ಗೋಕಾಕ: “ಕಳೆದ ಎರಡು ದಶಕಗಳಿಂದ ಸಿಡಿ ಕಾರ್ಖಾನೆ ಬೆಳಗಾವಿಯಲ್ಲೇ ಇದ್ದು, ಇಲ್ಲಿ ತಯಾರಾದ ಸಿಡಿಗಳು ಕನಕಪುರ ಮತ್ತು ಬೆಂಗಳೂರಿನಲ್ಲಿ ರಿಲೀಸ್ ಆಗುತ್ತವೆ. ಸಿಬಿಐ ತನಿಖೆ ನಡೆದರೆ ಎಲ್ಲವೂ ಹೊರಬರಲಿದೆ. ಹಾಗೆ ಯೇ ಕೆಪಿಸಿಸಿ ಅಂದರೆ “ಕರ್ನಾಟಕ ಪ್ರದೇಶ್ ಸಿಡಿ ಕಮಿಟಿ’ ಆಗಿದೆ ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ವ್ಯಂಗ್ಯವಾಡಿದರು.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಖರ್ಗೆ, ಪರಮೇಶ್ವರ, ಸಿದ್ದರಾಮಯ್ಯ ಸಾಹೇಬರು ಇದ್ದಾಗ ಕಾಂಗ್ರೆಸ್ ಬೇರೆ ಇತ್ತು. ಸಿದ್ದರಾಮಯ್ಯ, ಖರ್ಗೆ ಸಾಹೇಬರು ನಮ್ಮ ಗುರುಗಳು ಅಂತಾ ಒಪ್ಪುತ್ತೇವೆ. ಕಾಂಗ್ರೆಸ್‌ನಲ್ಲಿ ಡಿಕೆಶಿ ಬಗ್ಗೆ ಯಾರೂ ಮಾತನಾಡಲ್ಲ, ಎಲ್ಲರ ಸಿಡಿಗಳು ಅವರ ಬಳಿಯಿವೆ ಎಂದರು.
ಸಿಡಿ ಪ್ರಕರಣ ಬಹಿರಂಗವಾಗಿ ಮಾ.3ಕ್ಕೆ ಎರಡು ವರ್ಷ ಆಯ್ತು, ಎಲ್ಲ ಷಡ್ಯಂತ್ರ ನಡೆದಿದೆ. 2000ನೇ ಇಸ್ವಿಯಿಂದ ಇದು ನಡೆಯುತ್ತಿದೆ. ಇದಕ್ಕೆ ಸಿಬಿಐ ತನಿಖೆ ಒಂದೇ ಪರಿಹಾರ. ಈಗ ಸ್ಯಾಂಟ್ರೋ ರವಿ ಅಂತಾ ಏನು ತೋರಿಸುತ್ತಿದ್ದಾರಲ್ಲ, ಹಾಗೆಯೇ 800 ಸ್ಟಾರ್ಟ್ ಆಗಿ ಬಿಎಂಡಬ್ಲೂéವರೆಗೂ ಇದೆ. ಒಂಟಿತೋಳ ಒಂಟಿತೋಳ ಅಂದ್ರು, ಒಂಟಿತೋಳ ಏನ್ ಮಾಡಿತು? ಕಾಂಗ್ರೆಸ್ ಸರ್ಕಾರ ಬೀಳಲು ಬೆಳಗಾವಿಯವರೇ ಕಾರಣ. ನಾವು ಸಿಂಪಲ್ ಆಗಿಯೇ ಇರ್ತೀವಿ, ಜನ ನಮ್ಮ ಜೊತೆ ಇರ್ತಾರೆ ಎಂದರು.
ರಮೇಶ ಜಾರಕಿಹೊಳಿ ಅವರು, ಲಕ್ಷ್ಮೀ ಹೆಬ್ಟಾಳಕರ ಅವರನ್ನು “ವಿಷಕನ್ಯೆ ’ ಎಂದು ಕರೆದ ಕುರಿತು ಪ್ರತಿಕ್ರಿಯಿಸಿದ ಲಖನ್, “ವಿಷಕನ್ಯೆ ’ ಅಷ್ಟೇ ಅಲ್ಲ “ಮಟ್ಯಾಷ್ ಲೆಗ್ ಮತ್ತು ರಕ್ತ ಕಣ್ಣೀರು’ ಎಂದು ಬೆಳಗಾವಿ ಜನ ಮಾತನಾಡುತ್ತಾರೆ. ನಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ಮೊದಲಿನಿಂದಲೂ ಇದೆ. ಚುನಾವಣೆಗೆ ಆರು ತಿಂಗಳು ಇರುತ್ತಲೇ ಜೋರಾಗಿರುತ್ತದೆ. ಆ ಮಟ್ಯಾಷ್‌ಲೆಗ್‌ನಿಂದ ಸಿದ್ದರಾಮಯ್ಯ ಮಾಜಿ ಆದರು, ಕುಮಾರಸ್ವಾಮಿ ಸರ್ಕಾರ ಹೋಯಿತು. ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ನಾನು ಕಾಂಗ್ರೆಸ್‌ನಿಂದ ದೂರವಾದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಅಂದರೆ ಕರ್ನಾಟಕ ಪ್ರದೇಶ ಸಿಡಿ ಕಂಪನಿ ಅಧ್ಯಕ್ಷ. ರಮೇಶ ಜಾರಕಿಹೊಳಿಗೆ ಶಕ್ತಿ ಇದೆ, ಬಹಿರಂಗವಾಗಿ ಮಾತನಾಡಿದ್ದಾರೆ. ಧೈರ್ಯ ಇಲ್ಲದೇ ಇರೋರು ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಒಂದು ವರ್ಷದಿಂದ ಪ್ರಕ ರಣ ಸಿಬಿಐಗೆ ವಹಿಸಬೇಕು ಅಂತ ನಮ್ಮ ಬೇಡಿಕೆ ಇದೆ. ಅನೇಕರು ನೊಂದು, ಬೆಂದು ಹೋಗಿದ್ದಾರೆ. ಬೆಂಗಳೂರು, ಮುಂಬೈ, ಕೇರಳವರೆಗೆ ಅವರ ಲಿಂಕ್ ಇದೆ. ರಮೇಶ ಜಾರಕಿಹೊಳಿ ಅವರಿಗೆ ದಾಖಲೆ ಬಿಡುಗಡೆ ಮಾಡಬೇಡಿ, ಸಿಬಿಐಗೆ ಕೊಡಿ ಎಂದು ಹೇಳಿದ್ದೇನೆ. ಕಾಂಗ್ರೆಸ್ ಸರ್ಕಾರ ಬೀಳಿಸಲು ಬೆಳಗಾವಿ ಶಾಸಕರು ಕಾರಣ. ಆ ಕ್ಷೇತ್ರದಲ್ಲಿ ನಮ್ಮ ಕುಟುಂಬದ ಅಭಿಮಾನಿಗಳು 20 ಸಾವಿರ ಜನರಿದ್ದಾರೆ ಎಂದರು.
ಸಂತ್ರಸ್ತರೋ-ಸಂತೃಪ್ತರೋ ಮುಂದೆ ಗೊತ್ತಾಗಲಿದೆ. ಬೇರೆಯವರಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಕುಟುಂಬಸ್ಥರು, ಕ್ಷೇತ್ರದ ಜನ ಬೆನ್ನಿಗೆ ನಿಂತಿದ್ದಾರೆ. ಸಿಬಿಐ ತನಿಖೆ ಆದರೆ ಲಂಚ-ಮಂಚ ಎಲ್ಲ ಹೊರಗೆ ಬರಲಿದೆ. ಯಾರು ಎಲ್ಲಿ ಪ್ಯಾಂಟ್ ಬಿಚ್ಚುತ್ತಾರೆ, ಲುಂಗಿ ಬಿಚ್ಚುತ್ತಾರೆ ಗೊತ್ತಾಗಲಿದೆ ಎಂದ ಅವರು, ರಮೇಶ ಜಾರಕಿಹೊಳಿ ನಿವೃತ್ತಿಗೆ ಜನ ಅವಕಾಶ ಕೊಡಲ್ಲ ಎಂದರು.