Advertisement

ಸರ್ಕಾರವನ್ನು ಮನೆಗೆ ಕಳಿಸೋದೇ ನನ್ನ ಗುರಿ

06:00 AM Dec 11, 2018 | Team Udayavani |

ಬೆಳಗಾವಿ: ಜೆಡಿಎಸ್‌-ಕಾಂಗ್ರೆಸ್‌ ಪಕ್ಷಗಳನ್ನು ಮನೆಗೆ ಕಳಿಸುವುದು ನನ್ನ ಗುರಿ. ಇದಕ್ಕೆ ಬೆಳಗಾವಿಯಿಂದ ಹೋರಾಟ ಆರಂಭಿಸುತ್ತಿದ್ದೇವೆ. ನಾನು ಅಧಿಕಾರ ಕಳೆದುಕೊಂಡಿರಬಹುದು. ಆದರೆ, ನಮ್ಮ 104 ಶಾಸಕರ ನೆರವಿನಿಂದ ಸದನದ ಒಳಗೆ ಹೋರಾಟ ಮಾಡುತ್ತೇವೆ. ಈ ಸಮ್ಮಿಶ್ರ ಸರಕಾರ ಒಂಟಿ ಕಾಲಿನ ಮೇಲೆ ನಿಲ್ಲುವಂತೆ ಮಾಡುತ್ತೇವೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

Advertisement

ನಗರದ ಹೊರವಲಯದ ಯಡಿಯೂರಪ್ಪ ಮಾರ್ಗದ ಅಲಾರವಾಡ ಕ್ರಾಸ್‌ ಬಳಿ ಸೋಮವಾರ ಆಯೋಜಿಸಲಾಗಿದ್ದ ಬಿಜೆಪಿ ರೈತ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಮಾವೇಶದಲ್ಲಿ ಭಾಗವಹಿಸಿದ್ದ ನಾಯಕರು ಮೈತ್ರಿ ಸರಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಈ ಸರಕಾರ ಐದು ಜಿಲ್ಲೆಗಳಿಗೆ ಮಾತ್ರ ಸೀಮಿತವಾದ ಸರಕಾರವಾಗಿದೆ. ಎಲ್ಲ ಆಡಳಿತ ಹೊಳೆನರಸೀಪುರದಿಂದ ನಡೆಯುತ್ತಿದೆ ಎಂದು ನೇರ ಆರೋಪ ಮಾಡಿದರು.

ಸುಮಾರು 10 ಸಾವಿರ ಜನರನ್ನು ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ, ಪ್ರತಿಪಕ್ಷದವರು ನನಗೆ ವಯಸ್ಸಾಗಿದೆ. ಇನ್ನೇನು ಮುಖ್ಯಮಂತ್ರಿ ಆಗುವುದಿಲ್ಲ ಎಂದು ಹೇಳುತ್ತಲೇ ಇದ್ದಾರೆ. ಇದು ಅವರ ಭ್ರಮೆ. ನನಗೆ ವಯಸ್ಸಾಗಿಲ್ಲ. ಕೈಕಾಲುಗಳು ಇನ್ನೂ ಗಟ್ಟಿಯಾಗಿದ್ದು, ಇನ್ನೂ 15 ವರ್ಷಗಳ ಕಾಲ ರಾಜಕಾರಣದಲ್ಲಿ ಇರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಐದು ಜಿಲ್ಲೆಗಳಿಗೆ ಸೀಮಿತವಾದ ಈ ಸರಕಾರದಲ್ಲಿ ನಾವು ತಬ್ಬಲಿಗಳಾಗುತ್ತಿದ್ದೇವೆ ಎಂಬುದು ಕಾಂಗ್ರೆಸ್‌ನವರಿಗೆ ಅರ್ಥವಾಗುತ್ತಿದೆ. ಇದೇ ಸ್ಥಿತಿ ಮುಂದುವರಿದರೆ ನಾವು ಸಂಪೂರ್ಣ ಪಾತಾಳ ಸೇರುತ್ತೇವೆ ಎಂಬುದು ಅರಿವಾಗತೊಡಗಿದೆ. ಹೀಗಾಗಿ, ಸರಕಾರ ಬಹಳ ದಿನ ಉಳಿಯುವುದಿಲ್ಲ ಎಂಬ ನನ್ನ ಮಾತು ನಿಜವಾಗುತ್ತದೆ ಎಂದರು. ಸಮ್ಮಿಶ್ರ ಸರಕಾರ ಕಾಂಗ್ರೆಸ್‌ನವರಿಂದಲೇ ಪತನವಾಗಲಿದೆ. ಅದಕ್ಕೆ ಇನ್ನಷ್ಟು ದಿನ ನೀವು ಕಾಯಬೇಕು. ಮುಂದೆ ನಮ್ಮದೇ ಸರಕಾರ ಖಚಿತ ಎಂದು ಭವಿಷ್ಯ ನುಡಿದರು.

ಮುಖ್ಯಮಂತ್ರಿಯಾದ ಮೇಲೆ ಎಷ್ಟು ದಿನ ಉತ್ತರ ಕರ್ನಾಟಕಕ್ಕೆ ಭೇಟಿ ನೀಡಿದ್ದೀರಿ ಎಂಬುದನ್ನು ಜನರಿಗೆ ಹೇಳಬೇಕು ಎಂದು ಕುಮಾರಸ್ವಾಮಿಗೆ ಆಗ್ರಹಿಸಿದ ಅವರು, ಅಧಿಕಾರ ಸ್ವೀಕಾರ ಮಾಡಿದ ಮೇಲೆ ಕುಮಾರಸ್ವಾಮಿ ಈ ಭಾಗಕ್ಕೆ ಬರಲೇ ಇಲ್ಲ. ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದರೂ ಒಂದು ದಿನ ಅಲ್ಲಿ ವಾಸ ಮಾಡಲಿಲ್ಲ. ಹಳ್ಳಿಗಳಲ್ಲಿ ಇರುತ್ತೇನೆ ಎಂದು ಹೇಳಿ ಅಲ್ಲಿಗೂ ಹೋಗಲಿಲ್ಲ. ಸುಳ್ಳು ಹೇಳುವ ಮೂಲಕ ಜನರನ್ನು ವಂಚಿಸುತ್ತಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.

Advertisement

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಾತನಾಡಿ, ಸಾಲಮನ್ನಾ ಎಂಬುದು ಕೇವಲ ಹಗಲು ಕನಸು. ನಾವು ಸಾಲಮನ್ನಾ ಮಾಡಿದಾಗ ಯಾವುದೇ ಕರಾರು ಹಾಕಿರಲಿಲ್ಲ. ಆದರೆ, ಈಗ ಸಮ್ಮಿಶ್ರ ಸರಕಾರ 43 ಸಾವಿರ ಕೋಟಿ ರೂ.ಗಳ ಸಾಲಮನ್ನಾ ಮಾಡಿದ್ದೇವೆ ಎಂದು ಹೇಳಿ 53 ಕರಾರು ಹಾಕಿದೆ. ಈ ನಾಟಕ ಬಹಳ ದಿನ ನಡೆಯುವುದಿಲ್ಲ ಎಂದು  ಟೀಕಿಸಿದರು.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ಅಧಿಕಾರ ಸ್ವೀಕರಿಸುವ ಮುನ್ನ ರಾಜ್ಯದ ರೈತರಿಗೆ ಮಾತು ಕೊಟ್ಟಂತೆ ಸಾಲಮನ್ನಾ ಮಾಡಬೇಕು. ಇಲ್ಲದಿದ್ದರೆ ಖುರ್ಚಿ ಖಾಲಿ ಮಾಡಿ ಹೋಗಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next