Advertisement

ಅಕ್ಷರವಂಚಿತರ ಬದುಕಲ್ಲಿ ಬೆಳಕಾಗುವ ಉದ್ದೇಶದಿಂದ ಆರಂಭ

06:18 PM Nov 08, 2019 | mahesh |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1918 ಶಾಲೆ ಆರಂಭ
ವಯಸ್ಕರಿಗೂ ಶಿಕ್ಷಣ ನೀಡುತ್ತಿದ್ದ ಶಾಲೆಗೆ 101ರ ಹರೆಯ

ಕನಕಮಜಲು: ಸ್ವಾತಂತ್ರ್ಯ ಪೂರ್ವದಲ್ಲಿ ಅಕ್ಷರವಂಚಿತರ ಬದುಕಲ್ಲಿ ಬೆಳಕಾಗುವ ಉದ್ದೇಶವಿಟ್ಟುಕೊಂಡು ಪಠೇಲರು ಆರಂಭಿಸಿದ ಶಾಲೆ. ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಅಕ್ಷರ ಬೀಜ ಬಿತ್ತಿದ ಹೆಗ್ಗಳಿಕೆ ಈ ಶಾಲೆಯದ್ದು. ನರಿಯೂರು ರಾಮಣ್ಣ ಗೌಡರ ಶಾಲೆ ಎಂದೆ ಜನಜನಿತವಾದ ಈ ಶಾಲೆಗೆ ಈಗ 101ರ ಹರೆಯ.

ಸುಳ್ಯ ತಾಲೂಕಿನ ಕನಮಜಲು ಗ್ರಾಮದ ಮುಖ್ಯ ಪೇಟೆಯಲ್ಲಿರುವ ಶ್ರೀ ನರಿಯೂರು ರಾಮಣ್ಣ ಗೌಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗ್ರಾಮದ ಮೊದಲ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆ.

ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕ ಪ್ರಸ್ತುತ ಶಾಲೆಗೆ ಸಂಬಂಧಿಸಿದ 5 ಕಟ್ಟಡಗಳಿವೆ. 4 ಕಟ್ಟಡಗಳಲ್ಲಿ ತರಗತಿಗಳು ನಡೆಯುತ್ತಿವೆ. ಶತಮಾನೋತ್ಸವದ ಸವಿನೆನಪಿಗಾಗಿ ಸಭಾಭವನ ನಿರ್ಮಿಸಲಾಗಿದೆ. 1ರಿಂದ 7ನೇ ವರೆಗಿನ ವಿದ್ಯಾರ್ಥಿಗಳು ಇಲಿ ಕಲಿಯುತ್ತಿದ್ದಾರೆ. ಸುಮಾರು 2.33 ಎಕ್ರೆಯಷ್ಟು ಜಾಗ ಹೊಂದಿರುವ ಈ ಶಾಲೆ ಆರಂಭವಾಗಿದ್ದು 1918ರಲ್ಲಿ. ಮಂಡೆಕೋಲು ಗ್ರಾಮದ ಶಿಕ್ಷಕರಾಗಿದ್ದ ದೇರಪ್ಪ ಮಾಸ್ಟರ್‌ ಕುಧ್ಕುಳಿ ಅವರ ಒತ್ತಾಸೆಯಲ್ಲಿ ಕನಕಮಜಲು ಗ್ರಾಮವು ಶಿಕ್ಷಣವಂಚಿತ

Advertisement

ಪ್ರದೇಶವೆಂದು ಗುರುತಿಸಿಕೊಂಡು ಅಂದಿನ ಪಠೇಲ್‌ ಮನೆತನದ ರಾಮಣ್ಣ ಗೌಡರಲ್ಲಿ ಹೇಳಿಕೊಂಡಾಗ ಅಕ್ಷರ ಪಸರಿಸುವ ಕನಸು ಹುಟ್ಟಿಕೊಂಡಿತು. ರಾಮಣ್ಣ ಗೌಡರು ತಮ್ಮ ಸ್ವಂತ ಸ್ಥಳವನ್ನು ಶಾಲೆಗೆ ಬಿಟ್ಟುಕೊಟ್ಟು ಗ್ರಾಮಸ್ಥರ ಶ್ರಮದಾನದ ಮೂಲಕ ಶಾಲಾ ಕಟ್ಟಡ ಕಟ್ಟಿಸಿಯೇ ಬಿಟ್ಟರು.ಕಾಸರಗೋಡು

ತಾಲೂಕಿಗೆ ಒಳಪಟ್ಟಿತ್ತು
ಮೊದಲಿಗೆ ಮುಳಿ ಹುಲ್ಲಿನಿಂದ ಕಟ್ಟಡ ನಿರ್ಮಿಸಲಾಗಿತ್ತು. ತಾಲೂಕು ಬೋರ್ಡ್‌ ಶಾಲೆಯಾಗಿ ಸ್ಥಾಪಿತವಾದ ಶಾಲೆಯಲ್ಲಿ 1 ಮತ್ತು 2ನೇ ತರಗತಿ ಆರಂಭಿಸಲಾಯಿತು. ಸ್ವಾತಂತ್ರ್ಯ ಪೂರ್ವದ ಆ ಕಾಲದಲ್ಲಿ ಕನಕಮಜಲು ಗ್ರಾಮವು ಕಾಸರಗೋಡು ತಾಲೂಕಿಗೆ ಒಳಪಟ್ಟಿತ್ತು. ಅಂದಿನ ಮೈಸೂರು ರಾಜ್ಯದ ಗಡಿ ಪ್ರದೇಶವಾದ ಈ ಗ್ರಾಮವು ಜಾಲೂರು ಭಾಗವನ್ನೂ ಒಳಗೊಂಡಿತ್ತು. 1934ರಲ್ಲಿ ಜಿಲ್ಲಾ ಬೋರ್ಡ್‌ ಶಾಲೆಯಾಗಿ ಪರಿವರ್ತನೆಗೊಂಡು ಕಟ್ಟಡಕ್ಕೆ ಸರಕಾರದಿಂದ ಮಾಸಿಕ 3 ರೂ. ಬಾಡಿಗೆಯಲ್ಲಿ ಶಾಲೆ ನಡೆಯುತ್ತಿತ್ತು. ರಾಮಣ್ಣ ಗೌಡರ ಮೊಮ್ಮಗ ಕೇಶವಾನಂದ ನರಿಯೂರು ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷರಾಗಿ 11 ವರ್ಷ ಸೇವೆ ಸಲ್ಲಿಸಿದ್ದಾರೆ.

ಏಕೋಪಾಧ್ಯಾಯ ಶಾಲೆ
ನರಿಯೂರು ರಾಮಣ್ಣ ಗೌಡ ಹಿರಿಯ ಪ್ರಾಥಮಿಕ ಶಾಲೆ ಆರಂಭವಾದ ಕಾಲದಲ್ಲಿ ಸುತ್ತಮುತ್ತಲಿನ ಊರುಗಳಿಗೆ ಈ ಶಾಲೆಯೇ ಆಧಾರವಾಗಿತ್ತು. ದೂರದ ದೇಲಂಪಾಡಿ, ಜಾಲೂರು, ಪೆರ್ಲಂಪಾಡಿ, ಪೆರ್ನಾಜೆ, ಪಂಜಿಕಲ್ಲು, ದೇವರಗುಂಡ ಭಾಗಗಳಿಂದ ವಿದ್ಯಾರ್ಥಿಗಳು ಕಲಿಯಲು ಈ ಶಾಲೆಗೆ ಬರುತ್ತಿದ್ದರು. ಈಚಪ್ಪ ನಾಯಕ್‌ ಶಾಲೆಯ ಏಕ ಮುಖ್ಯ ಗುರು. ಕಡತಗಳಲ್ಲಿ ಆರಂಭದ ವಿದ್ಯಾರ್ಥಿಗಳ ಸಂಖ್ಯೆ ಬಗ್ಗೆ ನಿಖರ ಮಾಹಿತಿಯಿಲ್ಲ. ರಾತ್ರಿಯಲ್ಲಿ ವಯಸ್ಕರಿಗೂ ಇಲ್ಲಿ ಶಿಕ್ಷಣ ನೀಡಲಾಗುತ್ತಿತ್ತು.

1964ರಲ್ಲಿ ಜಿಲ್ಲಾ ಬೋರ್ಡ್‌ಗೆ ಹಸ್ತಾಂತರ
ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಾಗ ಸ್ಥಳಾವಕಾಶದ ಕೊರತೆ ಉಂಟಾಯಿತು. ಸಣ್ಣ ಮುಳಿಯ ಕಟ್ಟಡದಲ್ಲಿದ್ದ ಶಾಲೆಗೆ ರಾಮಣ್ಣ ಗೌಡರು ತನ್ನ ಖಾಸಗಿ ಒಡೆತನದ ಇನ್ನೊಂದು ಜಾಗವನ್ನು ಬಿಟ್ಟುಕೊಟ್ಟು ಊರಿನವರ ಸಹಕಾರದೊಂದಿಗೆ 1948ರಲ್ಲಿ ಹೊಸ ಕಟ್ಟಡ ನಿರ್ಮಿಸಲಾಯಿತು. 1960ರಲ್ಲಿ 6ನೇ ತರಗತಿ ಹಾಗೂ 1961ರಲ್ಲಿ 7ನೇ ತರಗತಿಗಳು ಪ್ರಾರಂಭವಾದವು. 1964ರಲ್ಲಿ ಸ್ಥಳದ ಒಡೆತನದ ಹಕ್ಕನ್ನು ಜಿಲ್ಲಾ ಶೈಕ್ಷಣಿಕ ಬೋರ್ಡಿಗೆ ಹಸ್ತಾಂತರಗೊಳಿಸಲಾಯಿತು.

ಅಡಿಕೆ ತೋಟದ ಮೆರುಗು
ಶಾಲಾ ವಠಾರದಲ್ಲಿ ಸುಮಾರು 1.50 ಲಕ್ಷ ರೂ. ವೆಚ್ಚದಲ್ಲಿ ಅಡಿಕೆ ತೋಟ ನಿರ್ಮಿಸಲಾಗಿದೆ. ಸಾರ್ವಜನಿಕರ ದೇಣಿಗೆಯಿಂದ ಹಣ ಸಂಗ್ರಹಿಸಿ 276 ಅಡಿಕೆ ಗಿಡಗಳನ್ನು ನೆಡಲಾಗಿದೆ. ಶಾಲಾ ಮಕ್ಕಳು, ಊರಿನವರು ಹಾಗೂ ಶತಮಾನೋತ್ಸವ ಸಮಿತಿ ಸಹಕಾರದಿಂದ ಸುಂದರ ಅಡಿಕೆ ತೋಟ ತಲೆಯೆತ್ತಿದೆ.

ಶತಮಾನೋತ್ಸವ ಸಂಭ್ರಮ
ನರಿಯೂರು ಶ್ರೀ ರಾಮಣ್ಣ ಗೌಡ ಹಿರಿಯ ಪ್ರಾಥಮಿಕ ಶಾಲೆಗೆ ಕಳೆದ ವರ್ಷ ಶತಮಾನೋತ್ಸವ ಸಂಭ್ರಮ. ಇದರ ಸವಿ ನೆನಪಿಗಾಗಿ ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ಸಭಾಭವನ ನಿರ್ಮಿಸಲಾಗಿದೆ.

ಮೂಲ ಸೌಕರ್ಯ
ಪ್ರಸ್ತುತ ಶಾಲೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ಇದು ಅಪಾಯಕಾರಿ. ತಡೆಗೋಡೆ ಮತ್ತು ಕೊಠಡಿಗಳ ನಿರ್ಮಾಣಕ್ಕೆ ಅನುದಾನದ ಆವಶ್ಯಕತೆಯಿದೆ. ಬಯಲು ರಂಗಮಂದಿರದ ಬೇಡಿಕೆಯನ್ನೂ ಶಿಕ್ಷಕ ವೃಂದ ಮುಂದಿಟ್ಟಿದೆ.

ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖ
ಇಲ್ಲಿ 2001ರಲ್ಲಿ 275 ಮಕ್ಕಳು ಇದ್ದರು. ಅನಂತರ ಇದರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಕನಕಮಜಲು ಗ್ರಾಮದಲ್ಲಿ ಈಗ ಎರಡು ಶಾಲೆಗಳಿವೆ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಗೇರು ಹಾಗೂ ನರಿಯೂರು ಶ್ರೀ ರಾಮಣ್ಣ ಗೌಡ ಹಿರಿಯ ಪ್ರಾಥಮಿಕ ಶಾಲೆ. ರಾಮಣ್ಣ ಗೌಡ ಶಾಲೆಯಲ್ಲಿ ಪ್ರಸ್ತುತ 2 ಅತಿಥಿ ಗುರುಗಳು ಹಾಗೂ 4 ದೀರ್ಘಾವಧಿ ಗುರುಗಳಿದ್ದಾರೆ. ಒಟ್ಟು 96 ಮಕ್ಕಳು ಶಾಲೆಯಲ್ಲಿದ್ದಾರೆ.

ರಾಷ್ಟ್ರಪ್ರಶಸ್ತಿ ಗರಿ
ಈ ಶಾಲೆಯ ಹಳೆ ವಿದ್ಯಾರ್ಥಿ ಲಕ್ಷ್ಮೀ ನಾರಾಯಣ ಕಜೆಗ¨ªೆ ಅವರಿಗೆ ಯುವಕ ಮಂಡಲದಲ್ಲಿ ತೊಡಗಿಸಿಕೊಂಡ ಕಾರ್ಯ ಚಟುವಟಿಕೆಗಳಿಗೆ 2011- 12ನೇ ಸಾಲಿನ ರಾಷ್ಟ್ರಪ್ರಶಸ್ತಿ ಲಭಿಸಿದೆ. ಪ್ರಸ್ತುತ ಅರೆಭಾಷೆ ಸಂಸ್ಕೃತಿ, ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಾಗಿದ್ದಾರೆ.

ಶಾಲೆಯಲ್ಲಿ ಕಲಿತ ಸಾಧಕರು
ಈ ಶಾಲೆಯಲ್ಲಿ ಕಲಿತ ಡಾ| ನಾಗರಾಜ್‌ ಭಟ್‌ ಅಮೆರಿಕದಲ್ಲಿ ಕ್ರಿಟಿಕಲ್‌ ಕಾರ್ಡಿಯೋಲೊಜಿಸ್ಟ್‌ ಆಗಿದ್ದಾರೆ. ಶೀತಲ್‌ ಡೈರಿ ರಿಚ್‌ ಕಂಪೆನಿಯ ಮಾಲಕ. ಉದ್ಯಮಿ ಗಿರಿಯಪ್ಪ ಗೌಡ ಕಾಪಿಲ, ಮಾಜಿ ತಹಶೀಲ್ದಾರ್‌ ರಾಮಚಂದ್ರ ಗೌಡ ಬುಡ್ಲೆ ಗುತ್ತು, ಬೆಂಗಳೂರಿನಲ್ಲಿ ತಹಶೀಲ್ದಾರ್‌ ಆಗಿರುವ ಕೆ.ಎಂ. ಮನೋರಮ ಮಳಿ, ಕೋರಮಂಡಲ್‌ ಸಿಮೆಂಟ್‌ ಜಿಲ್ಲಾ ವಿತರಕರಾಗಿರುವ ಮಧು ನರಿಯೂರು (ರಾಮಣ್ಣ ಗೌಡರ ಮೊಮ್ಮಗ), ಪಿ.ಎಚ್‌.ಡಿ. ಮಾಡಿ ಸದ್ಯ ಬೆಂಗಳೂರಿನಲ್ಲಿರುವ ಶ್ರೀಧರ ಭಟ್‌ ಕೆ. ಇವರೆಲ್ಲ ಈ ಶಾಲೆಯಲ್ಲಿ ಕಲಿತ ಪ್ರಮುಖರು. ಯೋಗಾಸನದಲ್ಲಿ ಇಲ್ಲಿನ ವಿದ್ಯಾರ್ಥಿ ಯೋಗೀಶ್‌ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು.

ಇಲ್ಲಿ ಹುಟ್ಟಿ ಬೆಳೆದ ವ್ಯಕ್ತಿಯು ಪ್ರಾಥಮಿಕ ಸಂಸ್ಕಾರ ಹಾಗೂ ಜ್ಞಾನ ಪಡೆಯಲು ಶಾಲೆಯೇ ಕಾರಣ. ಅನೇಕ ಮಹನೀಯರನ್ನು ಈ ಶಾಲೆ ಸಮಾಜಕ್ಕೆ ಕೊಟ್ಟಿದೆ. ಇದನ್ನು ನೆನೆಯುವುದು ಪ್ರತಿಯೊಬ್ಬ ವಿದ್ಯಾಭಿಮಾನಿಗಳ ಆದ್ಯ ಕರ್ತವ್ಯ.
-ಗೋಪಾಲಕೃಷ್ಣ ಕುತ್ಯಾಡಿ, ಎಸ್‌ಡಿಎಂಸಿ ಅಧ್ಯಕ್ಷ

2006ರಿಂದ ಇಲ್ಲಿಯವರೆಗೆ ಈ ಶಾಲೆಯಲ್ಲಿ ಮುಖ್ಯೋ ಪಾಧ್ಯಾಯಿ ನಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಶತಮಾನೋತ್ಸವ ಕಂಡ ಶಾಲೆಯಲ್ಲಿ ನನ್ನ ವೃತ್ತಿ ಬದುಕಿನ ದಶಮಾನೋತ್ಸವ ಕಂಡ ತೃಪ್ತಿಯಿದೆ.
-ಕಸ್ತೂರಿ, ಮುಖ್ಯೋಪಾಧ್ಯಾಯಿನಿ

  ಶಿವಪ್ರಸಾದ್‌ ಮಣಿಯೂರು

Advertisement

Udayavani is now on Telegram. Click here to join our channel and stay updated with the latest news.

Next