Advertisement

Belagavi: ಐದು ವರ್ಷದಲ್ಲಿ 2 ಟನ್‌ ಗಾಂಜಾ ವಶ! ಹದಿಹರೆಯದವರೇ ಮಾರಾಟಗಾರರ ಗುರಿ

06:00 PM Nov 10, 2023 | Team Udayavani |

ಬೆಳಗಾವಿ: ಹದಿಹರೆಯದವರೇ ಮುಖ್ಯವಾಗಿ ಗಾಂಜಾ ಹಾಗೂ ಮಾದಕ ವಸ್ತುಗಳ ಅಮಲಿಗೆ ಬಲಿಯಾಗುತ್ತಿದ್ದು, ಜಿಲ್ಲೆಯಲ್ಲಿ ಗಾಂಜಾ ಬೆಳೆ ಬೆಳೆದು ಮಾರಾಟ ಮಾಡುವವರ ಹಾಗೂ ಖರೀದಿಸುವವರ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ. ಜಿಲ್ಲೆಯಲ್ಲಿ ಐದು ವರ್ಷದಲ್ಲಿ ಒಂದು ಕೋಟಿ ರೂ. ಮೌಲ್ಯದ ಎರಡು ಟನ್‌ಗೂ ಹೆಚ್ಚು ಗಾಂಜಾ ವಶಕ್ಕೆ ಪಡೆದು ಹೆಡೆಮುರಿ ಕಟ್ಟಿದ್ದಾರೆ.

Advertisement

ಇತ್ತೀಚಿನ ವರ್ಷಗಳಲ್ಲಿ ಗಾಂಜಾ ಮಾರಾಟ ಹಾಗೂ ಖರೀದಿಸುವವರ ಮೇಲೆ ಪೊಲೀಸರು ಹದ್ದಿನಗಣ್ಣು ಇಟ್ಟಿದ್ದಾರೆ. ವಿದ್ಯಾರ್ಥಿಗಳೇ ಹೆಚ್ಚು ಈ ಗಾಂಜಾ ನಶೆಗೆ ಬಲಿಯಾಗುತ್ತಿದ್ದಾರೆ. ಒಮ್ಮೆ ಇದರ ನಶೆ ಹತ್ತಿದರೆ ಅಷ್ಟೊಂದು ಸುಲಭವಾಗಿ
ಬಿಡುವುದು ಕಷ್ಟಕರ. ಜಿಲ್ಲೆಯಲ್ಲಿ ಗಾಂಜಾ ಘಾಟು ಅಬ್ಬರಿಸುತ್ತಿದ್ದು, ಕಳೆದ ಐದು ವರ್ಷದಲ್ಲಿ ಪೊಲೀಸರು ಗಾಂಜಾ ಮಾರಾಟ-ಖರೀದಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ.

ಕಳೆದ ಐದು ವರ್ಷದಲ್ಲಿ ಗಾಂಜಾ ಉತ್ಪಾದನೆ ಮತ್ತು ಮಾರಾಟದ ಮೇಲೆ ಪೊಲೀಸರು ನಿಯಂತ್ರಣ ಕೈಗೊಂಡಿದ್ದು, ಒಂದು ಕೋಟಿ ರೂ. ಮೌಲ್ಯದ 2,023 ಕಿ.ಗ್ರಾಂ. ಗಾಂಜಾ ಜಪ್ತಿ ಮಾಡಿಕೊಂಡಿದ್ದಾರೆ. ಒಟ್ಟು 317 ಜನರ ವಿರುದ್ಧ 211 ಪ್ರಕರಣ ದಾಖಲಿಸಿಕೊಂಡಿದ್ದು, ಈ ಪೈಕಿ 30 ಆರೋಪಿಗಳು ಹೊರ ರಾಜ್ಯದವರಾಗಿದ್ದಾರೆ.

ಸೂಕ್ತ ಸಾಕ್ಷಿ ಹೇಳಿದರೆ ಶಿಕ್ಷೆ ಪಕ್ಕಾ: ಈವರೆಗೆ ಕೇವಲ 20ಕ್ಕೂ ಹೆಚ್ಚು ಆರೋಪಿಗಳಿಗೆ ಆರು ತಿಂಗಳ ಜೈಲು ಹಾಗೂ ದಂಡ ವಿಧಿ ಸಿ ಶಿಕ್ಷೆ ನೀಡಲಾಗಿದೆ. ಐದು ವರ್ಷಗಳಲ್ಲಿ 317 ಜನರನ್ನು ಬಂಧಿ ಸಿದರೂ ಸಾಕ್ಷ್ಯಾಧಾರಗಳ ಕೊರತೆಯಿಂದ ಹೆಚ್ಚಿನ ಜನರಿಗೆ ಶಿಕ್ಷೆ ನೀಡಲು ಸಾಧ್ಯವಾಗಿಲ್ಲ. ಕೆಲವರು ಸಾಕ್ಷಿ ಹೇಳಲು ನ್ಯಾಯಾಲಯಕ್ಕೆ ಬಾರದಿರುವುದರಿಂದ ಶಿಕ್ಷೆ ಆಗಿಲ್ಲ. ನಿರ್ಭೀತಿಯಿಂದ ಜನರು ಮುಂದೆ ಬಂದು ಸಾಕ್ಷಿ ಹೇಳಿದರೆ ಆರೋಪಿಗಳಿಗೆ ಶಿಕ್ಷೆ ನೀಡಲು ಸಾಧ್ಯವಾಗುತ್ತದೆ ಎನ್ನುತ್ತಾರೆ
ಪೊಲೀಸರು.

ಕದ್ದು ಮುಚ್ಚಿ ಮಾರಾಟದ ಮೇಲೆ ನಿಗಾ: ಅಥಣಿ, ಯಮಕನಮರಡಿ ಹಾಗೂ ರಾಯಬಾಗ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಅತಿ ಹೆಚ್ಚಿನ ಪ್ರಮಾಣದಲ್ಲಿ ಇದ್ದು, ಹೊಲ, ಗದ್ದೆಗಳಲ್ಲಿ ಕದ್ದು ಮುಚ್ಚಿ ಗಾಂಜಾ ಬೆಳೆಯುತ್ತಿರುವುದನ್ನು
ಭೇದಿಸಿದ ಪೊಲೀಸರು ಅನೇಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

2022ರಲ್ಲಿ ರಾಯಬಾಗನಲ್ಲಿಯೇ ಒಂದೇ ಕಡೆಗೆ 337 ಕಿಲೋ ಗ್ರಾಂ. ಗಾಂಜಾ ಜಪ್ತಿ ಮಾಡಿಕೊಳ್ಳಲಾಗಿದೆ. ಯಮಕನಮರಡಿಯಲ್ಲಿ 49 ಹಾಗೂ ಅಥಣಿಯಲ್ಲಿ 46 ಕಿಲೋ ಗ್ರಾಂ. ಗಾಂಜಾ ಜಪ್ತಿ ಮಾಡಿಕೊಳ್ಳಲಾಗಿದೆ. ಕದ್ದು ಮುಚ್ಚಿ ಮಾರಾಟ ಮಾಡುವವರ ಮೇಲೆ
ಪೊಲೀಸರು ಹೆಚ್ಚಿನ ನಿಗಾ ಇಟ್ಟಿದ್ದಾರೆ.

ಗಾಂಜಾ ಸೇರಿದಂತೆ ಇತರೆ ಮಾದಕ ವಸ್ತುಗಳಿಂದ ಇಡೀ ಜೀವನವೇ ಹಾಳಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಮಕ್ಕಳು ಗಾಂಜಾ ಅಮಲಿನಿಂದ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಬಾಳಿ ಬದುಕಬಹುದಾದವರು ಮಧ್ಯದಲ್ಲಿ ಜೀವನದ ಪಯಣ ಮುಗಿಸುವ ಹಂತಕ್ಕೆ ಬಂದಿದ್ದಾರೆ. ಗಾಂಜಾ ದುಶ್ಚಟದ ಬಗ್ಗೆ  ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಗಾಂಜಾ ಮಾರಾಟ ಮಾಡುವವರ ಮೇಲೆ ಕಣ್ಗಾವಲು ಇಡಲಾಗಿದೆ. ಎಲ್ಲ ಪೊಲೀಸ್‌ ಠಾಣೆಯಲ್ಲಿಯೂ ಪೊಲೀಸರು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಗಾಂಜಾ ಉತ್ಪಾದನೆ ಹಾಗೂ ಮಾರಾಟದ ಬಗ್ಗೆ ಸಾರ್ವಜನಿಕರು ಸ್ಥಳೀಯ ಪೊಲೀಸ್‌ ಠಾಣೆ ಅಥವಾ ಜಿಲ್ಲಾ ಪೊಲೀಸ್‌ ಕಂಟ್ರೋಲ್‌   ರೂಂಗೆ ಮಾಹಿತಿ ನೀಡಬೇಕು ಎಂದು
ಎಸ್‌ಪಿ ಭೀಮಾಶಂಕರ ಗುಳೇದ ಮನವಿ ಮಾಡಿದ್ದಾರೆ.

ಡ್ರಗ್ಸ್‌ ಚಟದಿಂದ ಮಾನಸಿಕ ಖಿನ್ನತೆ‌
ಗಾಂಜಾ ಹಾಗೂ ಇತರೆ ಮಾದಕ ವಸ್ತುಗಳು ಹಳ್ಳಿ, ಪಟ್ಟಣಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಸಣ್ಣ ಪುಟ್ಟ ಅಂಗಡಿಗಳಲ್ಲಿ ಪಾಕೆಟ್‌ ಮಾಡಿ ಮಾರಾಟ ಮಾಡಲಾಗುತ್ತಿದೆ. ಗಾಂಜಾ, ಡ್ರಗ್ಸ್‌ ಸೇರಿದಂತೆ ಇತರೆ ಮಾದಕ ವಸ್ತುಗಳ ನಶೆಗೆ ಒಳಗಾದವರಿಗೆ ನಿತ್ಯವೂ ಇದು ಬೇಕಾಗುತ್ತದೆ. ಡ್ರಗ್ಸ್‌ ಚಟಕ್ಕೆ ಒಳಗಾದವರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಜತೆಗೆ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ 10 ಗ್ರಾಂ. ಗಾಂಜಾ 300-500 ರೂ. ವರೆಗೆ ಮಾರಾಟವಾದರೆ, ನಗರದಲ್ಲಿ 700-900 ರೂ. ವರೆಗೆ ದರ ಇದೆ ಎಂದು ತಿಳಿದು ಬಂದಿದೆ.

ಗಾಂಜಾ ಸೇರಿದಂತೆ ಇತರೆ ಮಾದಕ ವಸ್ತುಗಳು ಆರೋಗ್ಯಕ್ಕೆ ಹಾನಿಕಾರಕ. ಇದರ ಮಾರಾಟ ಹಾಗೂ ಖರೀದಿ ಮೇಲೆ ಪೊಲೀಸ್‌ ಇಲಾಖೆ ಜಿಲ್ಲೆಯಾದ್ಯಂತ ಕಣ್ಗಾವಲು ಇಟ್ಟಿದೆ. ಕದ್ದು ಮುಚ್ಚಿ ಮಾರಾಟ ಮಾಡುವವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ಕೂಡಲೇ ಗಾಂಜಾ ಮಾರಾಟಗಾರರನ್ನು ಬಂಧಿಸಲಾಗುವುದು. ಮಾಹಿತಿ ನೀಡಿದವರ ಹೆಸರು ಗೌಪ್ಯವಾಗಿ ಇಡಲಾಗುವುದು.
ಭೀಮಾಶಂಕರ ಗುಳೇದ, ಎಸ್‌ಪಿ, ಬೆಳಗಾವಿ

*ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next