Advertisement

Belagavi: ತೆಲಂಗಾಣ ಚುನಾವಣೆಗೆ ಮದ್ಯ ಸಾಗಿಸುತ್ತಿದ್ದ ಜಾಲ ಪತ್ತೆ

06:24 PM Oct 18, 2023 | Team Udayavani |

ಬೆಳಗಾವಿ: ಪುಷ್ಪಾ ಸಿನಿಮಾ ಮಾದರಿಯಲ್ಲಿ ಕೆಲ ತಿಂಗಳ ಹಿಂದೆಯಷ್ಟೇ ಪ್ಲೈವುಡ್‌ ಶೀಟ್‌ಗಳ ಬಾಕ್ಸ್‌ ಮಾಡಿ ಅಕ್ರಮವಾಗಿ ಗೋವಾ ಮದ್ಯ ಸಾಗಾಟ ಪತ್ತೆ ಪ್ರಕರಣ ಬೆನ್ನಲ್ಲೇ ಈಗ ವಿದ್ಯುತ್‌ ಟ್ರಾನ್ಸಫಾರ್ಮರ್‌ ಬಾಕ್ಸ್‌ ಮಾಡಿ ತೆಲಂಗಾಣ ವಿಧಾನಸಭಾ ಚುನಾವಣೆಗೆ ಮದ್ಯ ಸಾಗಿಸುತ್ತಿದ್ದ ಚಾಲಾಕಿ ಜಾಲವನ್ನು ಅಬಕಾರಿ ಪೊಲೀಸರು ಪತ್ತೆ ಹಚ್ಚುವ ಮೂಲಕ ಹೆಡೆಮುರಿ ಕಟ್ಟಿದ್ದಾರೆ.

Advertisement

ಮಹಾರಾಷ್ಟ್ರ ನೋಂದಣಿ ಯ ಈ ಐಷರ್‌ ವಾಹನಕ್ಕೆ ಜಿಪಿಎಸ್‌ ಅಳವಡಿಸಿ ಆ್ಯಪ್‌ ಮೂಲಕವೇ ವಾಹನವನ್ನು ಕಂಟ್ರೋಲ್‌ ಮಾಡಲಾಗುತ್ತಿತ್ತು. ಅಬಕಾರಿ ಪೊಲೀಸರು ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಟೋಲ್‌ ನಾಕಾ ಬಳಿ ವಾಹನ ತಡೆದಿದ್ದಾರೆ.

ಪೊಲೀಸರು 2-3 ಕಿ.ಮೀ. ಮುಂದೆ ಹೋಗುತ್ತಿದ್ದಂತೆ ಬೇರೆ ಕಡೆಗೆ ಕುಳಿತುಕೊಂಡ ಈ ಜಾಲದ ರೂವಾರಿಗಳು ಹೊಸ ತಂತ್ರಜ್ಞಾನ
ಸಹಾಯದಿಂದ ವಾಹನವನ್ನು ಕಂಟ್ರೋಲ್‌ ಮಾಡಿ ನಿಲ್ಲಿಸಿದ್ದರು. ವಾಹನ ಚಾಲೂ ಆಗದೇ ನಿಂತುಕೊಂಡಿತ್ತು. ಆಗ ತಂತ್ರಜ್ಞರ ಸಹಾಯ ಪಡೆದು ಅದನ್ನು ನಿಷ್ಟ್ರಿಯಗೊಳಿಸಿ ವಾಹನವನ್ನು ಅಬಕಾರಿ ಪೊಲೀಸರು ಕಚೇರಿಗೆ ತಂದಿದ್ದಾರೆ. ಕಳ್ಳ ಸಾಗಾಣಿಕೆಗೆ ಹೊಸ ತಂತ್ರಜ್ಞಾನ ಹುಡುಕುತ್ತಿರುವ ಆರೋಪಿಗಳಿಗೆ ಪೊಲೀಸರು ಚಾಣಾಕ್ಷತೆಯಿಂದ ಬಿಸಿ ಮುಟ್ಟಿಸಿದ್ದಾರೆ.

ಪೊಲೀಸರು 10 ಲಕ್ಷ ರೂ. ಮೌಲ್ಯದ ಮದ್ಯ ಹಾಗೂ 20 ಲಕ್ಷ ರೂ. ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಗೋವಾದಿಂದ ತೆಲಂಗಾಣ ರಾಜ್ಯದ ವಿಧಾನಸಭೆ ಚುನಾವಣೆಗೆ ಮತದಾರರಿಗೆ ಹಂಚಲು ಮದ್ಯ ಸಾಗಾಟ ಮಾಡಲಾಗುತ್ತಿತ್ತು. ಯಾರಿಗೂ ಸಂಶಯ ಬಾರದ ರೀತಿಯಲ್ಲಿ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ನ ಖಾಲಿ ಬಾಕ್ಸ್‌ ಮಾಡಿ ಅದರಲ್ಲಿ ಸಾರಾಯಿ ಬಾಕ್ಸ್‌ಗಳನ್ನು ಇಟ್ಟು ಸಾಗಿಸಲಾಗುತ್ತಿತ್ತು. ಪುಷ್ಪಾ ಸಿನಿಮಾ ಮಾದರಿಯಲ್ಲಿಯೇ ಸಾರಾಯಿಯನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಜಾಲ ಪತ್ತೆ
ಹಚ್ಚುವ ಮೂಲಕ ಅಬಕಾರಿ ಪೊಲೀಸರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಗೋವಾ ಗಡಿಯಿಂದ ದಾಟಿ ಬೇರೆ ಬೇರೆ ರಾಜ್ಯಗಳಿಗೆ ಕಳ್ಳ ಸಾಗಾಣಿಕೆ ನಡೆಯುತ್ತಿರುವ ಬಗ್ಗೆ 15 ದಿನಗಳ ಹಿಂದೆ ಅಬಕಾರಿ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ಕೆಲ ದಿನಗಳಿಂದ ಹಗಲು-ರಾತ್ರಿ ಎನ್ನದೇ ತಪಾಸಣೆ ನಡೆಸಲಾಗಿದೆ. ಅಬಕಾರಿ ಪೊಲೀಸ್‌ ಅಧೀಕ್ಷಕ ವಿಜಯಕುಮಾರ ಹಿರೇಮಠ ಹಾಗೂ ಉಪ ಅಧೀಕ್ಷಕ ರವಿ ಮುರಗೋಡ ನೇತೃತ್ವದಲ್ಲಿ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಟೋಲ್‌ ನಾಕಾ ಬಳಿ ಮಹಾರಾಷ್ಟ್ರ ನೋಂದಣಿಯ ಐಷರ್‌ ಲಾರಿ ತಡೆದು ನೋಡಿದಾಗ ಎರಡು ವಿದ್ಯುತ್‌ ಟ್ರಾನ್ಸಫಾರ್ಮರ್‌ ಇದ್ದವು.

Advertisement

ಮೇಲ್ಭಾಗದಲ್ಲಿ ಪ್ಲೇಟ್‌ ಮಾತ್ರ ಅಳವಡಿಸಲಾಗಿತ್ತು. ಅದನ್ನು ತೆರೆದು ನೋಡಿದಾಗ ಬಾವಿ ರೀತಿಯಲ್ಲಿ ಅದರೊಳಗೆ ಮದ್ಯದ ಬಾಕ್ಸ್‌ಗಳನ್ನು ಇಡಲಾಗಿತ್ತು. ಮಹಾರಾಷ್ಟ್ರದ ಮುಂಬೈ ವಾಸಿ ಶ್ರೀರಾಮ ಸುಧಾಕರ ಪರಡೆ ಎಂಬ ಚಾಲಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅಬಕಾರಿ ಅಪರ ಆಯುಕ್ತ ಡಾ. ವೈ. ಮಂಜುನಾಥ ತಿಳಿಸಿದರು.

ಅಬಕಾರಿ ಅಪರ ಆಯುಕ್ತ ಡಾ. ವೈ. ಮಂಜುನಾಥ, ಉಪ ಆಯುಕ್ತೆ ವನಜಾಕ್ಷಿ ಮಾರ್ಗದರ್ಶನದಲ್ಲಿ ಅಬಕಾರಿ ಅಧೀಕ್ಷಕ
ವಿಜಯಕುಮಾರ ಹಿರೇಮಠ, ಬೆಳಗಾವಿ  ಉಪವಿಭಾಗ ಉಪ ಅಧೀಕ್ಷಕ ರವಿ ಮುರಗೋಡ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದ್ದಾರೆ.

ಅಕ್ರಮವಾಗಿ ಕಳ್ಳ ಸಾಗಾಣಿಕೆ ಮಾಡುವವರು ಚಾಪೆ ಕೆಳಗೆ ನುಗ್ಗಿದರೆ ನಾವು ರಂಗೋಲಿ ಕೆಳಗೆ ನುಗ್ಗಿ ಅವರನ್ನು ಹೆಡೆಮುರಿ ಕಟ್ಟುತ್ತೇವೆ. ಎಂತಹ ತಂತ್ರಜ್ಞಾನ, ಚಾಲಾಕಿತನ ಮಾಡಿದರೂ ಅಬಕಾರಿ ಪೊಲೀಸರು ಅವರನ್ನು ಕಟ್ಟಿ ಹಾಕಲು ಸಿದ್ಧರಿದ್ದಾರೆ. ಈ ಹಿಂದೆ ಪ್ಲೈವುಡ್‌ ಶೀಟ್‌ನಲ್ಲಿ ಮದ್ಯ ಸಾಗಿಸಲಾಗುತ್ತಿತ್ತು. ಈಗ ಅದೇ ಮಾದರಿಯಲ್ಲಿ ವಿದ್ಯುತ್‌ ಟ್ರಾನ್ಸಫಾರ್ಮರ್‌
ನಲ್ಲಿ ಕಳ್ಳ ಸಾಗಾಣಿಕೆ ಮಾಡುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ. ಇದರ ಜಾಲದ ಹಿಂದಿನ ರೂವಾರಿಗಳ ಬಗ್ಗೆ ತನಿಖೆ ಮುಂದುವರಿದಿದೆ.
ಡಾ| ವೈ ಮಂಜುನಾಥ, ಅಪರ ಆಯುಕ್ತರು, ಅಬಕಾರಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next