Advertisement

ಬದ್ಧರಾಗಿರುವುದೆಂದರೆ ಸುಲಭವಲ್ಲ, ಬುದ್ಧನಾಗಿರುವಷ್ಟೇ ಕಠಿಣ… 

03:19 PM Jul 14, 2024 | Team Udayavani |

ಬದ್ಧತೆ ಎಂಬುದು ನಮ್ಮ ಅರಿವಿಗೇ ಬಾರದೆ ನಮಗಂಟಿಕೊಂಡಿ­ರುವ ಬಂಧನ. ಬದ್ಧತೆಯ ಬಂಧನ ಗಟ್ಟಿಯಾದಷ್ಟು ನಮ್ಮ ಬದುಕು ನಮ್ಮ ಮುಷ್ಟಿಯೊಳಗಿರುತ್ತದೆ. ಗಟ್ಟಿಯಾಗಿರುತ್ತದೆ. ಬೆಳಕು ಹರಿಸುವ ಸೂರ್ಯ, ಸುಳಿದು ಬೀಸುವ ಗಾಳಿ, ಹಸಿರು ತುಂಬಿದ ಪ್ರಕೃತಿ, ಮಳೆಗಾಲ ಬಂದರೆ ಟನ್‌ ಎಂದು ಸುರಿಯಲಾರಂಭಿಸುವ ಮಳೆ…ಎಲ್ಲವೂ ಸಮಯಕ್ಕೆ ಸರಿಯಾಗಿ, ಬದ್ಧತೆಯಿಂದ ತಮ್ಮ ಕಾರ್ಯದಲ್ಲಿ ತೊಡಗುವುದರಿಂದ ನಮ್ಮ ಬದುಕೂ ಸಾಂಗವಾಗಿ ಸಾಗುತ್ತಿದೆ. ಇವೆಲ್ಲದರಲ್ಲಿ ಒಂದಷ್ಟು ವ್ಯತ್ಯಾಸವಾದರೂ ಅದು ನಮ್ಮ ನಿತ್ಯಜೀವನದ ಮೇಲೆ ಪರಿಣಾಮ ಬೀರುತ್ತದೆ.

Advertisement

ಆದರೆ, ನಾವೆಲ್ಲಾ ಮನುಷ್ಯ ಮಾತ್ರರು. ನಮ್ಮ ಬದ್ಧತೆ ನಮ್ಮ ಬದುಕಿನ ವಲಯದೊಳಗೆ ಇರುತ್ತದೆ. ತಮ್ಮ ಶಕ್ತಿ ಮೀರಿ ಮಕ್ಕಳನ್ನು ಬೆಳೆಸುವ ಅಪ್ಪ-ಅಮ್ಮನ ಶ್ರಮದ ಹಿಂದೆ ಮಕ್ಕಳ ಭವಿಷ್ಯವನ್ನು ಕಟ್ಟಿಕೊಡಬೇಕೆಂಬ ಬದ್ಧತೆ ಇರುತ್ತದೆ. ಸ್ಕೂಲಿಗೆ ಪುಟ್ಟ ಬ್ಯಾಗಿನೊಂದಿಗೆ ಪುಟ್ಟ ಹೆಜ್ಜೆಗಳನಿಟ್ಟು ಹೋಗುವ ಮಗುವಿನಲ್ಲಿ, ಟೀಚರ್‌ ಹೇಳಿದ್ದನ್ನ ಕೇಳಬೇಕೆಂಬ ಬದ್ಧತೆ ಇರುತ್ತದೆ. ಬೆಳಗ್ಗೆದ್ದು ಸಮಯಕ್ಕೆ ಸರಿಯಾಗಿ ತಿಂಡಿ, ಊಟ, ಮನೆ ಕೆಲಸವೆಂದು ಓಡಾಡುವ ಅಮ್ಮನ ನಡೆಯಲ್ಲಿ ಮನೆಯನ್ನು ಚಂದವಾಗಿರಿಸಬೇಕೆಂಬ ಬದ್ಧತೆ ಇರುತ್ತದೆ. ನಾಳೆ ಸಿಕ್ತೀನಿ ಕಣೋ ಎಂದಿದ್ದ ಗೆಳೆಯ ಬೆಳ್ಳಂಬೆಳಗ್ಗೆ ಎದ್ದು ಕರೆ ಮಾಡಿ, ಇವತ್ತು ಸಿಗಕ್ಕಾಗಲ್ಲ ಎನ್ನುವ ಮಾತಿನಲ್ಲಿ, ಸಿಗಲಾಗದಿದ್ದರೂ ಮಾತಿಗೆ ಬದ್ಧವಾಗಿರಬೇಕೆಂಬ ಕಳಕಳಿ ಇರುತ್ತದೆ.

ಕೊಟ್ಟ ಮಾತಿಗೆ ತಪ್ಪಬಾರದು…

ಈ ನಂಬಿಕೆಗೆ ಬಲವಾದ ಉಸಿರು ಎಂದರೆ ನಾವು ತೋರ್ಪಡಿಸುವ ಬದ್ಧತೆ. ಬದ್ಧತೆ ಸಡಿಲವಾಯಿತೆಂದರೆ ನಂಬಿಕೆಯೂ ಬಿದ್ದು ಹೋಗಿಬಿಡುತ್ತದೆ. ಇದು ನಮ್ಮ ಸಂಬಂಧಗಳ ಒಳಗೆ ಮಾತ್ರವಲ್ಲ, ನಾವು ದಿನನಿತ್ಯ ಮಾಡುವ ದುಡಿಮೆಗೂ ಅನ್ವಯವಾಗುತ್ತದೆ. ಯಾರೋ ಒಬ್ಬರು ಅವರ ಕೆಲಸವಾಗಬೇಕೆಂದು

ನಮ್ಮನ್ನು ನಂಬಿ ನಮ್ಮ ಬಳಿ ಬಂದಾಗ ನಾವು, ಕೆಲಸ ಮಾಡಿಸಲು ಅವರಿಂದ ಹಣ ಪಡೆದು ನಿಮ್ಮ ಕೆಲಸ ಆಗುತ್ತೆ ಎಂದು ಭರವಸೆ ನೀಡಿದ ಮೇಲೆ, ಆ ಕೆಲಸವನ್ನು ಪೂರ್ಣಗೊಳಿಸುವುದು, ಹೇಳಿದ ಮಾತಿಗೆ ಬದ್ಧರಾಗಿರುವುದು ನಮ್ಮ ಕರ್ತವ್ಯವಾಗಿರುತ್ತದೆ. ಕಷ್ಟದ ಸಂದರ್ಭವೆಂಬ ಕಾರಣ ಹೇಳಿ ಸಾಲ ಪಡೆಯುವವರು, ಕೆಲಸ ಮಾಡಿಕೊಡುವೆನೆಂದು ಭರವಸೆ ನೀಡುವವರು ಎಲ್ಲರಿಗೂ ಈ ಮಾತು ಅನ್ವಯವಾಗುತ್ತದೆ. ಆದರೆ, ನಮ್ಮ ನಡುವೆ ಬದ್ಧತೆಯಿಲ್ಲದೆ ಜಾರಿಕೊಳ್ಳುವವರೇ ಅನೇಕರು.

Advertisement

ಬದ್ಧತೆ ಬದುಕಾಗಬೇಕು: 

ನಮಗೆ ನಾವೇ ಬೇಲಿ ಹಾಕಿಕೊಳ್ಳುವುದು ಅಥವಾ ನಮಗೆ ನಾವೇ ಬದ್ಧರಾಗಿರುವುದು ಅಷ್ಟೊಂದು ಸುಲಭದ ಮಾತಲ್ಲ. ಇವತ್ತಿಗೆ ಈ ಕೆಲಸ ಮಾಡಿ ಮುಗಿಸಬೇಕು. ನಾಳೆಯ ದಿನ ಅವರ ಸಾಲ ತೀರಿಸಬೇಕು, ಚಿಕ್ಕದಾಗಿ ಹಣ ಕೂಡಿಡುವ ಹವ್ಯಾಸ ಮಾಡಿಕೊಳ್ಳಬೇಕು. ಈ ಚಟಗಳಿಂದ ಇಂದಿನಿಂದ ದೂರ ಇರಬೇಕು… ಇವೆಲ್ಲವೂ ಸಣ್ಣಗೆ ನಮ್ಮೊಳಗೆ ನಾವು ಗೆರೆ ಹಾಕಿಕೊಂಡು ಮಾಡಿಕೊಳ್ಳಬೇಕಾದ ಬದ್ಧತೆಗಳಿರಬಹುದು. ಆದರೆ, ನಮಗೆ ಗೆರೆ ಹಾಕಿಕೊಂಡು ಬದ್ಧರಾಗಿರುವುದರ ಬದಲು ಗೆರೆ ದಾಟಿ ಹೋಗುವುದೇ ಸುಲಭದ ಕಾರ್ಯವಾಗುತ್ತದೆ. ನಮ್ಮ ಬದುಕಿನ ಜವಾಬ್ದಾರಿಗಳು, ನಮ್ಮನ್ನೇ ನಂಬಿಕೊಂಡಿರುವವರ ಜವಾಬ್ದಾರಿಗಳು ಎಲ್ಲವೂ ನಮ್ಮ ಬದ್ಧತೆಯೊಳಗೆ ಜತನವಾಗಿ ಸಾಗುತ್ತಿರುತ್ತದೆ. ಆದರೆ, ನಾವು ಅದೆಲ್ಲವನ್ನೂ ಮರೆತು ಬೇರೆ ದಾರಿ ಹಿಡಿದೆವೆಂದರೆ ನಮ್ಮ ಬದುಕಷ್ಟೇ ಅಲ್ಲದೆ ನಮ್ಮವರೆಂದುಕೊಂಡವರೂ ನಮ್ಮಿಂದಾಗಿ ಕಷ್ಟಕ್ಕೀಡಾಗಬಹುದು.

ನಮ್ಮ ಬದುಕಿನ ಸುತ್ತ ನಾವು ಕಟ್ಟಿಕೊಳ್ಳಬೇಕಾದ ಸುಂದರ ಕೋಟೆ ಎಂದರೆ ಅದು ಬದ್ಧತೆ. ಕಷ್ಟವಾಗಬಹುದು. ಆದರೆ, ಬದುಕಿನೆಡೆಗಿನ ನಮ್ಮ ಬದ್ಧತೆ ನಮ್ಮ ಕೈಹಿಡಿಯುತ್ತದೆ. ಬದುಕಿನ ದಾರಿಯನ್ನು ಹಗುರವಾಗಿಸುತ್ತದೆ ಮತ್ತು ಮಾನಸಿಕ ತೃಪ್ತಿ ಕೊಡುತ್ತದೆ…

-ಅನುರಾಧಾ ತೆಳ್ಳಾರ್‌

Advertisement

Udayavani is now on Telegram. Click here to join our channel and stay updated with the latest news.

Next