ಬೆಳಗಾವಿ: ಪೊಲೀಸ್ ಎಂದು ನಕಲಿ ಗುರುತಿನ ಚೀಟಿ ಇಟ್ಟುಕೊಂಡು ತಿರುಗಾಡುತ್ತಿದ್ದ ಕಿರಣ ವೀರನಗೌಡ ವಿರುದ್ಧ ಹಿರೇಬಾಗೇವಾಡಿ ಠಾಣೆಯಲ್ಲಿ ಸಿಐಡಿ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
ಹುಕ್ಕೇರಿ ತಾಲೂಕಿನ ಯಮಕನಮರಡಿ ಠಾಣೆಯಲ್ಲಿ ನಿಲ್ಲಿಸಿದ್ದ ಕಾರಿನಲ್ಲಿಯ ಚಿನ್ನ ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ವಶದಲ್ಲಿರುವ ಕಿರಣ ವೀರನಗೌಡ ಖೊಟ್ಟಿ ದಾಖಲೆ ಸೃಷ್ಟಿಸಿ ಪೊಲೀಸ್ ಆಗಿರುವ ಬಗ್ಗೆ ನಕಲಿ ಗುರುತಿನ ಚೀಟಿ ಇಟ್ಟುಕೊಂಡಿದ್ದನು ಎಂದು ದೂರು ದಾಖಲಾಗಿದೆ.
ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಯಲ್ಲಿ ತಿರುಗಾಡುವಾಗ ಪೊಲೀಸ್ ಎಂದು ಹೇಳಿಕೊಂಡು ತನ್ನ ಕಾರಿನಲ್ಲಿ ಸಂಚರಿಸುತ್ತಿದ್ದನು. ಟೋಲ್ ನಾಕಾದಲ್ಲಿ ಇದೇ ನಕಲಿ ಗುರುತಿನ ಚೀಟಿ ತೋರಿಸುತ್ತಿದ್ದನು. ಜತೆಗೆ ಲಾಡ್ಜ್, ಹೊಟೇಲ್ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಈ ಐಡಿ ಕಾರ್ಡ್ದಿಂದ ತನ್ನನ್ನು ಪರಿಚಯಿಸಿಕೊಳ್ಳುತ್ತಿದ್ದನು.
ಇದನ್ನೂ ಓದಿ :ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ಬೆಲೆ 150 ರೂ. ನಿಗದಿಪಡಿಸಲಾಗಿದೆ: ಪ್ರಧಾನಿ ಮೋದಿ
ಈ ಬಗ್ಗೆ ಸಿಐಡಿ ಡಿಎಸ್‌ಪಿ ರಾಮಚಂದ್ರ ಬಿ. ಅವರು ದೂರು ಸಲ್ಲಿಸಿದ್ದು, ಐಪಿಸಿ ಸೆಕ್ಶನ್ 465, 468, 419 ಹಾಗೂ 471 ಕಲಂ ಪ್ರಕಾರ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಹಿರೇಬಾಗೇವಾಡಿ ಇನ್ಸಪೆಕ್ಟರ್ ವಿಜಯಕುಮಾರ ಸಿನ್ನೂರ ತಿಳಿಸಿದ್ದಾರೆ.