ಮುಳಬಾಗಿಲು: ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಸ್ನಾತಕೋತ್ತರ ಪದವಿ ಪ್ರಾರಂಭಿಸಲು ಈಗಾಗಲೇ ವಿಶ್ವವಿದ್ಯಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರವೇ ಅನುಮೋದನೆ ಪಡೆದುಕೊಳ್ಳಲಾಗುವುದೆಂದು ಶಾಸಕ ಎಚ್.ನಾಗೇಶ್ ತಿಳಿಸಿದರು.
ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ವಾರ್ಷಿಕ ಕ್ರೀಡಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿಗೆ ನ್ಯಾಕ್ ಟೀಮ್ ಕಾಲೇಜಿಗೆ ಬಂದಾಗ ಕಾಲೇಜಿನ ಎಲ್ಲಾ ಉಪನ್ಯಾಸಕರು, ಬೋಧಕೇತರರು ಪ್ರಗತಿಯನ್ನು ಪ್ರಚುರ ಪಡಿಸಿ, ತಂಡದಿಂದ ಉತ್ತಮ ಮನ್ನಣೆ ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ಕ್ರೀಡೆಯಲ್ಲಿ ಆಸಕ್ತಿ: ತಮಗೆ ಕ್ರೀಡೆಗಳ ಬಗ್ಗೆ ತುಂಬಾ ಆಸಕ್ತಿಯಿದ್ದು, ತಾವು ಶಾಸಕರಾಗುವ ಮುಂಚೆ ಒಂದೊಮ್ಮೆ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಆ ನಂತರ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದೆ. ವಿದ್ಯಾರ್ಥಿಗಳು ಶೈಕ್ಷಣಿಕ ಅಭ್ಯಾಸದ ನಡುವೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಜೀವನದಲ್ಲಿ ಉನ್ನತ ಮಟ್ಟಕ್ಕೇರಲು ಸಾಧ್ಯ ಎಂದು ತಿಳಿಸಿದರು.
ಕಾಲೇಜಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ಇರುವುದರಿಂದ ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಸ್ನಾತಕೋತ್ತರ ಪದವಿಯನ್ನು ಪ್ರಾರಂಭಿಸಲು ಈಗಾಗಲೇ ವಿಶ್ವ ವಿದ್ಯಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವೇ ಅನುಮೋದನೆ ಪಡೆದುಕೊಳ್ಳಲಾಗುವುದೆಂದು ಪುನರುಚ್ಚರಿಸಿದರು.
ಉದ್ಯೋಗಾವಕಾಶಗಳಿಗೆ ಹೆಚ್ಚು ಆದ್ಯತೆ ನೀಡುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಶೀಘ್ರದಲ್ಲಿಯೇ ಉದ್ಯೋಗ ಮೇಳ ನಡೆಸಲು ಕ್ರಮಕೈಗೊಳ್ಳಲಾಗಿದೆ. ಅಂತೆಯೇ ಕಾಲೇಜಿನ ಅಭಿವೃದ್ಧಿಗಾಗಿ ಅಗತ್ಯ ಸೌಕರ್ಯ ಕಲ್ಪಿಸಿಕೊಡುವುದರಿಂದ ವಿದ್ಯಾರ್ಥಿಗಳು ಉತ್ತಮವಾಗಿ ವ್ಯಾಸಂಗ ಮಾಡಿ ಕಾಲೇಜು ಮತ್ತು ಪೋಷಕರಿಗೆ ಕೀರ್ತಿ ತರಬೇಕೆಂದು ಹೇಳಿದರು.
ತಾಪಂ ಅಧ್ಯಕ್ಷ ಎ.ವಿ.ಶ್ರೀನಿವಾಸ್, ಪ್ರಾಂಶುಪಾಲ ಡಾ.ಕೆ.ವಿ.ಪುರುಷೋತ್ತಮ್, ದೈಹಿಕ ಶಿಕ್ಷಣ ಮುಖ್ಯಸ್ಥರಾದ ಪ್ರೊ.ಆರ್.ವೆಂಕಟೇಶಪ್ಪ, ಉಪನ್ಯಾಸಕರಾದ ಆಲಂಗೂರು ಮಂಜುನಾಥ್, ಬಿ.ಆರ್.ದೇವರಾಜ್, ಜಗನ್ನಾಥ್, ಡಾ.ಮಧುಸೂದನ್, ಡಾ.ಮುನಿರಾಜ್, ರಾಮ್‌ಪ್ರಸಾದ್, ಶ್ರೀನಿವಾಸಯ್ಯ, ಅಧೀಕ್ಷಕರಾದ ಸೂರ್ಯನಾರಾಯಣ್‌ರಾವ್, ರಾಮಕೃಷ್ಣೇಗೌಡ ಸೇರಿ ಬೋಧಕ, ಬೋಧಕೇತರರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.