ಬೆಳಗಾವಿ: ದಾಖಲೆ ಇಲ್ಲದೇ ಖಾಸಗಿ ಬಸ್ ನಲ್ಲಿ ಸಾಗಿಸುತ್ತಿದ್ದ 2 ಕೋಟಿ ರೂ. ನಗದು ಹಣವನ್ನು ಹಿರೇಬಾಗೇವಾಡಿ ಟೋಲ್ ಗೇಟ್ ಬಳಿ ಬುಧವಾರ ನಸುಕಿನ ಜಾವ 3:30 ರ ಸುಮಾರಿಗೆ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಮುಂಬೈನಿಂದ ಮಂಗಳೂರು ಕಡೆಗೆ ಹೊರಟಿದ್ದ ಕೆನರಾ ಪಿಂಟೊ ಟ್ರಾವೆಲ್ಸ್ ಎಂಬ ಖಾಸಗಿ ಬಸ್ ತಪಾಸಣೆ ನಡೆಸಿದಾಗ 2,000 ರೂ. ಮುಖಬೆಲೆಯ ನೋಟುಗಳು ಪತ್ತೆಯಾಗಿವೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪತ್ತೆಯಾಗಿರುವುದು ಪೊಲೀಸರನ್ನು ಅಚ್ಚರಿಗೊಳಿಸಿದೆ.
ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಹಿರೇಬಾಗೇವಾಡಿ ಟೋಲ್ ಗೇಟ್ ಬಳಿ ಚೆಕ್ ಪೋಸ್ಟ್ ಹಾಕಲಾಗಿದ್ದು, ಎರಡು ಕೋಟಿ ರೂ ನಗದು ಹಣ ಪತ್ತೆಯಾಗಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ ನಿತೇಶ್ ಪಾಟೀಲ್ ಹಾಗೂ ಡಿಸಿಪಿ ಪಿವಿ ಸ್ನೇಹ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎಫ್‌ಎಸ್ ಟಿ ತಂಡದ ಮುಖ್ಯಸ್ಥ ಶಂಭುಲಿಂಗಪ್ಪ, ರಾಜೇಶ ಮೊರಬದ, ಎಸಿಪಿ ಗೋಪಾಲಕೃಷ್ಣ ಗೌಡರ, ರಾಜಶೇಖರ ಡಂಬಳ, ಹಿರೇಬಾಗೇವಾಡಿ ಇನ್ಸ್ಪೆಕ್ಟರ್ ಅಮರೇಶ ಸೇರಿದಂತೆ ಹಿರೇಬಾಗೇವಾಡಿ ಪೊಲೀಸರು ಹಾಗೂ ಕರ್ತವ್ಯದಲ್ಲಿ ಇದ್ದ ಇನ್ನುಳಿದ ಸಿಬ್ಬಂದಿಗಳ ಕಾರ್ಯಾಚರಣೆಗೆ ಜಿಲ್ಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.