ಬೆಳಗಾವಿ: ಇಡೀ ಜಿಲ್ಲೆಯೇ ಬರಪೀಡಿತವೆಂಬ ಹಣೆಪಟ್ಟಿ ಕಟ್ಟಿಕೊಂಡಿದ್ದರಿಂದ ಬರದ ಬೇಗೆ ಜಾನುವಾರುಗಳಿಗೆ ಅಂಟಬಾರದು ಎಂಬ ಉದ್ದೇಶದಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಮೇವು ಬ್ಯಾಂಕ್ ಆರಂಭಿಸಲು ಸಿದ್ಧತೆ ಮಾಡಿಕೊಂಡಿದೆ. ತಾಲೂಕಾವಾರು ಬೇಡಿಕೆಯಂತೆ ಬ್ಯಾಂಕುಗಳನ್ನು ಸ್ಥಾಪಿಸುವ ಮೂಲಕ ಬರ ಎದುರಿಸಲು ಸನ್ನದ್ಧವಾಗಿದೆ.
ಮುಂಗಾರು ಹಂಗಾಮಿನಲ್ಲಿ ಮೂರು ತಾಲೂಕುಗಳು ಬರಪೀಡಿತ ಆಗಿದ್ದವು. ಹಿಂಗಾರಿ ಮಳೆ ಇಲ್ಲದ್ದಕ್ಕೆ ಇಡೀ ಜಿಲ್ಲೆಯೇ ಬರ ಪೀಡಿತವಾಗಿ ತತ್ತರಿಸಿದೆ. ಮಳೆ-ಬೆಳೆ ಇಲ್ಲದೇ ರೈತರು ಕಂಗಾಲಾಗಿದ್ದು, ಜಾನುವಾರುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದೆಂದು ಜಿಲ್ಲಾಡಳಿತ ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿಗೆ ಮೇವು ಬ್ಯಾಂಕುಗಳನ್ನು ಸ್ಥಾಪಿಸಿ ಜಾನುವಾರುಗಳ ರಕ್ಷಣೆಗೆ ನಿಂತಿದೆ.
ಹತ್ತೂ ತಾಲೂಕಿಗೆ ಅಂಟಿದೆ ಬರ: ಮಳೆಗಾಲ ಆರಂಭವಾಗುತ್ತಿದ್ದಂತೆ ಮುಂಗಾರು ಹಂಗಾಮಿನಲ್ಲಿ ಅಥಣಿ, ರಾಮದುರ್ಗ ಹಾಗೂ ಸವದತ್ತಿ ತಾಲೂಕುಗಳಿಗೆ ಬರಸಿಡಿಲು ಬಡಿದಿದೆ. ಇದರಿಂದ ಎಚ್ಚೆತ್ತುಕೊಂಡು ಹಿಂಗಾರಿನಲ್ಲಾದರೂ ರೈತರ ಮೊಗದಲ್ಲಿ ಸಂತಸ ಮೂಡುಬಹುದೆಂಬ ಆಶಾಭಾವನೆ ಇತ್ತು. ಆದರೆ ಮೂರಲ್ಲ ಜಿಲ್ಲೆಯ ಹತ್ತೂ ತಾಲೂಕುಗಳು ಬರ ಪೀಡಿತ ಎಂದು ಘೋಷಣೆ ಆಗಿವೆ. ಇದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದ್ದು, ಸಮರ್ಪಕ ಮಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ.
ಜಿಲ್ಲೆಯಲ್ಲಿ 41 ಮೇವು ಬ್ಯಾಂಕುಗಳನ್ನು ಆರಂಭಿಸುವ ಬಗ್ಗೆ ಪಶುಸಂಗೋಪನೆ ಇಲಾಖೆ ಪ್ರಸ್ತಾವನೆ ಸಲ್ಲಿಸಿದ್ದು, ಇದರಲ್ಲಿ ಅತಿ ಹೆಚ್ಚು ಚಿಕ್ಕೋಡಿ ತಾಲೂಕಿನಲ್ಲಿ 12 ಮೇವು ಬ್ಯಾಂಕುಗಳ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಥಣಿ ತಾಲೂಕಿನ ಜಕ್ಕಾರಟ್ಟಿ ಸೇರಿದಂತೆ ಮೂರು ಕಡೆ ಮೇವು ಬ್ಯಾಂಕುಗಳು ಕಾರ್ಯಾರಂಭಿಸಿವೆ. ಸದ್ಯಕ್ಕಂತೂ ಜಿಲ್ಲೆಯಲ್ಲಿ ಮೇವಿನ ಅಭಾವ ಎಲ್ಲಿಯೂ ಇಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಯಾವ ಪ್ರದೇಶದಲ್ಲಿ, ಎಷ್ಟು ಬ್ಯಾಂಕುಗಳನ್ನು ಆರಂಭಿಸಬೇಕು ಎಂದು ಪಶುಸಂಗೋಪನಾ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಕಳೆದ ವರ್ಷ ಸಂಗ್ರಹಿಸಿಟ್ಟಿದ್ದ ಜೋಳದ ಮೇವು ಸದ್ಯ ಅತಿ ಹೆಚ್ಚಿದ್ದು, ಕಳೆದ ಹಂಗಾಮಿನಲ್ಲಿ 1.94 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿತ್ತು. ಈ ವರ್ಷದ ಹಂಗಾಮಿನಲ್ಲಿ 2.45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆದಿದ್ದರಿಂದ ಕಬ್ಬಿನ ಮೇವು ಕೂಡ ಸಂಗ್ರಹಿಸಿಡಲಾಗುತ್ತಿದೆ. ಈಗ ಕಬ್ಬು ಕಟಾವು ಜೋರಾಗಿದ್ದು, ಅದರ ಮೇವು ಸಂಗ್ರಹಿಸಿಟ್ಟು ಮುಂದಿನ ಬೇಸಿಗೆ ವೇಳೆ ಬಳಸಿಕೊಳ್ಳಲು ಜಿಲ್ಲಾಡಳಿತ ಯೋಚಿಸುತ್ತಿದೆ. ಜಾನುವಾರುಗಳ ಸಂಖ್ಯೆ ಹಾಗೂ ಅಲ್ಲಿಯ ಬರಗಾಲ ಪರಿಸ್ಥಿತಿಯ ಆಧಾರದ ಮೇಲೆ ಮೇವು ಬ್ಯಾಂಕುಗಳು ಸ್ಥಾಪನೆ ಆಗಲಿವೆ. ಸ್ಥಳೀಯ ಶಾಸಕರ ಸೂಚನೆ ಮೇರೆಗೆ ಜಾಗಗಳನ್ನು ನಿಗದಿಪಡಿಸಲಾಗುತ್ತಿದೆ. ಆಯಾ ತಹಶೀಲ್ದಾರರು ನೀಡುವ ಮಾಹಿತಿ ಅನುಸಾರ ಹಂತ ಹಂತವಾಗಿ ಮೇವು ಬ್ಯಾಂಕುಗಳು ಏಪ್ರಿಲ್ ವೇಳೆಗೆ ಬಹುತೇಕ ಕಡೆ ಕಾರ್ಯಾರಂಭ ಮಾಡಲಿವೆ.
ಜಿಲ್ಲೆಯಲ್ಲಿ ಹಸು, ಕರು, ಆಕಳು, ಕೋಣ, ಎತ್ತು, ಆಡು ಸೇರಿದಂತೆ ಒಟ್ಟಾರೆ 14.22 ಲಕ್ಷ ಜಾನುವಾರುಗಳಿವೆ. ಬರಗಾಲ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರಿಗೆ ಈಗಾಗಲೇ ಪಶುಸಂಗೋಪನೆ ಇಲಾಖೆಯಿಂದ ಮೇವು ಬೆಳೆಯಲು ಬೀಜ ವಿತರಿಸಲಾಗಿದೆ. ಪ್ರತಿ 5 ಕೆ.ಜಿ. ಪಾಕೆಟ್‌ನ 76,630 ಮಿನಿ ಕಿಟ್‌ಗಳನ್ನು ವಿತರಿಸಲಾಗಿದ್ದು, 10 ಗುಂಟೆ ಜಾಗದಲ್ಲಿ ಅದನ್ನು ಬೆಳೆಯಬಹುದಾಗಿದೆ,.
ರೈತರು ಮೇವು ಬ್ಯಾಂಕಿಗೆ ಆಗಮಿಸಿ ಒಂದು ಕೆ.ಜಿ.ಗೆ 2 ರೂ. ನೀಡಿ ಖರೀದಿಸಬಹುದಾಗಿದೆ. ಜಾನುವಾರುಗಳ ಸಂಖ್ಯೆಗೆ ತಕ್ಕಂತೆ ಒಟ್ಟಾರೆ 16 ವಾರಗಳಿಗೆ ಸಾಕಾಗುವಷ್ಟು ಮೇವು ಸಂಗ್ರಹಿಸಿಡಲಾಗಿದೆ.
7 ವಾರಕ್ಕಾಗುವಷ್ಟು ಸಂಗ್ರಹ
ಒಂದು ದಿನಕ್ಕೆ ಪ್ರತಿ ಜಾನುವಾರಿಗೆ 6 ಕೆ.ಜಿ. ಮೇವು ಅವಶ್ಯಕತೆಯಿದ್ದು, ತಿಂಗಳಿಗೆ 2.11 ಲಕ್ಷ ಮೆಟ್ರಿಕ್ ಟನ್ ಬೇಕಾಗುತ್ತದೆ. ಸದ್ಯ ಜಿಲ್ಲಾಡಳಿತ ಕಡೆಗೆ 3.63 ಲಕ್ಷ ಮೆಟ್ರಿಕ್ ಟನ್ ಮೇವು ಸಂಗ್ರಹವಾಗಿದೆ. ಒಂದೂವರೆ ತಿಂಗಳಿಗೆ ಆಗುವಷ್ಟು ಸಂಗ್ರಹ ಮಾಡಿಕೊಂಡಿದೆ.
ಮೇವು ಕೊರತೆ ಆಗದಂತೆ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಮೇವು ಖರೀದಿಸಲು ಕಂಪನಿಯೊಂದಕ್ಕೆ ಟೆಂಡರ್ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಕಡಿಮೆ ಮೊತ್ತದಲ್ಲಿ ಮೇವು ಕೊಡುವ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಬೇಸಿಗೆ ವೇಳೆ ಜಾನುವಾರುಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಮೇವು ಬ್ಯಾಂಕುಗಳ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
• ಡಾ| ಡಿ.ಎಸ್. ಹವಾಲ್ದಾರ,
ಉಪನಿರ್ದೇಶಕರು, ಪಶುಸಂಗೋಪನಾ ಇಲಾಖೆ
ಭೈರೋಬಾ ಕಾಂಬಳೆ