Advertisement

ತುತ್ತಿನ ಚೀಲ ತುಂಬಿಸಿಕೊಳ್ಳಲು ಹೊರಟವರು ಮಸಣಕ್ಕೆ

05:06 PM Jun 27, 2022 | Team Udayavani |

ಬೆಳಗಾವಿ: ತುತ್ತು ಅನ್ನಕ್ಕಾಗಿ ಹಗಲಿರುಳು ದುಡಿದು ಬದುಕು ಸಾಗಿಸಬೇಕೆಂಬ ಧಾವಂತದಲ್ಲಿದ್ದ ಈ ಬಡ ಜೀವಗಳು ಧಾವಂಥದಲ್ಲೇ ಮಸಣ ಸೇರಿದ್ದಾರೆ. ತುತ್ತಿನ ಚೀಲ ತುಂಬಿಸಿಕೊಳ್ಳುವ ಕನಸು ಅರ್ಧಕ್ಕೆ ನಿಲ್ಲಿಸಿ ತಮ್ಮ ಬದುಕಿನ ಪಯಣ ಮುಗಿಸಿದ್ದಾರೆ. ಜೀವ ಕಳೆದುಕೊಂಡ ಕಾರ್ಮಿಕರ ಒಬ್ಬೊಬ್ಬರ ಬದುಕಿನ ಜಂಜಾಟ ವಿಚಿತ್ರವಾಗಿದೆ.

Advertisement

ಬೆಳಗಾವಿ ತಾಲೂಕಿನ ಖನಗಾಂವ ಕೆ.ಎಚ್‌. ಹಾಗೂ ತುಮ್ಮರಗುದ್ದಿ ಗ್ರಾಮದ ಮಧ್ಯ ಭಾಗದಲ್ಲಿರುವ ಕಲ್ಯಾಳ ಫೂಲ್‌ ಬಳಿಯ ಚಿಕ್ಕ ಸೇತುವೆ ಬಳಿ ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕರ ಬದುಕಿನ ಕಥೆ ಕೇಳಿದರೆ ಕಣ್ಣಂಚಲ್ಲಿ ನೀರು ಬರುತ್ತದೆ.

ತುತ್ತಿನ ಚೀಲ ತುಂಬಿಸಿಕೊಳ್ಳಲು ಹೊರಟಿದ್ದ ಕಾರ್ಮಿಕರ ಅಪಘಾತವಾದ ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಊಟದ ಡಬ್ಬಿ ನೋಡಿದರೆ ಬದುಕು ಇಷ್ಟೇನಾ? ಎಂಬುದು ಪ್ರತಿಯೊಬ್ಬರ ಮನಸ್ಸಲ್ಲಿ ಬರುತ್ತಿತ್ತು. ಕಾರ್ಮಿಕರು ಕೆಲಸದಲ್ಲಿ ಮಳೆಯಿಂದ ರಕ್ಷಿಸಿಕೊಳ್ಳಲು ಧರಿಸುವ ಜಾಕೆಟ್‌, ಬಟ್ಟೆಗಳು, ಊಟದ ಡಬ್ಬಿಯಲ್ಲಿದ್ದ ಅನ್ನ, ರೊಟ್ಟಿ, ಪಲ್ಯೆ ಬಿದ್ದಿದ್ದವು.

ಬದುಕಿನುದ್ದಕ್ಕೂ ದುಡಿಯುವುದರಲ್ಲಿಯೇ ದಿನ ಸವೆಸುತ್ತ, ಮಗಳ ಮದುವೆಗಾಗಿ ಮಾಡಿದ್ದ 50 ಸಾವಿರ ರೂ. ಸಾಲ ಮೂರು ದಿನಗಳ ಹಿಂದೆಯಷ್ಟೇ ತೀರಿಸಿ ಬದುಕು ಕಟ್ಟಿಕೊಳ್ಳಲು ಮತ್ತೆ ಕೆಲಸಕ್ಕೆ ಹೊರಟಿದ್ದ ಈ ಕಾರ್ಮಿಕ ಜವರಾಯನ ಪಾದ ಸೇರಿದ್ದಾನೆ.

ಸಾಲ ತೀರಿಸಿದ್ದ ಯುವಕ: ಗೋಕಾಕ ತಾಲೂಕಿನ ಅಕ್ಕತಂಗೇರಹಾಳ ಗ್ರಾಮದ ಬಸವರಾಜ ಹನುಮನ್ನವರ ದಿನಗೂಲಿ ಕಾರ್ಮಿಕ ಮೃತಪಟ್ಟಿದ್ದಾನೆ. ಇದ್ದ ಮಗಳನ್ನು ಮದುವೆ ಮಾಡಲು 50 ಸಾವಿರ ರೂ. ಗ್ರಾಮದಲ್ಲಿ ಕೈಗಡ ಪಡೆದಿದ್ದ. ದುಡಿದು ಹೇಗಾದರೂ ಮಾಡಿ ಆ ಸಾಲ ತೀರಿಸಿ ನಿರಾಳರಾಗಿ ಮಗನ ಮದುವೆ ಮಾಡಬೇಕೆಂಬ ಆಸೆ ಪಟ್ಟಿದ್ದ. ಮೂರು ದಿನಗಳ ಹಿಂದೆಯಷ್ಟೇ ಆ ಎಲ್ಲ ಸಾಲ ತೀರಿಸಿ ಎರಡು ದಿನಗಳಿಂದಲೇ ಬೆಳಗಾವಿಯಲ್ಲಿ ರೈಲ್ವೆ ಹಳಿ ದಿನಗೂಲಿ ಕಾರ್ಮಿಕನಾಗಿ ದುಡಿಯಲು ಹೊರಟಿದ್ದನು. ಆದರೆ ಜವರಾಯ ಈ ಕಾರ್ಮಿಕನ ಬದುಕಿಗೆ ಕೊಳ್ಳಿ ಇಟ್ಟಿದ್ದಾನೆ.

Advertisement

ಕಲ್ಯಾಳ ಫೂಲ್‌ ಬಳಿಯ ಚಿಕ್ಕ ಸೇತುವೆ ಈ ಏಳು ಕುಟುಂಬಗಳ ಬದುಕಿಗೆ ತಣ್ಣೀರೆರಚಿದೆ. ಏಳು ಜನರು ಜೀವಕ್ಕೆ ಈ ಸೇತುವೆ ಯಮವಾಗಿ ಬಂದು ಕಾಡಿದೆ. ಅಕ್ಕತಂಗೇರಹಾಳ ಗ್ರಾಮದಿಂದ ದಿನಾಲೂ ಮೂರು ಕ್ರೂಸರ್‌ ವಾಹನಗಳಲ್ಲಿ ನಿತ್ಯ ಬೆಳಗ್ಗೆ ತೆರಳುವ ಈ ದಿನಗೂಲಿ ಕಾರ್ಮಿಕರ ಬದುಕು ಅಷ್ಟಕ್ಕಷ್ಟೇ. ಜೀವ ಕಳೆದುಕೊಂಡವರ ಸ್ಥಿತಿಯಂತೂ ಹೇಳತೀರದಾಗಿದೆ.

ಕುಟುಂಬಕ್ಕೆ ಆಧಾರವಾಗಿದ್ದ ಯುವಕ

ಅಕ್ಕತಂಗೇರಹಾಳ ಗ್ರಾಮದ ಆಕಾಶ ಗಸ್ತಿ ಎಂಬ 22 ವರ್ಷದ ಯುವಕ ಈತನೇ ಕುಟುಂಬದ ಆಧಾರ ಸ್ತಂಭ. ಸಣ್ಣ ವಯಸ್ಸಿನಲ್ಲಿ ಕಾರ್ಮಿಕನಾಗಿ ದುಡಿಯುತ್ತ ಕುಟುಂಬ ಮುನ್ನಡೆಸುವ ಜವಾಬ್ದಾರಿ ಈತನ ಮೇಲಿತ್ತು. ಆದರೆ ಸಣ್ಣ ವಯಸ್ಸಿನಲ್ಲಿ ಬದುಕು ಕಟ್ಟಿಕೊಳ್ಳಬೇಕಾದ ಆಕಾಶ ಜೀವ ಕಳೆದುಕೊಂಡಿದ್ದು, ಇಡೀ ಕುಟುಂಬ ಅನಾಥವಾಗಿದೆ. ಆಕಾಶ ಗಸ್ತಿ ಎಂಬ ಯುವಕ ತನ್ನ ತಂದೆ-ತಾಯಿ ನೋಡಿಕೊಳ್ಳುತ್ತಿದ್ದನು. ಈತ ಒಬ್ಬನೇ ಮಗ. ಕುಟುಂಬಕ್ಕೆ ಆಧಾರವಾಗಿದ್ದವನು ಈಗ ಜೀವ ಕಳೆದುಕೊಂಡಿದ್ದಾನೆ. ಮದುವೆ ಆಗಬೇಕೆಂದು ಹಲವು ತಿಂಗಳಿಂದ ಕನ್ಯೆ ನೋಡುತ್ತಿದ್ದನು. ಈವರೆಗೆ ತಮ್ಮ ಸಂಬಂಧಿಕರ ಹೆಣ್ಣು ನೋಡಿ ಮದುವೆ ಮಾಡಬೇಕೆಂದು ನಿಶ್ಚಯಿಸಿದ್ದನು. ಈ ಒಂದು ತಿಂಗಳಲ್ಲಿ ಮದುವೆ ನಿಶ್ಚಯವಾಗುವ ಸಾಧ್ಯತೆ ಇತ್ತು. ಆದರೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ.

ಅಕ್ಕತಂಗೇರಹಾಳ ಸ್ಮಶಾನ ಮೌನ

ಒಂದೇ ಊರಿನಲ್ಲಿ ಐವರನ್ನು ಕಳೆದುಕೊಂಡಿರುವ ಗೋಕಾಕ ತಾಲೂಕಿನ ಅಕ್ಕತಂಗೇರಹಾಳ ಗ್ರಾಮ ರವಿವಾರ ಸ್ಮಶಾನ ಮೌನವಾಗಿತ್ತು. ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿತ್ತು. ಕಾರ್ಮಿಕರನ್ನು ಕಳೆದುಕೊಂಡಿದ್ದ ಅಕ್ಕತಂಗೇರಹಾಳ, ದಾಸನಟ್ಟಿ ಹಾಗೂ ಎಂ. ಮಲ್ಲಾಪುರ ಗ್ರಾಮದ ಜನರು ಮನೆ ಮಕ್ಕಳನ್ನು ಕಳೆದುಕೊಂಡಂತೆ ಅಳುತ್ತಿರುವುದು ಕಲ್ಲು ಹೃದಯವೂ ಕರಗುವಂತಿತ್ತು. ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ಅಂಗಡಿ-ಮುಂಗಟ್ಟು ಬಂದ್‌ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಶವಾಗಾರದ ಎದುರು ಜನಸಾಗರ

ಭೀಕರ ಅಪಘಾತದಲ್ಲಿ ಮೃತಪಟ್ಟ ಏಳು ಜನ ಕಾರ್ಮಿಕರ ಕುಟುಂಬಸ್ಥರು, ಸಂಬಂಧಿಕರು ಹಾಗೂ ಸುತ್ತಲಿನ ಹಳ್ಳಿಗಳ ಜನರು ಶವಾಗಾರ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಶವಾಗಾರ ಆವರಣದಲ್ಲಿ ಜನ ಹೆಚ್ಚಾಗಿ ಸೇರಿದ್ದರಿಂದ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸಂಜೆ ಹೊತ್ತಿಗೆ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಹಸ್ತಾಂತರಿಸಲಾಯಿತು. ದಾಸನಟ್ಟಿ, ಎಂ. ಮಲ್ಲಾಪುರ ಹಾಗೂ ಅಕ್ಕತಂಗೇರಹಾಳಕ್ಕೆ ಮೃತದೇಹಗಳನ್ನೊಯ್ದು ಅಂತ್ಯಸಂಸ್ಕಾರ ನಡೆಸಲಾಯಿತು.

„ಭೈರೋಬಾ ಕಾಂಬಳೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next