ಬೆಳಗಾವಿ: ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಬಿಮ್ಸ್, ಆಯುಷ್ ವತಿಯಿಂದ ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಜನರಿಗೆ ಬಿಮ್ಸ್ ಆವರಣದಲ್ಲಿ ರವಿವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಮೇಳದಲ್ಲಿ ಸುಮಾರು 2011 ಜನರ ಆರೋಗ್ಯ ತಪಾಸಣೆ ಮಾಡಲಾಯಿತು.
ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿದ ಸಂಸದ ಸುರೇಶ ಅಂಗಡಿ, ರೋಗಿಗಳು ವೈದ್ಯರನ್ನು ದೇವರೆಂದೇ ನಂಬಿದ್ದು, ಅವರ ನಂಬಿಕೆಗಳಿಗೆ ಚ್ಯುತಿ ಬಾರದಂತೆ ಕಾರ್ಯ ನಿರ್ವಹಿಸಬೇಕು. ಜನರ ಆರೋಗ್ಯ ರಕ್ಷಣೆಗೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಎಲ್ಲ ವರ್ಗದ ಜನರಿಗೂ ಇದರಿಂದ ಅನುಕೂಲವಾಗಿದೆ. ಇದರ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕೇಂದ್ರ ಸರಕಾರದ ಆಯುಷ್ಮಾನ್ ಭಾರತ ಹಾಗೂ ರಾಜ್ಯ ಸರಕಾರದ ಆರೋಗ್ಯ ಕರ್ನಾಟಕ ಯೋಜನೆ ಅತ್ಯುತ್ತಮ ಯೋಜನೆಯಾಗಿದ್ದು, ಈ ಎರಡನ್ನೂ ವಿಲೀನಗೊಳಿಸಲಾಗಿದೆ. ಈ ಯೋಜನೆ ಸಮಾಜದ ಕಟ್ಟ ಕಡೆಯ ರೋಗಿಗೂ ತಲುಪುವಂತಾಗಬೇಕು. ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂ. ವರೆಗೆ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದ ಭರಿಸಲಾಗುತ್ತದೆ ಎಂದು ತಿಳಿಸಿದರು.
ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಆಯುಷ್ಮಾನ ಭಾರತ-ಆರೋಗ್ಯ ಕರ್ನಾಟಕ ಯೋಜನೆ ಜಗತ್ತಿನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ದೇಶಕ್ಕೆ ಇದು ಹೆಮ್ಮೆಯ ವಿಷಯ. ಬಡವರ ಪಾಲಿಗೆ ಇದೊಂದು ಸಂಜೀವಿನಿಯಾಗಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಜಿಲ್ಲಾ ಕುಷ್ಠರೋಗ ನಿಯಂತ್ರಣ ಅಧಿಕಾರಿ ಡಾ| ಚಾಂದಿನಿ ದೇವಡಿ ಯೋಜನೆಯ ಮಾಹಿತಿ ನೀಡಿದರು. ಬಿಮ್ಸ್ ನಿರ್ದೇಶಕ ಡಾ| ಎಸ್.ಟಿ. ಕಳಸದ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ರಮೇಶ ದೇಶಪಾಂಡೆ, ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ| ಹುಸೇನಸಾಬ ಖಾಜಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಬಿ.ಎನ್. ತುಕ್ಕಾರ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ| ಐ.ಪಿ. ಗಡಾದ, ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ಎಂ.ಎಸ್. ಪಲ್ಲೇದ, ತಾಲೂಕು ಆರೋಗ್ಯಾಧಿಕಾರಿ ಡಾ| ಸಂಜೀವ ನಾಂದ್ರೆ, ಡಾ| ಸುರೇಶ ದೊಡವಾಡ, ಆಯುಷ್ ಅಧಿಕಾರಿ ಡಾ| ಶ್ರೀಕಾಂತ ಸುಣಧೋಳಿ ಇದ್ದರು.
ತೇಜಸ್ವಿನಿ ಎಸ್.ಕೆ. ನಾಡಗೀತೆ ಹಾಡಿದರು. ಡಿಎಚ್‌ಒ ಡಾ| ಅಪ್ಪಾಸಾಹೇಬ ನರಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಸಿ.ಜಿ. ಅಗ್ನಿಹೋತ್ರಿ ನಿರೂಪಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ| ಸಂಜಯ ಡುಮ್ಮಗೊಳ ವಂದಿಸಿದರು. ಆರೋಗ್ಯ ಮೇಳದಲ್ಲಿ 128 ಮೋತಿ ಬಿಂದು, 1118 ದಂತ ಹಾಗೂ 26 ಹೃದಯ, ಮೂತ್ರಪಿಂಡ, ನರರೋಗ ಕಾಯಿಲೆ ಇರುವವರನ್ನು ಗುರುತಿಸಿ ಚಿಕಿತ್ಸೆ ನೀಡಲಾಯಿತು. 7 ಮಂದಿ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಮೋದಿ ಬ್ಯಾನರ್ ಇಲ್ಲದ್ದಕ್ಕೆ ಅಂಗಡಿ ಬೇಸರ
ಕಾರ್ಯಕ್ರಮದ ಬ್ಯಾನರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಚಿತ್ರ ಹಾಕದಿರುವುದಕ್ಕೆ ಸಂಸದ ಸುರೇಶ ಅಂಗಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬಡ ಜನರಿಗೆ ಅನುಕೂಲವಾಗುವ ಯೋಜನೆಯನ್ನು ನೀಡಿರುವ ಪ್ರಧಾನಿ ಫೋಟೋ ಹಾಕುವುದು ನಿಮಗೆ ಅವಮಾನವೇ?. ಬೇಕಿದ್ದರೆ ಮುಖ್ಯಮಂತ್ರಿ ಫೋಟೋ ಹಾಕಬಹುದಿತ್ತು ಎಂದು ಸಂಸದ ಅಂಗಡಿ ಅಸಮಾಧಾನ ವ್ಯಕ್ತಪಡಿಸಿದರು.