ಬೆಳಗಾವಿ: ನಗರದ ಹೊರವಲಯದ ಮಚ್ಛೆ ಗ್ರಾಮದಲ್ಲಿ ಕಳೆದ ವಾರ ನಡೆದ ಇಬ್ಬರು ವಿವಾಹಿತ ಮಹಿಳೆಯರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಮಹಿಳೆ ಸೇರಿದಂತೆ ಐವರನ್ನು ಬಂಧಿಸುವಲ್ಲಿ ಬೆಳಗಾವಿ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾಳ್ಯಾನಟ್ಟಿ ಗ್ರಾಮದ ಕಲ್ಪನಾ ಮಲ್ಲೇಶ ಬಸರಿಮರದ (35), ಸುರತೆ ಗ್ರಾಮದ ಮಹೇಶ ಮೊನಪ್ಪ ನಾಯಕ (20), ಬೆಳಗುಂದಿಯ ರಾಹುಲ್ ಮಾರುತಿ ಪಾಟೀಲ, ಗಣೇಶಪುರದ ರೋಹಿತ್ ನಾಗಪ್ಪ ವಡ್ಡರ್ (21) ಮತ್ತು ಚವಾಟಗಲ್ಲಿಯ ಶಾನೂರ ನಾಗಪ್ಪ ಬನ್ನಾರ (18)ಬಂಧಿತ ಆರೋಪಿಗಳು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಡಿಸಿಪಿ ವಿಕ್ರಮ್ ಅಮಟೆ ಅವರು, ಮಚ್ಛೆ ಗ್ರಾಮದ ಬ್ರಹ್ಮನಗರ ಬಳಿ ಕಳೆದ ಸೆ.26ರಂದು ವಾಯುವಿಹಾರಕ್ಕೆ ಹೋಗಿದ್ದ ರೋಹಿಣಿ ಹುಲಮನಿ, ರಾಜಶ್ರೀ ಬನ್ನಾರ ಎಂಬುವವರ ಕೊಲೆ ಮಾಡಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಮೂರು ತಂಡಗಳನ್ನು ರಚಿಸಲಾಗಿತ್ತು. ಈ ಕುರಿತು ಮೃತ ರೋಹಿಣಿ ತಂದೆ ಸುಳಗಾ ಗ್ರಾಮದ ರಾಮಚಂದ್ರ ಮಲ್ಲಪ್ಪ ಕಾಂಬಳೆ ನೀಡಿದ ದೂರಿನನ್ವಯ ಪೊಲೀಸರು ವಿವಿಧ ಅಯಾಮಗಳಲ್ಲಿ ತನಿಖೆ ಕೈಗೊಂಡು ಐದೇ ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:“ಅವ್ನು ಬರ್ತಿದ್ದಾನೆ ಕಣ್ರೋ..”ಇಂದಿನಿಂದ ರಾಜಸ್ಥಾನ ರಾಯಲ್ಸ್ ತಂಡ ಸೇರಲಿರುವ ಬೆನ್ ಸ್ಟೋಕ್ಸ್
ಮೃತ ರೋಹಿಣಿಯ ಪತಿ ಗಂಗಪ್ಪ ಅಲಿಯಾಸ ಪ್ರಶಾಂತ ಹುಲಮನಿ ಹಾಗೂ ಕಲ್ಪನಾ ಬಸರೀಮರದ ನಡುವೆ ಹಲವು ವರ್ಷಗಳ ಪರಿಚಯವಿತ್ತು. ಕಲ್ಪನಾ ಆಗಾಗ ಗಂಗಪ್ಪಗೆ ಹಣ ನೀಡುತ್ತಿದ್ದಳು. ಆತ ರೋಹಿಣಿ ಮದುವೆ ಆದಾಗಿನಿಂದ ಹಾಗೂ ತನ್ನ ಹಣ ವಾಪಸ್ ಕೊಡದೇ ಇರುವದಕ್ಕೆ ಸಿಟ್ಟಾದ ಕಲ್ಪನಾ ತನ್ನ ಸಂಬಂಧಿ ಮಹೇಶ ಜೊತೆ ಸೇರಿ ಕೊಲೆ ಸಂಚು ರೂಪಿಸಿದ್ದಳು. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ನಡೆದ ಕೃತ್ಯವಿದು ಎಂದು ಡಿ ಸಿ ಪಿ ಹೇಳಿದರು. ಆರೋಪಿಗಳ ವಿಚಾರಣೆ ಮುಂದುವರಿದಿದೆ. ಕೊಲೆ ಪ್ರಕರಣದ ತನಿಖೆ ಕಾರ್ಯಾಚರಣೆಯಲ್ಲಿ ಪೊಲೀಸ್ ಇನ್ಸಪೆಕ್ಟರ್ ಸುನೀಲಕುಮಾರ್, ಪಿಎಸ್‌ಐ ಆನಂದ ಅದಗೊಂಡ, ಸಿ.ಎಂ.ಹುಣಶ್ಯಾಳ, ಎನ್.ಎಂ.ಚಿಪ್ಪಲಕಟ್ಟಿ, ಜಿ.ವೈ.ಪೂಜಾರ್, ಎಸ್. ಎಂ.ಲೋಕೂರೆ, ಸಿ.ಎಸ್.ಶಿಂಗೆ ಮತ್ತು ತಂಡದವರು ಪಾಲ್ಗೊಂಡಿದ್ದರು.