶ ನಾಶಿಪುಡಿ, ಮಾಯಾ ಕಡೋಲ್ಕರ, ರವಿ ಧೋತ್ರೆ ಲಕ್ಷ್ಮೀ ನಿಪ್ಪಾಣಿಕರ ಇದ್ದರು.