Advertisement

ಅರಣ್ಯ ಸಚಿವರ ತವರಲ್ಲಿಯೇ ಚಿರತೆ ಸೆರೆ ಪ್ರಹಸನ; 18 ದಿನಗಳಾದರೂ ಹಿಡಿಯಲಾಗದ ಅರಣ್ಯ ಇಲಾಖೆ

11:52 PM Aug 22, 2022 | Team Udayavani |

ಬೆಳಗಾವಿ: ಆರು ಬೋನು, 16 ಸಿಸಿಟಿವಿ ಕೆಮರಾ, 50 ಜನ ಅರಣ್ಯ ಸಿಬಂದಿ, ಮುಧೋಳ ನಾಯಿ, ಸಕ್ರೆಬೈಲ್‌ ಆನೆ…!ಇವಿಷ್ಟೂ ಬೆಳಗಾವಿಯ ಸೆರಗಿನಲ್ಲಿ ಬೀಡುಬಿಟ್ಟಿರುವ ಚಿರತೆ ಸೆರೆಗೆ ಅರಣ್ಯ ಇಲಾಖೆ ಮತ್ತು ರಾಜ್ಯ ಸರಕಾರ ಪಡುತ್ತಿರುವ ಪ್ರಹಸನದ ಭಾಗವಾಗಿದೆ.

Advertisement

ಪ್ರತಿ ದಿನವೂ ಕಣ್ಣಾಮುಚ್ಚಾಲೆ ಆಡುತ್ತಿರುವ ಈ ಚಿರತೆ ಬೆಳಗಾವಿ ಜನತೆಗೆ, ಅರಣ್ಯ ಇಲಾಖೆ ಸಿಬಂದಿಗೆ ಮತ್ತು ಸರಕಾರಕ್ಕೂ ಮುಜುಗರ ಉಂಟು ಮಾಡಿದೆ. ಅದೂ ಅರಣ್ಯ ಸಚಿವರ ತವರು ಜಿಲ್ಲೆಯಲ್ಲಿಯೇ.

ಕಳೆದ 18 ದಿನಗಳಿಂದಲೂ ಈ ಚಿರತೆಯನ್ನು ಹಿಡಿಯಲು ತರಹೇವಾರಿ ಪ್ರಯತ್ನ ನಡೆದಿದೆ. ಆದರೆ, ದಿನವೂ ಸಾವಿರಾರು ಜನ ವಾಯು ವಿಹಾರ ನಡೆಸುವ ಗಾಲ್ಫ್ ಮೈದಾನವನ್ನೇ ತನ್ನ ತಾಣವನ್ನಾಗಿ ಮಾಡಿಕೊಂಡಿರುವ ಚಿರತೆ ಮಾತ್ರ ಯಾರ ಕಣ್ಣಿಗೂ ಬೀಳುತ್ತಲೇ ಇಲ್ಲ. ಚಿರತೆ ಹಾವಳಿಯಿಂದಾಗಿ ಸುತ್ತಲಿನ 22 ಶಾಲೆಗಳಿಗೆ ಕೆಲವು ದಿನಗಳ ಕಾಲ ರಜೆ ನೀಡಲಾಗಿದೆ.

ಅರಣ್ಯ ಸಿಬಂದಿ ವೈಫ‌ಲ್ಯ?
ಬೆಳಗಾವಿ, ಚಿಕ್ಕೋಡಿ ತಾಲೂಕಿನ ಯಡೂರ ವಾಡಿ, ಸವದತ್ತಿ ತಾಲೂಕು, ಮೂಡಲಗಿ ತಾಲೂಕಿನ ಧರ್ಮಟ್ಟಿ ಯಲ್ಲಿ ಚಿರತೆ ಮತ್ತು ಬೆಳಗಾವಿಯ ಬೆಳಮಟ್ಟಿ ಗ್ರಾಮದಲ್ಲಿ ಕತ್ತೆಕಿರುಬ ಕಂಡು ಬಂದಿತ್ತು. ಯಾವುದನ್ನೂ ಸೆರೆ ಹಿಡಿಯಲಾಗಿಲ್ಲ. ವಿಶೇಷವೆಂದರೆ, ಸಿಬಂದಿಗೆ ಅಂಥ ತರಬೇತಿಯೇ ನೀಡಿಲ್ಲವಂತೆ!

ಇನ್ನೂ ಬಲೆಗೆ ಬೀಳದ ಚಿರತೆ
ಆ. 5ರಿಂದ ಬೆಳಗಾವಿ ನಗರದಲ್ಲಿ ಕಾಣಿಸಿಕೊಳ್ಳುತ್ತಿರುವ ಚಿರತೆ ಸೆರೆಗೆ 6 ಬೋನು, 16 ಸಿಸಿಟಿವಿ ಕೆಮರಾ ಬಳಸಲಾಗಿದೆ. 50 ಜನ ಅರಣ್ಯ ಸಿಬಂದಿ ಶೋಧ ನಿರತರಾಗಿದ್ದಾರೆ. ಜನರನ್ನು ಸಮಾಧಾನಪಡಿಸಲು ಏನೇನೋ ಕಸರತ್ತು ಮಾಡಿದ್ದಾರೆ. ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು, ಅಗತ್ಯ ಬಿದ್ದರೆ ಮುಧೋಳ ನಾಯಿಯನ್ನು ಬಳಸುವುದಾಗಿ ಹೇಳಿದ್ದರು. ಈಗ ಸಕ್ರೆಬೈಲ್‌ನಿಂದ ಎರಡು ಆನೆಗಳನ್ನು ತರಲಾಗುವುದು ಎಂದಿದ್ದಾರೆ ಅರಣ್ಯ ಸಚಿವ ಉಮೇಶ್‌ ಕತ್ತಿ.

Advertisement

ಜನವಸತಿ ಹಾಗೂ ಶಾಲೆಗಳಿರುವ ಪ್ರದೇಶದಲ್ಲಿ ಚಿರತೆಯೊಂದು 18 ದಿನಗಳಿಂದ ಓಡಾಡಿಕೊಂಡಿದೆ ಎಂದರೆ ಅದು ಉದಾಸೀನ ಮಾಡುವ ಸಂಗತಿಯಲ್ಲ. ಕೂಡಲೇ ಬಂಡೀಪುರ, ಶಿವಮೊಗ್ಗದ ನುರಿತ ಸಿಬಂದಿಯನ್ನು ಕರೆಸಬೇಕು. ತರಬೇತಿಗೆ ತೆರಳಿರುವ ಡಿಎಫ್ಒ ಹರ್ಷಾ ಬಾನು ಅವರನ್ನು ಕರೆಸಿಕೊಳ್ಳಬಹುದಿತ್ತು ಎಂದು ವಿವಿಧ ಸಂಘಟನೆಗಳ ಮುಖಂಡರು ಮನವಿ ಮಾಡಿಕೊಂಡರೂ ಅರಣ್ಯ ಇಲಾಖೆ ಕಿವಿಗೊಟ್ಟಿಲ್ಲ.

ಸೋಮವಾರವೂ ಕಾಣಿಸಿಕೊಂಡ ಚಿರತೆ
ಗಾಲ್ಫ್ ಮೈದಾನದ 250 ಎಕರೆ ಪ್ರದೇಶದ ಪೊದೆಯಲ್ಲಿ 18 ದಿನಗಳಿಂದ ಅವಿತಿರುವ ಚಿರತೆ ಸೋಮವಾರ ಮತ್ತೆ ಪ್ರತ್ಯಕ್ಷವಾಗಿದೆ. ಮಿಲಿಟರಿ ಪ್ರದೇಶದಲ್ಲಿರುವ ಕಸಾಯಿಖಾನೆ ಬಳಿ ಹೋಗಿ ಆಹಾರ ಸೇವಿಸಿ ಇಲ್ಲಿಗೆ ಮರಳುತ್ತದೆ. ಗಾಲ್ಫ್ ಮೈದಾನದ ಬಳಿ ಬಂದ ಚಿರತೆಯನ್ನು ರಸ್ತೆಯ ಎರಡೂ ಬದಿಗೆ ನಿಂತು ನೋಡಿದ ಅರಣ್ಯ ಇಲಾಖೆ ಸಿಬಂದಿ ಅದನ್ನು ಸೆರೆ ಹಿಡಿಯಲು ಸಂಪೂರ್ಣವಾಗಿ ಎಡವಿದ್ದಾರೆ. ಅವರು ಹಾರಿಸಿದ ಗುಂಡು, ಕೈಯಲ್ಲಿ ಹಿಡಿದಿದ್ದ ಬಲೆ ಚಿರತೆಗೆ ತಾಗಲೇ ಇಲ್ಲ!

ಶೀಘ್ರದಲ್ಲೇ ಚಿರತೆ ಸೆರೆ ಹಿಡಿಯುವ ವಿಶ್ವಾಸ ಇದೆ. ಚಿರತೆ ಕಾರ್ಯಾಚರಣೆ ನಡೆಯುವ ಸ್ಥಳಕ್ಕೆ ಹೋಗಲು ನನಗೇ ಭಯವಾಗುತ್ತದೆ. ಹೀಗಾಗಿ ನಾನು ಅಲ್ಲಿಗೆ ಹೋಗುವುದಿಲ್ಲ. ಅರಣ್ಯ ಸಚಿವರು ಸ್ಥಳಕ್ಕೆ ಹೋಗಬೇಕೆಂಬ ಕಾನೂನು ಇಲ್ಲ.
-ಉಮೇಶ್‌ ಕತ್ತಿ, ಅರಣ್ಯ ಸಚಿವರು

-ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next