Advertisement

ನಾಳೆ ದ್ವಿತೀಯ ಪಿಯು ಪರೀಕ್ಷೆ ಆರಂಭ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಿದ್ಧತೆ

02:05 AM Apr 21, 2022 | Team Udayavani |

ಮಂಗಳೂರು/ ಉಡುಪಿ: ದ್ವಿತೀಯ ಪಿಯುಸಿ ಪರೀಕ್ಷೆ ಎ. 22ರಿಂದ ಮೇ 18ರವರೆಗೆ ನಡೆಯಲಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸರ್ವಸಿದ್ಧತೆ ಮಾಡಿಕೊಳ್ಳಲಾಗಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 31,308 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯ 12 ಸರಕಾರಿ, 23 ಅನುದಾನಿತ ಮತ್ತು 16 ಅನುದಾನ ರಹಿತ ಕಾಲೇಜುಗಳ ಸಹಿತ ಒಟ್ಟು 51 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಅವುಗಳಿಗೆ 14 ಮಂದಿ ರೂಟ್‌ ಆಫೀಸರ್‌ಗಳನ್ನು ನೇಮಕ ಮಾಡಲಾಗಿದೆ.

15,652 ಬಾಲಕರು ಹಾಗೂ 15,656 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ. ಈ ಪೈಕಿ ಕಲಾ ವಿಭಾಗದಲ್ಲಿ 4,329, ವಾಣಿಜ್ಯ ವಿಭಾಗದಲ್ಲಿ 14,987 ಹಾಗೂ ವಿಜ್ಞಾನ ವಿಭಾಗದಲ್ಲಿ 11,992 ವಿದ್ಯಾರ್ಥಿಗಳಿದ್ದಾರೆ.

ಪರೀಕ್ಷಾ ಸಿದ್ಧತೆಗಳು ನಡೆಯುತ್ತಿವೆ. ಪರೀಕ್ಷಾ ಕೇಂದ್ರದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಈಗಾಗಲೇ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಗಿದೆ. ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ದ.ಕ. ಉಪನಿರ್ದೇಶಕ ಜಯಣ್ಣ “ಉದಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಉಡುಪಿ: 15,272 ವಿದ್ಯಾರ್ಥಿಗಳು
ಉಡುಪಿ ಜಿಲ್ಲೆಯ 28 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಜಿಲ್ಲಾಡಳಿತ ಎಲ್ಲ ಸಿದ್ಧತೆ ಮಾಡಿಕೊಂಡಿದೆ.

Advertisement

14,597 ಹೊಸ, 326 ಖಾಸಗಿ ಮತ್ತು 349 ಪುನರಾವರ್ತಿತ ಅಭ್ಯರ್ಥಿಗಳು ಸೇರಿ 15,272 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ ವಿಜ್ಞಾನ ವಿಭಾಗದ 2,203 ಹುಡುಗರು, 2,589 ಹುಡುಗಿಯರು, ವಾಣಿಜ್ಯ ವಿಭಾಗದ 3,935 ಹುಡುಗರು, 3,915 ಹುಡುಗಿಯರು, ಕಲಾ ವಿಭಾಗದ 796 ಹುಡುಗರು, 728 ಹುಡುಗಿಯರು ಪರೀಕ್ಷೆ ಬರೆಯಲಿದ್ದಾರೆ. ಒಟ್ಟಾರೆಯಾಗಿ ವಿಜ್ಞಾನ ವಿಭಾಗದ 4,792, ವಾಣಿಜ್ಯ ವಿಭಾಗದ 7,850 ಹಾಗೂ ಕಲಾ ವಿಭಾಗದ 1,524 ವಿದ್ಯಾರ್ಥಿಗಳು ಇದ್ದಾರೆ.

ಪರೀಕ್ಷಾ ಕೇಂದ್ರದಲ್ಲಿ ಕೊರೊನಾ ಸುರಕ್ಷತಾ ಮಾರ್ಗಸೂಚಿಗಳನ್ನು ಅಳವಡಿಸಲಾಗಿದೆ. ಪ್ರಶ್ನೆಪತ್ರಿಕೆ ವಿತರಿಸುವ ತಂಡ, ಪರೀಕ್ಷ ಕೇಂದ್ರಕ್ಕೆ ವೀಕ್ಷಕರ ನೇಮಕ, ಪ್ರಶ್ನೆಪತ್ರಿಕೆ ಪಾಲಕರ ತಂಡ, ಜಿಲ್ಲೆಯ ಮಾರ್ಗಾಧಿಕಾರಿಗಳ ತಂಡ, ಪರೀಕ್ಷೆಯ ಪರಿವೀಕ್ಷಣೆಗೆ ಸಂಚಾರಿ ಜಾಗೃತ ದಳದ ನಿಯೋಜನೆ ಮಾಡಲಾಗಿದೆ.

ಕೇಂದ್ರಗಳಲ್ಲಿ ಪ್ರಶ್ನೆಪತ್ರಿಕೆಯ ಬಂಡಲ್‌ ತೆರೆಯುವಾಗ ಹಾಗೂ ಉತ್ತರಪತ್ರಿಕೆ ಸ್ವೀಕರಿಸಿ, ಬಂಡಲ್‌ ಮಾಡುವಾಗ ಸಿಸಿ ಕೆಮರಾ ವೀಕ್ಷಣೆಯಲ್ಲಿ ನಿರ್ವಹಿಸುವಂತೆ ಜಿಲ್ಲಾಡಳಿತದಿಂದ ಸೂಚನೆ ನೀಡಲಾಗಿದೆ. ಪರೀಕ್ಷ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ವದಂತಿ ತಡೆಯಲು ಕ್ರಮ
ಪ್ರಶ್ನೆಪತ್ರಿಕೆ ಸೋರಿಕೆ, ವಾಟ್ಸ್‌ಆ್ಯಪ್‌ ಅಥವಾ ಸಾಮಾಜಿಕ ಜಾಲತಾಣದ ಮೂಲಕ ವದಂತಿ ಹಬ್ಬಿಸುವವರ ಮೇಲೆ ನಿಗಾ ಇರಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ, ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿನ ವರ್ಷದ ಪರೀಕ್ಷೆಗಳ ಪ್ರಶ್ನೆಪತ್ರಿಕೆ, ಕೈ ಬರಹ ಪ್ರಶ್ನೆಪತ್ರಿಕೆಗಳನ್ನು ರವಾನಿಸಿ, ವದಂತಿಗಳನ್ನು ಹಬ್ಬಿಸಿ, ವಿದ್ಯಾರ್ಥಿ, ಪೋಷಕರು ಹಾಗೂ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುವವರ ವಿರುದ್ಧ ಸೈಬರ್‌ ಕ್ರೈಂ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ. ತಿಳಿಸಿದ್ದಾರೆ.

ನಿಷೇಧಾಜ್ಞೆ ಜಾರಿ
ಉಭಯ ಜಿಲ್ಲೆಗಳಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆೆ.

Advertisement

Udayavani is now on Telegram. Click here to join our channel and stay updated with the latest news.

Next