ಬೆಳಗಾವಿ: ಕೋವಿಡ್ ವೈರಸ್ ಹಾವಳಿಯ ಹಿನ್ನಲೆಯಲ್ಲಿ ಗೋಕಾಕ್ ಮತ್ತು ಮೂಡಲಗಿ ತಾಲೂಕುಗಳ ವ್ಯಾಪ್ತಿಯಲ್ಲಿ ಮುಂದಿನ 8 ದಿನಗಳ ಸಂಪೂರ್ಣ ಲಾಕ್ ಡೌನ್ ಮಾಡಲಾಗುವುದು ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು
ಗೋಕಾಕ್ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ರವಿವಾರ ನಡೆದ ಕೋವಿಡ್ ಟಾಸ್ಕ್ ಫೋರ್ಸ್ ಸಭೆಯಲ್ಲಿ ಮಾತನಾಡಿದ ಸಚಿವರು ನಾಳೆ ಸೋಮವಾರ ರಾತ್ರಿಯಿಂದ ಮುಂದಿನ 8 ದಿನಗಳ ಕಾಲ ಸ್ವಯಂಪ್ರೇರಿತ ಲಾಕ್ ಡೌನ್ ನಡೆಯಲಿದೆ ಎಂದು ತಿಳಿಸಿದರು.
ಜೀವ ಇದ್ದರೆ ಮಾತ್ರ ಜೀವನ. ಹಾಗಾಗಿ ಈ ಕೋವಿಡ್ ಸೋಂಕು ನಿವಾರಿಸಲು ಅನಿವಾರ್ಯವಾಗಿ ಲಾಕ್ ಡೌನ್ ಘೋಷಿಸಬೇಕಾಗಿದೆ. ತಾಲ್ಲೂಕಿನ ಎಲ್ಲಾ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಲಹೆ ಪಡೆಯಲಾಗಿದೆ. ಜನರು ಸಹಕರಿಸಬೇಕು ಎಂದು ಹೇಳಿದರು
ಈ ಲಾಕ್ ಡೌನ್ ಅವಧಿಯಲ್ಲಿ ಜನರಿಗೆ ಅಗತ್ಯವಿರುವ ಸಾಮಗ್ರಿಗಳು ದೊರೆಯಲಿವೆ. ಆದರೆ ಎಲ್ಲರೂ ಸಾಮಾಜಿಕ ವ್ಯಕ್ತಿಗತ ಅಂತರ ಕಾಪಾಡಿಕೊಂಡಿರಬೇಕು ಕಾರಣವಿಲ್ಲದೇ ಯಾರೂ ಮನೆಯಿಂದ ಹೊರಗೆ ಬರಬಾರದು. ಸೋಂಕು ಕಡಿಮೆ ಮಾಡಲು ಇದೊಂದೇ ದಾರಿ. ಆದ್ದರಿಂದ ಸರ್ಕಾರದ ನಿರ್ಧಾರವನ್ನು ಪಾಲಿಸುವಂತೆ ಜನತೆಗೆ ಕರೆ ನೀಡಿದರು.
ಟಾಸ್ಕ್ ಫೋರ್ಸ್ ಸಭೆಯಲ್ಲಿ ಗೋಕಾಕ್ ತಹಶಿಲ್ದಾರ್ ಪ್ರಕಾಶ್ ಹೊಳೆಯಪ್ಪಗೋಳ್, ಪೌರಾಯುಕ್ತ ಶಿವಾನಂದ ಹಿರೇಮಠ, ಪೊಲೀಸ್ ಇನ್ಸ್ಪೆಕ್ಟರ್ ಗೋಪಾಲ್ ರಾಥೋಡ್, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಬಸವರಾಜ ಹೆಗ್ಗನಾಯಕ ಪಾಲ್ಗೊಂಡಿದ್ದರು.