Advertisement

Belagavi; ನನಗೆ ಜಾತಿ ಅನ್ನುವುದಿಲ್ಲ, ಮನುಷ್ಯತ್ವವೇ ನನ್ನ ಜಾತಿ: ಲಕ್ಷ್ಮೀ ಹೆಬ್ಬಾಳಕರ್

07:15 PM Feb 24, 2024 | Team Udayavani |

ಬೆಳಗಾವಿ: ಎಲ್ಲೆ ಇದ್ದರೂ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಕೈ ಮುಗಿದು ಮುಂದಿನ ಕೆಲಸ ಆರಂಭಿಸುತ್ತೇನೆ. ಈ ಕ್ಷೇತ್ರಕ್ಕೆ ಒಳ್ಳೆಯ ಕೆಲಸ ತರುವುದೇ ನನ್ನ ಉದ್ದೇಶ. ಮೊದಲ ಬಾರಿಗೆ ಈ ಕ್ಷೇತ್ರದಿಂದ ಮಂತ್ರಿಯಾಗಿರುವ ಸೌಭಾಗ್ಯಕ್ಕಾಗಿ ನಾನು ಎಲ್ಲರಿಗೂ ಕೃತಜ್ಞಳಾಗಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

Advertisement

ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಾಳೇಕುಂದ್ರಿ ಕೆ ಎಚ್ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮಿ ಮಂದಿರದ ನೂತನ ಕಟ್ಟಡದ ನಿರ್ಮಾಣಕ್ಕಾಗಿ ಶನಿವಾರ ಕಟ್ಟಡ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯದಲ್ಲಿ ಎಲ್ಲಿಯೇ ಹೋದರೂ ಭಾಷಣದ ಪೂರ್ವದಲ್ಲಿ ನನ್ನ ಕ್ಷೇತ್ರ, ನನ್ನ ಮತದಾರರು, ಸುಳೇಭಾವಿ ಮಹಾಲಕ್ಷ್ಮೀ, ಉಚಗಾಂವ ಮಳೇಕರಣಿ ದೇವಿಯನ್ನು ಸ್ಮರಿಸಿ ಭಾಷಣ ಮಾಡುತ್ತಿದ್ದೇನೆ. ಕ್ಷೇತ್ರದ ಜನರ ಆಶೀರ್ವಾದದಿಂದ ಇಂದು ರಾಜ್ಯದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಎಂದು ಕರೆಯುವಂತಾಗಿದೆ. ಮೊದಲು ನನಗೆ ನನ್ನ ಕ್ಷೇತ್ರ, ಆಮೇಲೆ ರಾಜ್ಯ. ದಿನ ಬೆಳಗಾದರೆ ಕ್ಷೇತ್ರಕ್ಕೆ ಎಷ್ಟು ಅನುದಾನ ತೆಗೆದುಕೊಂಡು ಹೋಗಲಿ, ಯಾವ ಇಲಾಖೆಯಿಂದ ತೆಗೆದುಕೊಂಡು ಹೋಗಲಿ ಎಂದು ಯೋಚಿಸುತ್ತೇನೆ ಎಂದರು.

ಎಲ್ಲರ ಕೈಯಿಂದ ದೇವಸ್ಥಾನಗಳನ್ನು ಕಟ್ಟಲು ಸಾಧ್ಯವಿಲ್ಲ. ಅದಕ್ಕೆ ಪುಣ್ಯ ಮಾಡಿರಬೇಕು. ನನ್ನ ಹಿಂದಿನ ಜನ್ಮದ ಪುಣ್ಯವೋ ಗೊತ್ತಿಲ್ಲ, ಕ್ಷೇತ್ರದಲ್ಲಿ 103 ಮಂದಿರಗಳನ್ನು ಕಟ್ಟುವ ಅವಕಾಶ ಸಿಕ್ಕಿದೆ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಹವ್ಯಾಸವಾಗಿದೆ, ಯಾವುದೇ ಸಮಾಜವಿರಲಿ, ಎಲ್ಲರನ್ನೂ ಸೇರಿಸಿಕೊಂಡು ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಮುನ್ನೆಡೆಸುತ್ತಿದ್ದೇನೆ. ನನಗೆ ಜಾತಿ ಅನ್ನುವುದಿಲ್ಲ, ಮನುಷ್ಯತ್ವವೇ ನನ್ನ ಜಾತಿ, ಹಾಗಾಗಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಲಾಗಿದೆ. ಸಂಗೊಳ್ಳಿ ರಾಯಣ್ಣ, ಕಿತ್ತೂರು ಚನ್ನಮ್ಮ, ಅಂಬೇಡ್ಕರ್, ಮಹಾವೀರ ಎಲ್ಲರಿಗೂ ಜೈ ಎನ್ನುತ್ತೇನೆ. ನಾನು ಎಂದೂ ಅಭಿವೃದ್ಧಿಯಲ್ಲಿ ರಾಜಕಾರಣ ಮಾಡುವುದಿಲ್ಲ, ನೀವೂ ರಾಜಕಾರಣ ಮಾಡಬೇಡಿ. ನನ್ನ ಕೈಯಲ್ಲಿ ಎಷ್ಟು ದಿನ ಅಧಿಕಾರವಿರತ್ತೋ ಅಲ್ಲಿಯವರೆಗೆ ಅಭಿವೃದ್ಧಿ ಕೆಲಸಗಳು ಮುಂದುವರೆಯಲಿವೆ ಎಂದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಮ ಪಂಚಾಯತ್ ಅಧ್ಯಕ್ಷೆ ನಮ್ರತಾ ಪ್ರ ಜಾಧವ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ನಾಗೇಶ ದೇಸಾಯಿ, ತಾಲೂಕ ಪಂಚಾಯತ್ ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ, ನಿಲೇಶ್ ಚಂದಗಡ್ಕರ್, ಕಲ್ಲಪ್ಪ ರಾಮಚನ್ನವರ, ಅಂಜನಾ ಬೆಳಗಾಂವ್ಕರ್, ರೇಣುಕಾ ಕರವಿನಕೊಪ್ಪ, ಪ್ರವೀಣ ಮುರಾರಿ, ಮಹಾದೇವಿ ರಾಮಚನ್ನವರ, ಸಂಜಯ ಬಿ. ಪಾಟೀಲ, ಡಾ. ಎನ್. ಎಚ್. ಅಸ್ಕಿ, ದಶರಥ ಚೌಬಾರಿ, ವಸಂತರಾವ ಜಾಧವ್, ಕಮಲವ್ವ ನಾಯಕ್ ಹಾಗೂ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಕಮೀಟಿಯ ಸದಸ್ಯರು ಉಪಸ್ಥಿತರಿದ್ದರು.

Advertisement

ಇದಾದ ಬಳಿಕ ಬಾಳೇಕುಂದ್ರಿ ಬಿ.ಕೆ ಗ್ರಾಮದ ವೈರಲೆಸ್ ಮೈದಾನದಲ್ಲಿ ನಡೆಯುತ್ತಿರುವ ‘ಹರ್ಷ ಟ್ರೋಫಿ ಲಾಂಗ್ ಪಿಚ್ ಕ್ರಿಕೆಟ್ ‘ ಪಂದ್ಯಾವಳಿಯ ರೆಗ್ಯುಲರ್ ಪಂದ್ಯಕ್ಕೆ ಟಾಸ್ ಮಾಡುವ ಮೂಲಕ ಕ್ರಿಕೆಟ್ ಆಟಗಾರರಿಗೆ ಸಚಿವರು ಪ್ರೋತ್ಸಾಹಿಸಿ, ಶುಭ ಕೋರಿದರು.

ನಂತರ ಸುಳೇಭಾವಿ ಗ್ರಾಮದ ಶ್ರೀ ಶಾಕಾಂಭರಿ ಹಾಗೂ ಶ್ರೀ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು, ದರ್ಶನ ಆಶೀರ್ವಾದ ಪಡೆದರು. ಈ ಸಮಯದಲ್ಲಿ ಗ್ರಾಮದ ಹಿರಿಯರು, ಪಕ್ಷದ ಮುಖಂಡರು, ಆಯಾ ದೇವಸ್ಥಾನದ ಟ್ರಸ್ಟ್ ಕಮಿಟಿಯ ಸದಸ್ಯರು ಹಾಗೂ ಗ್ರಾಮದ ಜನ ಉಪಸ್ಥಿತರಿದ್ದರು. ಮಹಿಳೆಯರು ಸಚಿವರಿಗೆ ಉಡಿ ತುಂಬಿ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next