ಬೆಳಗಾವಿ: ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವುದಾಗಿ ಹೇಳಿ ನಿರಂತರವಾಗಿ ಅತ್ಯಾಚಾರ ಎಸಗಿದ ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಇಲ್ಲಿನ ಜಿಲ್ಲಾ ಪೋಕ್ಸೋ ನ್ಯಾಯಾಲಯ ಬುಧವಾರ ಮಹತ್ವದ ತೀರ್ಪು ನೀಡಿದೆ.
ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ಹುಲಿಗೆಪ್ಪ ವಡ್ಡರ ಎಂಬ ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೋ ನ್ಯಾಯಾಲಯ-1 ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ತೀರ್ಪು ನೀಡಿದ್ದಾರೆ.
13 ಅಕ್ಟೋಬರ್ 2021ರಂದು ಆರೋಪಿ ಹುಲಿಗೆಪ್ಪ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿದ್ದಾನೆ. ಪ್ರೀತಿಯ ನಾಟಕವಾಡಿ ಬಾಲಕಿಯನ್ನು ಬಸ್ ನಲ್ಲಿ ಮಂಗಳೂರಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಸವದತ್ತಿ ಠಾಣೆಯಲ್ಲಿ ದೂರು ದಾಖಲಾಗಿತ್ತು.
ತನಿಖಾಧಿಕಾರಿ ಮಂಜುನಾಥ ನಡುವಿನಮನಿ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ವಿಚಾರಣೆ ನಡೆಸಿ ಸಾಕ್ಷಿ, ವಿವಿಧ ದಾಖಲೆಗಳು ಹಾಗೂ ಮುದ್ದೆಮಾಲುಗಳ ಆಧಾರದ ಮೇಲಿಂದ ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದ್ದಾರೆ. ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಒಂದು ಲಕ್ಷ ರೂ. ಪರಿಹಾರ ಧನವನ್ನು ಪಡೆಯಲು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ. ಪಾಟೀಲ ವಾದ ಮಂಡಿಸಿದ್ದಾರೆ.
ಇದನ್ನೂ ಓದಿ: BBK11: ಬಿಗ್ ಬಾಸ್ ಮನೆಯಲ್ಲಿ ದುಡ್ಡು ಕದ್ದು ಓಡಿದ ಚೈತ್ರಾ.! ಮನೆಮಂದಿ ಶಾಕ್