Advertisement

ಪದ್ಮ ಕೀರ್ತಿ ಹೆಚ್ಚಿಸಿದ ತೆರೆಮರೆ ಸಾಧಕರು

12:34 AM Jan 26, 2022 | Team Udayavani |

ಹೊಸದಿಲ್ಲಿ: ತಮಿಳುನಾಡಿನ ನೃತ್ಯಪಟು, ದೇವದಾಸಿ ಆರ್‌. ಮುತ್ತುಕಣ್ಣಮ್ಮಾಳ್‌, ಮಹಿಳೆಯರನ್ನು ಸಂಘಟಿಸಿ ಗ್ರಾಮದಲ್ಲಿ ನೈರ್ಮಲ್ಯ ಘಟಕ ಸ್ಥಾಪಿಸಿರುವ ಗುಜರಾತ್‌ನ ಗಮಿತ್‌ ರಮೀಳಾಬೆನ್‌ ರಾಯಸಿಂಗ್‌ಭಾಯಿ, ಮಣಿಪುರದಲ್ಲಿ ಗೊಂಬೆ ತಯಾರಿ ಮೂಲಕ ಸ್ವಾವಲಂಬನೆ ಸಾಧಿಸಿರುವ ಕೋನ್ಸಮ್‌ ಇಬೋಮ್ಚ ಸಿಂಗ್‌, ಶಾರೀರಿಕವಾಗಿ ಅಸಮರ್ಥರಾಗಿದ್ದರೂ ಸಾಮಾಜಿಕ ಸೇವೆಯಲ್ಲಿ ತಮ್ನನ್ನು ತಾವು ತೊಡಗಿಸಿಕೊಂಡು ಸಾರ್ಥಕ ಜೀವನ ನಡೆಸುತ್ತಿರುವ ಕೇರಳದ ರಬಿಯಾ..

Advertisement

ದೇಶದ ಮೂಲೆ ಮೂಲೆಗಳ ಎಲೆಮರೆ ಕಾಯಿಗಳನ್ನು “ಪದ್ಮ’ ಪ್ರಶಸ್ತಿಗೆ ಆಯ್ಕೆ ಮಾಡಿ, ಗೌರವ ಸಲ್ಲಿಸುವ ಕೇಂದ್ರ ಸರಕಾರದ ಪ್ರಯತ್ನ ಈ ಬಾರಿಯೂ ಮುಂದುವರಿದಿದೆ. ಮಂಗಳವಾರ ಪ್ರಕಟವಾದ ಪದ್ಮ ಪ್ರಶಸ್ತಿಯ ಉದ್ದ ಪಟ್ಟಿಯೇ ಇದಕ್ಕೆ ಸಾಕ್ಷಿ. ಈ ಬಾರಿ ಒಟ್ಟು 128 ಮಂದಿ ಗಣ್ಯರಿಗೆ ಪದ್ಮ ಗೌರವ ಸಂದಿದೆ. ಈ ಪೈಕಿ 10 ಮಂದಿ ವಿದೇಶಿ ಗಣ್ಯರು, ಸಿನೆಮಾ ಕ್ಷೇತ್ರದ ಮೂವರು (ಗಾಯಕ ಸೋನು ನಿಗಮ್‌, ನಿರ್ದೇಶಕ ಚಂದ್ರಪ್ರಕಾಶ್‌ ದ್ವಿವೇದಿ, ಹಿರಿಯ ನಟಿ ಸಾಹುಕಾರ್‌ ಜಾನಕಿ), ಕ್ರೀಡಾ ಕ್ಷೇತ್ರದ 9 ಮಂದಿ, ಸಮಾಜ ಸೇವೆಯಲ್ಲಿ ತೊಡಗಿರುವ 12 ಮಂದಿ ಸೇರಿದ್ದಾರೆ. 34 ಮಹಿಳೆಯರ ಮುಡಿಗೂ ಪ್ರಶಸ್ತಿ ಸಂದಿದೆ.

10 ಎನ್‌ಆರ್‌ಐಗಳಿಗೆ ಗೌರವ
ವಿದೇಶದಲ್ಲಿ ನೆಲೆನಿಂತು ಗಮನಾರ್ಹ ಸಾಧನೆಗೈದ ಭಾರತ ಮೂಲದ 10 ವ್ಯಕ್ತಿಗಳು ಅಥವಾ ಅನಿವಾಸಿ ಭಾರತೀಯರಿಗೆ ಪದ್ಮ ಪ್ರಶಸ್ತಿ ಗೌರವ ನೀಡಲಾಗಿದೆ. ಇವರಲ್ಲಿ ಭಾರತೀಯ ಖಾದ್ಯಗಳ ಪ್ರವೀಣೆ ಹಾಗೂ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಭಾರತೀಯ ಅಡುಗೆಗಳ ಘಮಲನ್ನು ಪಸರಿಸಿದ ಕೀರ್ತಿಗೆ ಪಾತ್ರರಾಗಿರುವ ಕು. ಮಧುರ್‌ ಜಾಫ್ರಿ (ಅಮೆರಿಕ), ಮೈಕ್ರೋಸಾಫ್ಟ್ ಸಂಸ್ಥೆಯ ಮುಖ್ಯಸ್ಥ ಸತ್ಯಾ ನಾದೆಳ್ಲ (ಅಮೆರಿಕ), ಆ್ಯಪಲ್‌ ಕಂಪೆನಿಯ ಮುಖ್ಯಸ್ಥ ಸುಂದರ್‌ ಪಿಚೆò (ಅಮೆರಿಕ) ಅವರಿಗೆ ಪದ್ಮ ಭೂಷಣ ಗೌರವ ನೀಡಲಾಗಿದೆ. ಈ ವಿಭಾಗದಲ್ಲಿ ಮೆಕ್ಸಿಕೋದಲ್ಲಿ ಹಿರಿಯ ವಿಜ್ಞಾನಿಯಾಗಿದ್ದ, 2014ರಲ್ಲಿ ವರ್ಲ್ಡ್ ಫ‌ುಡ್‌ ಪ್ರಶಸ್ತಿ ವಿಜೇತರಾಗಿದ್ದ ಸಂಜಯ ರಾಜಾರಾಮ್‌ ಅವರಿಗೆ ಮರಣೋತ್ತರವಾಗಿ ಪದ್ಮಭೂಷಣ ನೀಡಲಾಗಿದೆ.  ಪೋಲೆಂಡ್‌ನ‌ ಹಿರಿಯ ಸಾಹಿತಿ ಮರಿಯಾ ಕ್ರಿಸ್ಟೊಫ‌ರ್‌ ಬೈರ್‌ಸ್ಕಿ, ಲಂಡನ್‌ನಲ್ಲಿ ಶಸ್ತ್ರಚಿಕಿತ್ಸಾ ತಜ್ಞರಾಗಿರುವ ಪ್ರೋಕರ್‌ ದಾಸ್‌ಗುಪ್ತಾ, ಜಪಾನ್‌ನಲ್ಲಿ ದೈತ್ಯ ಹೊಟೇಲ್‌ ಉದ್ಯಮಿಯಾಗಿರುವ  ಹಿರಾ, ಐರ್ಲೆಂಡ್‌ನ‌ಲ್ಲಿ ಹಿರಿಯ ಸಾಹಿತಿಯಾಗಿ ಗುರುತಿಸಿಕೊಂಡಿರುವ  ಕೊರ್ಟೆನ್‌ಹೊರ್ಸ್‌, ಥಾಯ್ಲೆಂಡ್‌ನ‌ಲ್ಲಿ ಸಾಹಿತಿಯಾಗಿ ಎನಿಸಿರುವ ಚಿರಾಪಟ್‌ ಪ್ರಪಂಡವಿದ್ಯಾ, ರಷ್ಯಾದಲ್ಲಿ ಪ್ರಮುಖ ಸಾಹಿತಿಯಾಗಿ ಪರಿಚಿತರಾಗಿರುವ ಟಟಿಯಾನಾ ಲ್ವೊವಾ° ಶೌಮ್ಯನ್‌ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.

ಕನ್ನಡದ ಹಿರಿಯ ನಟಿ ಜಾನಕಿಗೆ ಪದ್ಮಶ್ರೀ
ಕನ್ನಡದ ಹಿರಿಯ ನಟಿ ಸಾಹುಕಾರ್‌ ಜಾನಕಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ. 1950ರಲ್ಲಿ ತೆಲುಗುವಿನ ಸಾಹುಕಾರ್‌ ಸಿನೆಮಾ ಮೂಲಕ ಚಿತ್ರರಂಗಕ್ಕೆ ಕಾಲಿರಿಸಿದ್ದ ಅವರು, ಡಾ| ರಾಜ್‌ಕುಮಾರ್‌, ಟಿ.ಆರ್‌.ನರಸಿಂಹರಾಜು ಸೇರಿ ಅನೇಕರೊಂದಿಗೆ ಬಣ್ಣ ಹಚ್ಚಿದ್ದರು. ದೇವಕನ್ನಿಕಾ, ಸದಾರಮೆ, ರತ್ನಗಿರಿ ರಹಸ್ಯ, 2014ರಲ್ಲಿ ಬಿಡುಗಡೆಯಾದ ಪುಂಗಿದಾಸ ಸೇರಿ 25ಕ್ಕೂ ಅಧಿಕ ಕನ್ನಡ ಸಿನೆಮಾಗಳಲ್ಲಿ ನಟಿಸಿದ್ದಾರೆ.

ಸಾಮಾಜಿಕ ಸೇವೆಗೆ ಸಂದ ಗೌರವ
ರಾಜಕೀಯ ರಂಗದಲ್ಲಿನ ಗುರುತರ ಸೇವೆಗಾಗಿ ಆರು ಹಿರಿಯ ರಾಜಕಾರಣಿಗಳನ್ನು  ಪದ್ಮಪ್ರಶಸ್ತಿಗಳಿಗೆ ಆರಿಸಲಾಗಿದೆ. ಪಕ್ಷಭೇದ ಮರೆತು ಅವರವರ ಸಾಧನೆಗೆ ಅನುಗುಣವಾಗಿ ಪ್ರಶಸ್ತಿ ನೀಡಿರುವುದು ವಿಶೇಷ. ಕಳೆದ ವರ್ಷ ನಿಧನ ಹೊಂದಿದ ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್‌ ಸಿಂಗ್‌ರಿಗೆ ಮರಣೋತ್ತರವಾಗಿ ಪದ್ಮವಿಭೂಷಣ  ನೀಡಲಾಗಿದೆ. ಸಿಪಿಎಂ ಹಿರಿಯ ನಾಯಕ, ಪ.ಬಂಗಾಲದ ಮಾಜಿ ಸಿಎಂ ಬುದ್ಧದೇಬ್‌ ಭಟ್ಟಾಚಾರ್ಯ, ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌, ಗುಜರಾತ್‌ ರಾಜಕಾರಣಿ ಮಲ್ಜಿ ಭಾಯ್‌ ದೇಸಾಯ್‌ಗೆ ಪದ್ಮಭೂಷಣ ಸಂದಿದೆ. ಈ ಪೈಕಿ ಭಟ್ಟಾಚಾರ್ಯ ಅವರು ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.

Advertisement

13 ಸಾಧಕರಿಗೆ ಮರಣೋತ್ತರ ಗೌರವ
ಪದ್ಮವಿಭೂಷಣ: ಇತ್ತೀಚೆಗೆ ಇಹಲೋಕ ತ್ಯಜಿಸಿದ ನಾನಾ ಕ್ಷೇತ್ರಗಳ ಸಾಧಕರಿಗೆ ಈ ಬಾರಿ, ಮರಣೋತ್ತರವಾಗಿ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಇತ್ತೀ ಚೆಗೆ, ತಮಿಳುನಾಡಿನಲ್ಲಿ ಸಂಭವಿಸಿದ ಕಾಪ್ಟರ್‌ ದುರಂತ‌ದಲ್ಲಿ ಹುತಾತ್ಮರಾದ ಭಾರತೀಯ ಪಡೆಗಳ ಮುಖ್ಯಸ್ಥರಾದ ಜ| ಬಿಪಿನ್‌ ರಾವತ್‌, ಉತ್ತರ ಪ್ರದೇಶದ ಹಿರಿಯ ಸಾಹಿತಿ ರಾಧೇಯ್‌ಶ್ಯಾಮ್‌ ಖೇಮ್ಕಾ, ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್‌ ಸಿಂಗ್‌ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ.

ಪದ್ಮಭೂಷಣ: ಪಂಜಾಬ್‌ನ ಜಾನಪದ ಹಾಡುಗಾರ್ತಿ ಗುರ್ಮೀತ್‌ ಬಾವಾ, ಮೆಕ್ಸಿಕೋದಲ್ಲಿ ವಿಜ್ಞಾನಿಯಾಗಿದ್ದ ಸಂಜಯ ರಾಜಾರಾಮ್‌ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪದ್ಮಶ್ರೀ: ಕಳೆದ ವರ್ಷ ಕೊರೊನಾದಿಂದಾಗಿ ಇಹಲೋಕ ತ್ಯಜಿಸಿದ ದಲಿತ ಸಾಹಿತಿ ಡಾ| ಸಿದ್ದಲಿಂಗಯ್ಯ, ಗುಜರಾತ್‌ನ ಕವಿ ಖಲೀಲ್‌ ಧಾಂತೇಜ್ವಿ, ಝಾರ್ಖಂಡ್‌ನ‌ ಬುಡಕಟ್ಟು ವಿಶ್ವವಿದ್ಯಾನಿಲಯದ ಬುಡಕಟ್ಟು ಪ್ರಾದೇಶಿಕ ಭಾಷಾ ವಿಭಾಗದ ಮಾಜಿ ಮುಖ್ಯಸ್ಥರಾಗಿದ್ದ ಪ್ರೊ| ಗಿರಿಧಾರಿ ರಾಮ್‌ ಘೊಂಜು, ಬಿಹಾರದ ಆರ್ಥಿಕ ತಜ್ಞ ಶೈಬಲ್‌ ಗುಪ್ತಾ, ಆಂಧ್ರದ ಸಂಗೀತಗಾರ ಗೋಸಾವೀಡು ಶೇಕ್‌ ಹಸನ್‌, ಮಧ್ಯಪ್ರದೇಶದ ವೈದ್ಯ ಡಾ| ನರೇಂದ್ರ ಪ್ರಸಾದ್‌ ಮಿಶ್ರಾ, ದಿಲ್ಲಿಯಲ್ಲಿ ಕಳೆದ ವರ್ಷ ಕೊರೊನಾದಿಂದ ಮೃತರಾದ ಐಎಎಸ್‌ ಅಧಿಕಾರಿ ಗುರುಪ್ರಸಾದ್‌ ಮೊಹಾಪಾತ್ರ ಹಾಗೂ ಮಹಾರಾಷ್ಟ್ರದ ವೈದ್ಯ ಡಾ| ಬಾಲಾಜಿ ತಂಬೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

6 ಯೋಧರಿಗೆ ಶೌರ್ಯ ಚಕ್ರ
ಮೂರನೇ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾಗಿರುವ ಶೌರ್ಯ ಚಕ್ರಕ್ಕೆ 6 ಮಂದಿ ಯೋಧರು ಭಾಜನರಾಗಿದ್ದಾರೆ. ಈ ಪೈಕಿ ಐವರಿಗೆ ಮರಣೋತ್ತರವಾಗಿ ಈ ಗೌರವ ಸಂದಿದೆ. ಇನ್ನು

ಲೆ| ಜ| ಮನೋಜ್‌ ಪಾಂಡೆ, ಲೆ| ಜ| ವೈಕೆ ಜೋಷಿ, ಲೆ| ಜ| ಕೆಜೆಎಸ್‌ ಧಿಲ್ಲೋನ್‌, ಲೆ| ಜ|ಮಾಧುರಿ ಕಾಣಿತ್ಕರ್‌ ಅವರಿಗೆ ಪರಮ ವಿಶಿಷ್ಟ ಸೇವಾ ಪದಕ ಘೋಷಿಸಲಾಗಿದೆ.

939 ಮಂದಿಗೆ ಪೊಲೀಸ್‌ ಪದಕ
ಗಣರಾಜ್ಯೋತ್ಸವದ ಮುನ್ನಾದಿನವಾದ ಮಂಗಳವಾರ ಕೇಂದ್ರ ಹಾಗೂ ರಾಜ್ಯ ಪೊಲೀಸ್‌ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಒಟ್ಟು 939 ಮಂದಿಗೆ ಸೇವಾ ಪದಕಗಳನ್ನು ಘೋಷಿಸಲಾಗಿದೆ. ಈ ಪೈಕಿ 189 ಶೌರ್ಯ ಪದಕಗಳೂ ಸೇರಿವೆ. 189 ಶೌರ್ಯ ಪದಕಗಳ ಪೈಕಿ, ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ ಉಗ್ರರ ವಿರುದ್ಧ ಶೌರ್ಯ ಮೆರೆದ 134 ಮಂದಿ ಹಾಗೂ ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ದಿಟ್ಟತನ ತೋರಿದ 47 ಮಂದಿ, ಈಶಾನ್ಯ ಭಾಗದ ಒಬ್ಬರಿಗೆ ಪದಕದ ಗೌರವ ಸಂದಿದೆ. ಇನ್ನು, 88 ಸಿಬಂದಿಗೆ ವಿಶಿಷ್ಟ ಸೇವಾ ಪದಕ ಹಾಗೂ 662 ಮಂದಿಗೆ ಪ್ರಶಂಸನೀಯ ಸೇವಾ ಪದಕ ಘೋಷಿಸಲಾಗಿದೆ.

18 ಐಟಿಬಿಪಿ ಯೋಧರಿಗೆ ಗೌರವ
ಭಾರತ-ಚೀನ ಗಡಿಯನ್ನು ಕಾಯುವ ಇಂಡೋ-ಟಿಬೆಟನ್‌ ಗಡಿ ಪೊಲೀಸ್‌ (ಐಟಿಬಿಪಿ) ಪಡೆಯ 18 ಯೋಧರಿಗೆ ವಿವಿಧ ಪೊಲೀಸ್‌ ಸೇವಾ ಪದಕಗಳನ್ನು ಘೋಷಿಸಲಾಗಿದೆ. ಮೂವರಿಗೆ ಪೊಲೀಸ್‌ ಶೌರ್ಯ ಪದಕ, ಮೂವರಿಗೆ ವಿಶಿಷ್ಟ ಸೇವೆಗಾಗಿ ನೀಡುವ ರಾಷ್ಟ್ರಪತಿಗಳ ಪೊಲೀಸ್‌ ಪದಕ ಮತ್ತು 12 ಮಂದಿಗೆ ಪ್ರಶಂಸನೀಯ ಸೇವೆಗಾಗಿ ನೀಡುವ ಪೊಲೀಸ್‌ ಪದಕವನ್ನು ಘೋಷಿಸಲಾಗಿದೆ.

ಜೀವನ್‌ರಕ್ಷಾ ಮತ್ತು ತಟರಕ್ಷಕ ಪದಕ
2021ರ ಜೀವನ್‌ ರಕ್ಷಾ ಪದಕ ಸರಣಿಯ ಪ್ರಶಸ್ತಿಗಳು 51 ಮಂದಿಗೆ ದೊರೆತಿವೆ. ಈ ಪೈಕಿ 6 ಮಂದಿಗೆ ಸರ್ವೋತ್ತಮ ಜೀವನ್‌ ರಕ್ಷಾ ಪದಕ, 16 ಮಂದಿಗೆ ಉತ್ತಮ ಜೀವನ ರಕ್ಷಾ ಪದಕ ಮತ್ತು 29 ಮಂದಿಗೆ ಜೀವನ್‌ ರಕ್ಷಾ ಪದಕವನ್ನು ಘೋಷಿಸಲಾಗಿದೆ. ಪ್ರಶಸ್ತಿಗೆ ಭಾಜನರಾದ ಐವರಿಗೆ ಮರಣೋತ್ತರವಾಗಿ ಈ ಗೌರವ ನೀಡಲಾಗಿದೆ. ವಿಶೇಷವೆಂದರೆ, ಜೀವನ್‌ರಕ್ಷಾ ಪದಕ ಸರಣಿಯಲ್ಲಿ ಪ್ರಶಸ್ತಿ ಪಡೆದ 51ರ ಪೈಕಿ 11 ಮಂದಿ ಕೇರಳಿಗರು. ಇದೇ ವೇಳೆ, ಕಮಾಂಡೆಂಟ್‌ ಸುಮಿತ್‌ ಧಿಮನ್‌, ಡೆಪ್ಯುಟಿ ಕಮಾಂಡೆಂಟ್‌ ವಿಕಾಸ್‌ ನಾರಂಗ್‌, ಅರ್ಧಿ ಪ್ರಗತಿ ಕುಮಾರ್‌ ಸೇರಿದಂತೆ ಭಾರತೀಯ ಕರಾವಳಿ ರಕ್ಷಕ ಪಡೆಯ ಅಧಿಕಾರಿಗಳಿಗೆ “ತಟರಕ್ಷಕ ಶೌರ್ಯ ಪದಕ’ ದೊರೆತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next