Advertisement

ಇನ್ನು ಬೆಳಗಾವಿಯೇ ಸೆಂಟರ್‌ ಪಾಯಿಂಟ್‌

05:54 PM Dec 06, 2021 | Team Udayavani |

ಬೆಳಗಾವಿ: ಇನ್ನು ಮುಂದೆ ಬೆಳಗಾವಿ ಸುತ್ತಮುತ್ತಲಿನ ಜನರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಗೋಕಾಕಕ್ಕೆ ಬರುವ ಅಗತ್ಯವಿಲ್ಲ. ಬೆಳಗಾವಿಯಲ್ಲಿರುವ ನಮ್ಮ ಕಚೇರಿಗೆ ಬಂದರೆ ಎಲ್ಲ ಸಮಸ್ಯೆಗೆ ಸ್ಪಂದಿಸಲಾಗುವುದು ಎಂದು ಪಕ್ಷೇತರ ಅಭ್ಯರ್ಥಿ ಲಖನ್‌ ಜಾರಕಿಹೊಳಿ ಹೇಳಿದರು.

Advertisement

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಹಿಂಡಲಗಾ ಗ್ರಾಮದಲ್ಲಿ ರವಿವಾರ ನಡೆದ ವಿವಿಧ ಗ್ರಾಮ ಪಂಚಾಯತಿ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿ, ಏನೇ ಕೆಲಸ ಇದ್ದರೂ ನೇರವಾಗಿ ಬಂದು ನಮ್ಮನ್ನು ಭೇಟಿಯಾಗಬೇಕು. ಗೋಕಾಕ ತಾಲೂಕು ಈಗಾಗಲೇ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದೆ. ಇನ್ನು ಜಿಲ್ಲೆಯ ಅನೇಕ ಕ್ಷೇತ್ರಗಳತ್ತ ಗಮನಹರಿಸಿ ಅಭಿವೃದ್ಧಿ ಮಾಡುವುದೇ ನಮ್ಮ ಸಂಕಲ್ಪವಾಗಿದೆ ಎಂದು ಹೇಳಿದರು.

ಗ್ರಾಮೀಣ ಭಾಗದ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ಆರು ವರ್ಷಗಳ ಕಾಲಾವ ಧಿಯಲ್ಲಿ ನನ್ನ ಕೈಲಾಗದಷ್ಟು ಕೆಲಸ ಮಾಡಿ ಕೊಡಲಾಗುವುದು. ಸ್ಥಳಿಯ ಸಂಸ್ಥೆಗಳ ಅನುದಾನ ಹೆಚ್ಚಿಸಿ ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು. ವಿಧಾನ ಪರಿಷತ್‌ ಚುನಾವಣೆಯಲ್ಲಿ ಒಂದು ಮತ, ಒಂದು ಲಕ್ಷ ಮತಕ್ಕೆ ಸಮಾನ. ನಿಮ್ಮ ಒಂದೊಂದು ಮತ ಅಮೂಲ್ಯವಾದದ್ದು. ಹೀಗಾಗಿ ಆಯ್ಕೆಯಾದ ಬಳಿಕ ನಿಮ್ಮೊಂದಿಗೆ ನಾನು ನಿರಂತರವಾಗಿ ಇರುತ್ತೇನೆ ಎಂದರು.

ಈ ಚುನಾವಣೆಯಲ್ಲಿ ನಾನು ಬಿಜೆಪಿ ಮತ್ತು ಕಾಂಗ್ರೆಸ್‌ ಟಿಕೆಟ್‌ ಪಡೆಯದೇ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ನಿಂತಿದ್ದೇನೆ. ಜನ ಸೇವೆ ಮಾಡುವ ಒಂದೇ ಉದ್ದೇಶ ನನ್ನದು. ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿಶೇಷವಾಗಿ ಗಮನಹರಿಸಲಾಗುವುದು. ಎಲ್ಲ ಕಡೆಗೂ ಅಭಿವೃದ್ಧಿ ಮಂತ್ರ ಜಪಿಸಲಾಗುವುದು. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಲಾಗುವುದು ಎಂದು ಹೇಳಿದರು.

ಹಿಂಡಲಗಾ ಗ್ರಾಪಂ ಅಧ್ಯಕ್ಷ ನಾಗೇಶ ಮನ್ನೋಳಕರ ಮಾತನಾಡಿ, ಕಾಂಗ್ರೆಸ್‌ ಸೋಲಿಸಬೇಕಾದರೆ ಪಕ್ಷೇತರ ಅಭ್ಯರ್ಥಿ ಲಖನ್‌ ಜಾರಕಿಹೊಳಿ ಅವರನ್ನು ಗೆಲ್ಲಿಸಬೇಕಾಗಿದೆ. ಒಂದು ವೇಳೆ ಲಖನ್‌ ಜಾರಕಿಹೊಳಿ ಈ ಚುನಾವಣೆಗೆ ಸ್ಪರ್ಧಿಸದಿದ್ದರೆ ಕಾಂಗ್ರೆಸ್‌ ಅಭ್ಯರ್ಥಿ ಮನೆಯಲ್ಲಿಯೇ ಕುಳಿತು ಆಯ್ಕೆ ಆಗಿರುತ್ತಿದ್ದರು. ಕಾಂಗ್ರೆಸ್‌ ಮುಕ್ತ ಮಾಡಬೇಕಾಗಿದೆ ಎಂದರು.

Advertisement

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳು ಇಲ್ಲ. ನಗರ ಪ್ರದೇಶದಲ್ಲಿರುವ ಖಾಸಗಿ ಶಾಲೆಗಳಿಗೆ ಲಕ್ಷಾಂತರ ರೂ. ಶುಲ್ಕ ತುಂಬಿ ಮಕ್ಕಳನ್ನು ಅಂಥ ಶಾಲೆಗಳಿಗೆ ಸೇರಿಸುವುದು ಕಷ್ಟಕರವಾಗಿದೆ. ಹೀಗಾಗಿ ಲಖನ್‌ ಜಾರಕಿಹೊಳಿ ಅವರು ಆಯ್ಕೆಯಾದ ಬಳಿಕ ಹಿಂಡಲಗಾದ ಒಂದು ಎಕರೆ ಜಾಗದಲ್ಲಿ ಸರ್ಕಾರಿ ಇಂಗ್ಲಿಷ್‌ ಮಾಧ್ಯಮ ಶಾಲೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಕೆಎಂಎಫ್‌ ನಿರ್ದೇಶಕ ಎಸ್‌. ಎಸ್‌. ಮುಗಳಿ ಮಾತನಾಡಿ, ವಿರೋಧಿಗಳ ಬಣ್ಣದ ಮಾತುಗಳಿಗೆ ಯಾರೂ ಮರುಳಾಗಬಾರದು. ಆಸೆ-ಆಮಿಷಗಳಿಗೆ ಯಾರೂ ಬಲಿಯಾಗಬಾರದು. ನಿಮ್ಮ ಬೆನ್ನಿಗೆ ನಿಂತು ಕೆಲಸ ಮಾಡುತ್ತಿರುವ ಜಾರಕಿಹೊಳಿ ಕುಟುಂಬಕ್ಕೆ ಸಹಾಯ ಮಾಡಬೇಕು. ವಿಧಾನ ಪರಿಷತ್‌ಗೆ ಲಖನ್‌ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಿ ಕಳುಹಿಸಬೇಕಾಗಿದೆ ಎಂದರು.

ಜಿಪಂ ಮಾಜಿ ಸದಸ್ಯ ಟಿ.ಆರ್‌. ಕಾಗಲ್‌, ಮಹಾನಗರ ಪಾಲಿಕೆ ಸದಸ್ಯೆ ವೈಶಾಲಿ ಭಾತಕಾಂಡೆ, ಪುಂಡಲೀಕ ಪಾವಸೆ, ಅಪ್ಪಾ ಜಾಧವ, ಎಂ.ಆರ್‌. ಪಾಟೀಲ, ಕಲ್ಲಪ್ಪ ಗಿರೆನ್ನವರ, ಪ್ರಥ್ವಿ ಸಿಂಗ್‌ ಫೌಂಡೇಶನ್‌ ಸದಸ್ಯ ಜಸವೀರ ಸಿಂಗ್‌ ಹೀಗೆ ಹಿಂಡಲಗಾ, ಅಂಬೇವಾಡಿ, ಉಚಗಾಂವ, ಕುದ್ರೇಮನಿ, ಬೆಳಗುಂದಿ, ಬೆನಕನಹಳ್ಳುಇ, ಕಂಗ್ರಾಳಿ ಕೆಎಚ್‌, ಕಂಗ್ರಾಳಿ ಬಿಕೆ, ಧಾಮಣೆ, ನಂದಿಹಳ್ಳಿ, ದೇಸೂರ, ಯಳ್ಳೂರು, ಕಿಣಯೇ ಗ್ರಾಮ ಪಂಚಾಯತ್‌ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next