ಗದಗ: ಸೂಕ್ತ ಪೀಠೊಪಕರಣಗಳಿಲ್ಲದೇ ಕಟ್ಟೆ ಮೇಲೆ ಕುಳಿತು ಓದು ಜನ. ಗ್ರಂಥಾಲಯದ ಕಟ್ಟಡ ಬಿಟ್ಟುಕೊಡುವಂತೆ ಗ್ರಾಮ ಲೆಕ್ಕಾಧಿಕಾರಿ ಬೇಡಿಕೆ. ಸ್ವಂತ ಕಟ್ಟಡ ಕಲ್ಪಿಸಬೇಕೆಂಬ ದಶಕದ ಬೇಡಿಕೆಗೆ ಇನ್ನೂ ಸಿಗದ ಸ್ಪಂದನೆ…
ಇದು ತಾಲೂಕಿನ ಬಳಗಾನೂರು ಗ್ರಾಮದಲ್ಲಿರುವ ಸಾರ್ವಜನಿಕ ಗ್ರಂಥಾಲಯದ ಸ್ಥಿತಿ. ಬಳಗಾನೂರು ಚನ್ನವೀರ ಶರಣರ ಮಠದಿಂದಾಗಿ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ಲೀಲಾಪುರುಷ, ಭಕ್ತರಿಗೆ ದಾರಿ ತೋರಿದ ಶರಣು, ನಡೆದಾಡುವ ದೇವರು ಎಂದೇ ಖ್ಯಾತಿ ಹೊಂದಿದ್ದ ಚಿಕೇನಕೊಪ್ಪದ ಚನ್ನವೀರ ಶರಣರ ನಡೆದಾಡಿದ ಪುಣ್ಯ ಭೂಮಿ ಇದು. ಮಠದಿಂದ ನಡೆಯುವ ಹಲವು ಶಿಕ್ಷಣ ಸಂಸ್ಥೆಗಳ ಮೂಲಕ ಈ ವಿದ್ಯಾರ್ಥಿಗಳಲ್ಲಿ ಜ್ಞಾನದ ಜ್ಯೋತಿ ಬೆಳಗಿಸುತ್ತಿದೆ. ಆದರೆ, ಸರಕಾರ ಹಾಗೂ ಜನಪ್ರತಿನಿ ಧಿಗಳ ನಿರಾಸಕ್ತಿಯಿಂದಾಗಿ ಇದೇ ಪರಿಸರದಲ್ಲಿರುವ ಸಾರ್ವಜನಿಕ ಗ್ರಂಥಾಲಯ ಅಗತ್ಯ ಸೌಲಭ್ಯ ಹಾಗೂ ಸ್ವಂತ ಕಟ್ಟಡ ಇಲ್ಲದೇ ಸೊರಗುತ್ತಿದೆ.
2003ರಲ್ಲಿ ಆರಂಭಗೊಂಡಿರುವ ಈ ಗ್ರಂಥಾಲಯಕ್ಕೆ ಬರೋಬ್ಬರಿ ಒಂದೂವರೆ ದಶಕ ಕಳೆದರೂ, ಸ್ವಂತ ಸೂರಿನ ಭಾಗ್ಯ ಒದಗಿಬಂದಿಲ್ಲ. ಗ್ರಾಪಂ ಹಳೇ ಕಟ್ಟಡದಲ್ಲಿ ತಲೆ ಎತ್ತಿರುವ ಗ್ರಂಥಾಲಯಕ್ಕೆ ಇದೀಗ ಎತ್ತಂಗಡಿಯ ಭೀತಿ ಕಾಡುತ್ತಿದೆ. ಕಟ್ಟಡ ಬಿಟ್ಟುಕೊಡಲು ವಿಎ ದುಂಬಾಲು: ಸದ್ಯ ಗ್ರಾಮದ ಗ್ರಾಪಂ ಹಳೇ ಕಟ್ಟಡದಲ್ಲಿ ಗ್ರಂಥಾಲಯ ಕಾರ್ಯನಿರ್ವಹಿಸುತ್ತಿದೆ. ಗ್ರಂಥಾಲಯ ಸ್ಥಾಪನೆಗಾಗಿ ತಾಪಂ ಅನುದಾನದಡಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಗ್ರಾಪಂ ಹಳೇ ಕಟ್ಟಡ ನವೀಕರಣಗೊಳಿಸಿ ಗ್ರಂಥಾಲಯ ಸ್ಥಾಪಿಸಲಾಗಿದೆ. ಕಟ್ಟಡದ ಸಭಾಂಗಣ ಹಾಗೂ ಒಂದು ಕೊಠಡಿಯನ್ನು ಗ್ರಂಥಾಲಯಕ್ಕೆ ಬಿಟ್ಟುಕೊಟ್ಟಿದ್ದರೆ, ಮತ್ತೂಂದು ಕೊಠಡಿ ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಇತ್ತೀಚೆಗೆ ತಮ್ಮ ಕಚೇರಿಗೆ ಸ್ಥಳಾವಕಾಶ ಸಾಲುತ್ತಿಲ್ಲ. ಗ್ರಂಥಾಲಯ ತೆರವುಗೊಳಿಸಿ, ಇಡೀ ಕಟ್ಟಡವನ್ನು ತಮ್ಮ ಸುರ್ಪದಿಗೆ ನೀಡಬೇಕು ಎಂದು ಗ್ರಾಮ ಲೆಕ್ಕಾ ಧಿಕಾರಿ ಹಾಗೂ ಸಿಬ್ಬಂದಿಗಳು ಮೇಲಧಿಕಾರಿಗಳು, ಜನ ಪ್ರತಿನಿಧಿಗಳಿಗೆ ಮನವಿ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
ಓದುಗರಿಗೆ ಆಸನಗಳ ಕೊರತೆ: ಒಂದೂವರೆ ದಶಕದ ಹಿಂದೆ ಆರಂಭಗೊಂಡಿರುವ ಗ್ರಂಥಾಲಯದಲ್ಲಿ ಒಟ್ಟು 125 ಸದಸ್ಯರಿದ್ದು, ಪ್ರತಿನಿತ್ಯ ಸರಾಸರಿ 60ಕ್ಕಿಂತ ಹೆಚ್ಚಿನ ಓದುಗರು ಭೇಟಿ ನೀಡುತ್ತಾರೆ. ಅದರಲ್ಲೂ ಸಂಜೆ ಹೊತ್ತಲ್ಲಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಗ್ರಂಥಾಲಯದಲ್ಲಿ ಓದುಗರಿಗೆ 6 ಕುರ್ಚಿಗಳು ಹಾಗೂ ಮೇಜಿನ ಸೌಕರ್ಯವಿದೆ. ಇನ್ನುಳಿದವರಿಗೆ ಕುರ್ಚಿ ಸಿಗದೇ, ಕಟ್ಟೆ ಮೇಲೆ ಕುಳಿತು ಓದುವ ಅನಿವಾರ್ಯತೆ ಸೃಷ್ಟಿಸುತ್ತದೆ. ಗ್ರಂಥಾಲಯಕ್ಕೆ ಸ್ವಂತ ಕಟ್ಟಡ ಕಲ್ಪಿಸಬೇಕು ಎಂದು ವರ್ಷಗಳಿಂದ ಅರ್ಜಿ ಸಲ್ಲಿಸಿದರೂ, ಸ್ವಂತ ನಿವೇಶನ ಹಾಗೂ ಅನುದಾನದ ಕೊರತೆಯಿಂದ ಅದು ಸಾಕಾರವಾಗುತ್ತಿಲ್ಲ ಎನ್ನಲಾಗಿದೆ. ಗ್ರಾಮದಲ್ಲಿ ಗ್ರಂಥಾಲಯಕ್ಕೆ ಸ್ವಂತ ಕಟ್ಟಡವಿಲ್ಲ. ಮತ್ತೂಂದೆಡೆ ಹಳೇ ಕಟ್ಟಡವನ್ನು ಗ್ರಾಪಂ ಮರಳಿ ಪಡೆದರೆ, ಗ್ರಂಥಾಲಯ ಬಾಗಿಲು ಮುಚ್ಚುವ ಸ್ಥಿತಿ ಎದುರಾಗಲಿದೆ. ಅದಕ್ಕೂ ಮುನ್ನವೇ ಸ್ಥಳೀಯ ಜನಪ್ರತಿನಿಧಿ ಗಳು ಹಾಗೂ ಅಧಿ ಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
ಗ್ರಂಥಾಲಯಕ್ಕೆ ಸ್ವಂತ ಕಟ್ಟಡದ್ದೇ ಚಿಂತೆ. ಹಲವು ವರ್ಷಗಳಿಂದ ಗ್ರಾಪಂ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ರೂ, ಇತ್ತೀಚೆಗೆ ತೆರುವುಗೊಳಿಸುವ ಆತಂಕ ಶುರುವಾಗಿದೆ. ಅಲ್ಲದೇ, ಓದುಗರ ಹಿತದೃಷ್ಟಿಯಿಂದಲೂ ಪ್ರತ್ಯೇಕ ಕಟ್ಟಡ ಅಗತ್ಯ. ಈ ಕುರಿತು ಹಲವು ಬಾರಿ ಸ್ಥಳೀಯ ಗ್ರಾಪಂಗೆ ಅರ್ಜಿ ಸಲ್ಲಿಸಿದ್ದೇವೆ.
–ನೀಲಪ್ಪ ಗಾವರವಾಡ, ಗ್ರಂಥಾಲಯ ಸಿಬ್ಬಂದಿ
-ವೀರೇಂದ್ರ ನಾಗಲದಿನ್ನಿ