Advertisement

ಕರ್ನಾಟಕಕ್ಕೆ ಚಿನ್ನದ ಕಿರೀಟ

09:26 AM Feb 04, 2019 | Team Udayavani |

ಬೆಳಗಾವಿ: ಕರ್ನಾಟಕದ 18 ವರ್ಷದೊಳಗಿನ ಬಾಲಕಿಯರ ತಂಡವು ರಾಜಸ್ತಾನದ ಜೈಪುರದಲ್ಲಿ ನಾಲ್ಕು ದಿನಗಳ ಕಾಲ ನಡೆದ 71ನೇ ಹಿರಿಯರ, 48ನೇ ಕಿರಿಯರ ಮತ್ತು 34ನೇ ಅತೀ-ಕಿರಿಯರ ರಾಷ್ಟ್ರೀಯ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ನ ಅಂತಿಮ ದಿನ ರವಿವಾರ 4 ಕಿ.ಮೀ. ಟೀಮ್‌ ಪರಶ್ಯೂಟ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಹೆಮ್ಮೆಯ ಸಾಧನೆ ಮಾಡಿತು.

Advertisement

ಅಂತಿಮ ಸೆಣಸಾಟದಲ್ಲಿ ಕರ್ನಾಟಕ ತಂಡದ ದಾನಮ್ಮ ಚಿಚಖಂಡಿ, ಸಹನಾ ಕುಡಿಗಾನೂರ, ಕೀರ್ತಿ ರಂಗಸ್ವಾಮಿ ಮತ್ತು ಸೌಮ್ಯ ಅಂತಾಪೂರ 5 ನಿಮಿಷ 56.00 ಸೆಕೆಂಡ್‌ನ‌ಲ್ಲಿ ಗುರಿ ತಲುಪಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಪುರುಷರ ವಿಭಾಗದ 30 ಕಿ.ಮೀ. ಪಾಯಿಂಟ್ ರೇಸ್‌ನಲ್ಲಿ ಒಟ್ಟು 37 ಪಾಯಿಂಟ್ ಕಲೆ ಹಾಕಿದ ಬಾಗಲಕೋಟೆ ತಾಲೂಕಿನ ತುಳಸಿಗೇರಿಯ ವೆಂಕಪ್ಪ ಕೆಂಗಲಗುತ್ತಿ ಬೆಳ್ಳಿಯ ಪದಕ ಕೊರಳಿಗಿಳಿಸಿದರು.

ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಒಟ್ಟು ಎರಡು ಚಿನ್ನ, ಆರು ಬೆಳ್ಳಿ ಮತ್ತು ಎಂಟು ಕಂಚಿನ ಪದಕಗಳನ್ನು ಪಡೆಯುವುದರೊಂದಿಗೆ ತೃಪ್ತಿಕರ ಸಾಧನೆ ಮಾಡಿತು. ಬಾಗಲಕೋಟೆ ಜಿಲ್ಲೆಯ ವೆಂಕಪ್ಪ ಕೆಂಗಲಗುತ್ತಿ ಈ ಚಾಂಪಿಯನ್‌ಶಿಪ್‌ನಲ್ಲಿ ವೈಯಕ್ತಿಕವಾಗಿ 3 ಬೆಳ್ಳಿ ಮತ್ತು 1 ಕಂಚಿನ ಪದಕಗಳನ್ನು ಪಡೆದು ಗಮನ ಸೆಳೆದರು.

ಶನಿವಾರ ನಡೆದ 18 ವರ್ಷದೊಳಗಿನ ಬಾಲಕರ 20 ಕಿ.ಮೀ. ಪಾಯಿಂಟ್ ರೇಸ್‌ದಲ್ಲಿ ವೆಂಕಪ್ಪ ಕೆಂಗಲಗುತ್ತಿ ಬೆಳ್ಳಿಯ ಪದಕ ಗಳಿಸಿ ಗಮನ ಸೆಳೆದಿದ್ದರು. ಕಳೆದ ವರ್ಷ ಜನವರಿಯಲ್ಲಿ ನವದೆಹಲಿಯ ಇಂದಿರಾಗಾಂಧಿ ಒಳಾಂಗಣ ಸೈಕ್ಲಿಂಗ್‌ ವೆಲೋಡ್ರೋಂನಲ್ಲಿ ನಡೆದ 70ನೇ ಹಿರಿಯರ 47ನೇ ಕಿರಿಯರ ಮತ್ತು 33ನೇ ಅತೀ ಕಿರಿಯರ ರಾಷ್ಟ್ರೀಯ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ರಾಜ್ಯದ ಸೈಕ್ಲಿಸ್ಟ್‌ಗಳು ಒಟ್ಟು 5 ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕಗಳೊಂದಿಗೆ ಒಟ್ಟು 11 ಪದಕಗಳನ್ನು ತಮ್ಮ ಮಡಿಲಿಗೆ ಹಾಕಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next