Advertisement

ನಿಗದಿತ ದರದಲ್ಲೇ ಚಿಕಿತ್ಸೆ ನೀಡಿ : ಖಾಸಗಿ ಆಸ್ಪತ್ರೆಗಳಿಗೆ ಬೆಳಗಾವಿ ಜಿಲ್ಲಾಧಿಕಾರಿ ಸೂಚನೆ

07:40 PM Jan 09, 2022 | Team Udayavani |

ಬೆಳಗಾವಿ: ಸಂಭವನೀಯ ಕೋವಿಡ್‌ ಮೂರನೇ ಅಲೆ ಸಂದರ್ಭದಲ್ಲಿ ನೋಂದಾಯಿತ ಎಲ್ಲ ಖಾಸಗಿ ಆಸ್ಪತ್ರೆಗಳು ಸರ್ಕಾರದ ಮಾರ್ಗಸೂಚಿಯಂತೆ ಪ್ರತಿಶತ 50ರಷ್ಟು ಹಾಸಿಗೆ ಒದಗಿಸುವ ಜೊತೆಗೆ ನಿಗದಿಪಡಿಸಿದ ದರದಲ್ಲಿ ಕೋವಿಡ್‌ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಖಾಸಗಿ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಸಂಭವನೀಯ ಕೋವಿಡ್‌ ಮೂರನೇ ಅಲೆ ನಿರ್ವಹಣೆಯ ಪೂರ್ವಸಿದ್ಧತೆಗೆ ಸಂಬಂಧಿಸಿದಂತೆ ಶನಿವಾರ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳ ಸಭೆ ನಡೆಸಿ ಅವರು ಮಾತನಾಡಿದರು. ಆಯುಷ್ಮಾನ್‌ ಭಾರತ-ಆರೋಗ್ಯ ಕರ್ನಾಟಕ, ಕೆಪಿಎಂಇ ಹಾಗೂ ಆರೋಗ್ಯ ಸುರûಾ ಟ್ರಸ್ಟ್‌ ಅಡಿಯಲ್ಲಿ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಸೋಂಕಿತರಿಗೆ ಸರ್ಕಾರದಿಂದ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಚಿಕಿತ್ಸೆಗೆ ಅನುಕೂಲವಾಗುವಂತೆ ಎಲ್ಲ ಖಾಸಗಿ ಆಸ್ಪತ್ರೆಗಳು ಶೇ.50 ಹಾಸಿಗೆ ಮೀಸಲಿಡಬೇಕು. ಇದಲ್ಲದೇ ಸರ್ಕಾರ ನಿಗದಿಪಡಿಸಿದ ದರದಲ್ಲಿಯೇ ಕೋವಿಡ್‌ ಚಿಕಿತ್ಸೆ ನೀಡಬೇಕು ಎಂದು ನಿರ್ದೇಶನ ನೀಡಿದರು.

ಪ್ರತಿ ಆಸ್ಪತ್ರೆ ತಮ್ಮಲ್ಲಿರುವ ಹಾಸಿಗೆಗಳ ಸಂಖ್ಯೆ, ಆಕ್ಸಿಜನ್‌ ಸೌಲಭ್ಯ ಮತ್ತಿತರ ಮಾಹಿತಿ ಜಿಲ್ಲಾಡಳಿತಕ್ಕೆ ಒದಗಿಸಬೇಕು. ಪರಿಸ್ಥಿತಿ ಆಧರಿಸಿ ಕಳುಹಿಸಲಾಗುವ ಸೋಂಕಿತರಿಗೆ ಸಮರ್ಪಕ ಚಿಕಿತ್ಸೆ ನೀಡಬೇಕು. ಯಾವುದೇ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ ಚಿಕಿತ್ಸಾ ದರಕ್ಕಿಂತ ಹೆಚ್ಚಿನ ದರ ಆಕರಿಸುವುದು ಕಂಡು ಬಂದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಆಕ್ಸಿಜನ್‌ ಕೊರತೆ ಇಲ್ಲ: ಕೋವಿಡ್‌ ಸೋಂಕಿತರ ತುರ್ತು ಚಿಕಿತ್ಸೆಗೆ ಅಗತ್ಯವಿರುವ ಆಕ್ಸಿಜನ್‌, ಔಷಧ ಸೇರಿದಂತೆ ಎಲ್ಲ ಬಗೆಯ ಅಗತ್ಯ ಸಾಮಗ್ರಿಗಳು ಲಭ್ಯವಿವೆ. ಸದ್ಯಕ್ಕೆ ಜಿಲ್ಲೆಯಲ್ಲಿ ಆಕ್ಸಿಜನ್‌ ಸಹ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು. ಖಾಸಗಿ ಆಸ್ಪತ್ರೆಗಳ ಅಗತ್ಯತೆ ಆಧರಿಸಿ ಆಕ್ಸಿಜನ್‌ ಪೂರೈಸಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿಕೊಂಡಿದೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳ ನಿರ್ವಹಣೆ, ಆಂಬ್ಯುಲೆನ್ಸ್‌ ವ್ಯವಸ್ಥೆ ಸಮರ್ಪಕವಾಗಿ ನಿರ್ವಹಿಸಲು ಈಗಾಗಲೇ ನೋಡಲ್‌ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು.
ಸಂಭವನೀಯ ಮೂರನೇ ಅಲೆ ವೇಳೆ ಸೋಂಕಿನಿಂದ ಬಾಧಿತರಾಗುವ ಮಕ್ಕಳ ಚಿಕಿತ್ಸೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಮಕ್ಕಳಿಗಾಗಿ ಪ್ರತ್ಯೇಕ ಚಿಕಿತ್ಸೆಗೆ ಅನುಕೂಲವಾಗುವಂತೆ ಬೆಡ್‌ಗಳನ್ನು ನಿಗದಿಪಡಿಸಲಾಗಿದೆ. ಮಕ್ಕಳ ತಜ್ಞರು ಚಿಕಿತ್ಸೆ ವಿಷಯದಲ್ಲಿ ಮುತುವರ್ಜಿಯಿಂದ ಕೆಲಸ ಮಾಡಬೇಕು. ತುರ್ತು ಸಂದರ್ಭದಲ್ಲಿ ಬರುವ ಯಾವುದೇ ಮಕ್ಕಳಿಗೆ ಚಿಕಿತ್ಸೆ
ನಿರಾಕರಿಸಬಾರದು ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಎಸ್‌.ವಿ. ಮುನ್ಯಾಳ ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದಂತೆ ಈಗಾಗಲೇ ಮಾಡಿಕೊಳ್ಳಲಾಗಿರುವ ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಬಾಲಕೃಷ್ಣ ತುಕ್ಕಾರ ಸೇರಿದಂತೆ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next