Advertisement

ಮತಕ್ಕೆ ಮುನ್ನ ತೊಡಕು

01:55 AM Apr 08, 2019 | Sriram |

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೆ ಹತ್ತೇ ದಿನ ಬಾಕಿ ಉಳಿದಿದ್ದರೂ, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪಕ್ಷಗಳ ಗೊಂದಲ ನಿವಾರಣೆ ಮಾತ್ರ ಇನ್ನೂ ಆಗಿಲ್ಲ. ಹಳೇ ಮೈಸೂರು ಭಾಗ ಭಾನುವಾರ ವರ್ಷದ ತೊಡಕು ಹಬ್ಬ ಆಚರಣೆಯಲ್ಲಿ ಮಗ್ನವಾಗಿದ್ದರೆ, ಈ ಪಕ್ಷಗಳ ನಾಯಕರು ತಮಗೆ ಎದುರಾಗಿರುವ “ತೊಡಕು’ ನಿವಾರಣೆಯಲ್ಲಿ ಮಗ್ನರಾಗಿದ್ದರು.

Advertisement

ಮಂಡ್ಯ, ಮೈಸೂರು, ತುಮಕೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿಗಳಿಗೆ ತಂದಿಟ್ಟಿರುವ ತೊಡಕು ಮೈತ್ರಿ ಪಕ್ಷಗಳ ನಾಯಕರಿಗೆ ಬಿಸಿ ತುಪ್ಪವಾಗಿದೆ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲ ನಾಯಕರೂ ಬಂಡಾಯ ಶಮನಕ್ಕೆ ಅಖಾಡಕ್ಕಿಳಿಯುವಂತಾಗಿದೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಪುತ್ರ ನಿಖೀಲ್‌ ಕುಮಾರಸ್ವಾಮಿಯೇ ಸ್ಪರ್ಧೆ ಮಾಡಿರುವುದರಿಂದ ಅಲ್ಲಿನ ಬಂಡಾಯ ಕಾಂಗ್ರೆಸ್‌ ನಾಯಕರಿಗೂ ಕಂಟಕವಾಗಿ ಪರಿಣಮಿಸಿದೆ. ಮಂಡ್ಯದಲ್ಲಿ ಕಾಂಗ್ರೆಸ್‌ ಬಂಡಾಯ ರಾಹುಲ್‌ ಗಾಂಧಿವರೆಗೂ ತಲುಪಿದ್ದು, ತಮ್ಮ ಪುತ್ರನನ್ನು ಸೋಲಿಸಲು ಕಾಂಗ್ರೆಸ್‌ನವರು ಪಕ್ಷೇತರ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬಹಿರಂಗವಾಗಿಯೇ ಆರೋಪ ಮಾಡಿರುವುದು ನಾಯಕರಲ್ಲಿ ಆಂತರಿಕ ವೈಮಸ್ಸಿಗೆ ಕಾರಣವಾಗುತ್ತಿದೆ.

ಅದೇ ಕಾರಣಕ್ಕೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಬೆಂಗಳೂರಿಗೆ ಆಗಮಿಸಿ ಭಾನುವಾರ ಖಾಸಗಿ ಹೊಟೆಲ್‌ನಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಸೇರಿದಂತೆ ಹಿರಿಯ ಮುಖಂಡರೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಮೈತ್ರಿಯಲ್ಲಿನ ಗೊಂದಲಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ಮಂಡ್ಯ, ಹಾಸನಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳ ಪರವಾಗಿ ಸಕ್ರಿಯವಾಗಿ ಕೆಲಸ ಮಾಡುವಂತೆ ಪಕ್ಷದ ಜಿಲ್ಲಾ ಮುಖಂಡರು ಹಾಗೂ ಕಾರ್ಯಕರ್ತರ ಮನವೊಲಿಸುವ ಕೆಲಸ ಮಾಡಿ ಎಂದು ವೇಣುಗೋಪಾಲ್‌ ರಾಜ್ಯ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಮಂಡ್ಯ ನಾಯಕರೊಂದಿಗೆ ಸಿದ್ದು ಸಭೆ: ಈ ನಡುವೆ, ಸಿದ್ದರಾಮಯ್ಯ ಮಂಡ್ಯದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತ, ಪಕ್ಷದ ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿದರು. ಮಾಜಿ ಸಚಿವರಾದ ಚಲುವರಾಯಸ್ವಾಮಿ, ಎಂ. ನರೇಂದ್ರಸ್ವಾಮಿ, ಮಾಜಿ ಶಾಸಕ ರಮೇಶ್‌ ಬಂಡಿಸಿದ್ದೇಗೌಡ, ಮಾಜಿ ಶಾಸಕ ಕೆ. ಚಂದ್ರಶೇಖರ್‌, ರಾಮಕೃಷ್ಣ, ರವಿ ಗಣಿಗ ಸಭೆಯಲ್ಲಿ ಪಾಲ್ಗೊಂಡಿದ್ದರು.

ಆದರೆ, ಮಂಡ್ಯದಲ್ಲಿ ಜೆಡಿಎಸ್‌ ನಾಯಕರು ಯಾರ ಬೆಂಬಲವೂ ಬೇಡ ಎಂದು ಬಹಿರಂಗವಾಗಿಯೇ ಹೇಳುತ್ತಿದ್ದಾರೆ. ಅವರಿಗೆ ನಮ್ಮ ಅಗತ್ಯವಿಲ್ಲದಿರುವಾಗ ಅವರ ಪರವಾಗಿ ಕೆಲಸ ಮಾಡಿ ಏನು ಪ್ರಯೋಜನ ಎಂದು ನೇರವಾಗಿಯೇ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಭಾನುವಾರದ ಸಭೆಯಲ್ಲಿಯೂ ಒಮ್ಮತ ಮೂಡದ ಕಾರಣ ಸಿದ್ದರಾಮಯ್ಯ ಸೋಮವಾರ ಮತ್ತೂಂದು ಬಾರಿ ಅವರೊಂದಿಗೆ ಸಂಧಾನ ಕಾರ್ಯ ನಡೆಸುವ ಸಾಧ್ಯತೆ ಇದೆ.

ಜಿಟಿಡಿ ಕಸರತ್ತು: ಮೈಸೂರು ಜಿಲ್ಲಾ ಉಸ್ತುವಾರಿ ಜಿ.ಟಿ. ದೇವೇಗೌಡ ಕೂಡ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡದೆ, ಅಂತರ ಕಾಯ್ದುಕೊಂಡಿದ್ದರು. ನಂತರ ಶನಿವಾರ ಪಕ್ಷದ ಮುಖಂಡರ ಸಭೆ ಕರೆದು ಮೈತ್ರಿ ಪಕ್ಷಗಳ ಅಭ್ಯರ್ಥಿ ಸಿ.ಎಚ್‌. ವಿಜಯಶಂಕರ್‌ ಪರವಾಗಿ ಕೆಲಸ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಆದರೆ, ಜಿ.ಟಿ. ದೇವೇಗೌಡರ ಸಂಧಾನ ಸಭೆಯ ಬಗ್ಗೆ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಂಡಿದ್ದು, ನಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯ ಕಡಿಮೆಯಾಗಿದೆ. ಮೈತ್ರಿ ಹಿತದೃಷ್ಟಿಯಿಂದ ಕಾರ್ಯಕರ್ತರೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವಂತೆ ಕೇಳಿಕೊಂಡಿದ್ದೇವೆ. ಎಲ್ಲವೂ ಬಗೆಹರಿಯಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಜೆಡಿಎಸ್‌ನಿಂದ ಆಗುವ ಸಮಸ್ಯೆಯನ್ನು ಅರಿತು, 2018 ರ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜ ವಿಧಾನಸಭೆ ಕ್ಷೇತ್ರದಿಂದ ಜೆಡಿಎಸ್‌ ಟಿಕೆಟ್‌ ಸಿಗದೇ ಪಕ್ಷೇತರ ಅಭ್ಯರ್ಥಿಯಾಗಿದ್ದ ಹರೀಶ್‌ ಅವರನ್ನು ಅಧಿಕೃತವಾಗಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ.

ಇಂದಿನಿಂದ ಮೈಸೂರಲ್ಲಿ ಜಂಟಿ ಪ್ರಚಾರ
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಹಿಮ್ಮೆಟ್ಟಿಸಲು, ನಮ್ಮಲ್ಲಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮರೆತು ಸೋಮವಾರದಿಂದ ಒಟ್ಟಾಗಿ ಪ್ರಚಾರ ನಡೆಸುತ್ತೇವೆ ಎಂದು ಕಾಂಗ್ರೆಸ್‌-ಜೆಡಿಎಸ್‌ ನಾಯಕರು ಘೋಷಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಕಾಂಗ್ರೆಸ್‌-ಜೆಡಿಎಸ್‌ ನಾಯಕರು, ಸೋಮವಾರ ಹುಣಸೂರು ಕ್ಷೇತ್ರದಲ್ಲಿ ಬೆಳಗ್ಗೆ 9ಗಂಟೆಗೆ ಜೆಡಿಎಸ್‌ ಸಭೆ, 11ಗಂಟೆಗೆ ಅದೇ ಸ್ಥಳದಲ್ಲಿ ಎರಡೂ ಪಕ್ಷದ ಜಂಟಿ ಸಭೆ ನಡೆಸುವುದರೊಂದಿಗೆ ಜಂಟಿ ಪ್ರಚಾರ ಆರಂಭಿಸುವುದಾಗಿ ತಿಳಿಸಿದರು.

ಜೆಡಿಎಸ್‌ ರಾಜ್ಯಾಧ್ಯಕ್ಷ ಅಡಗೂರು ಎಚ್‌.ವಿಶ್ವನಾಥ್‌ ಮಾತನಾಡಿ, 28 ಕ್ಷೇತ್ರ ಕೂಡ ನಮ್ಮದೇ ಅಂದು ಕೊಂಡು ಸಮರೋಪಾದಿಯಲ್ಲಿ ಎರಡೂ ಪಕ್ಷಗಳವರು ಕೆಲಸ ಮಾಡುತ್ತಿದ್ದೇವೆ ಎಂದರು.

ನಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯ ಕಡಿಮೆಯಾಗಿದೆ. ಮೈತ್ರಿ ಹಿತದೃಷ್ಟಿಯಿಂದ ಕಾರ್ಯಕರ್ತರೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವಂತೆ ಕೇಳಿಕೊಂಡಿದ್ದೇವೆ. ಎಲ್ಲವೂ ಬಗೆಹರಿಯಲಿದೆ.
-ಜಿ.ಟಿ.ದೇವೇಗೌಡ, ಉನ್ನತ ಶಿಕ್ಷ ಣ ಸಚಿವ

ಸಿದ್ದರಾಮಯ್ಯ ಅವರು ಸೂಚನೆ ನೀಡಿರುವ ಬಗ್ಗೆ ಕಾರ್ಯಕರ್ತರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ರಾಹುಲ್‌ ಗಾಂಧಿ ಪ್ರಚಾರಕ್ಕೆ ಬಂದಾಗ ಪಾಲ್ಗೊಳ್ಳಲು ತೀರ್ಮಾನಿಸಲು ಇನ್ನೂ ಸಮಯ ಇದೆ. ಮೂರು ಜನ ಮಂತ್ರಿ, ಎಂಟು ಶಾಸಕರಿದ್ದಾರೆ. ಅವರು ಚುನಾವಣೆ ಮಾಡುತ್ತಿದ್ದಾರೆ. ನಮ್ಮ ಪಾಡಿಗೆ ನಾವಿದ್ದೇವೆ. ಪಕ್ಷ ಶಿಸ್ತು ಕ್ರಮ ಕೈಗೊಂಡರೆ, ಆಶೀರ್ವಾದ ಎಂದು ತಿಳಿದುಕೊಳ್ಳುತ್ತೇವೆ.
– ಎನ್‌. ಚಲುವರಾಯಸ್ವಾಮಿ, ಮಾಜಿ ಸಚಿವ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೂವತ್ತು ವರ್ಷದಿಂದ ಪರಸ್ಪರ ಹೊಡದಾಡಿಕೊಂಡಿದ್ದೇವೆ. ಏಕಾ ಏಕಿ ಕಾರ್ಯಕರ್ತರು ಒಂದಾಗುವುದು ಕಷ್ಟ. ಎಲ್ಲರಿಗೂ ಸ್ವಾಭಿಮಾನ ಇರುತ್ತದೆ. ಹೀಗಾಗಿ ಕೆಲವರು ಮಾತನಾಡುತ್ತಾರೆ. ದೇಶಕ್ಕೋಸ್ಕರ, ಪಕ್ಷಕ್ಕಾಗಿ ಒಂದಾಗುತ್ತೇವೆ.
– ಡಿ.ಕೆ.ಶಿವಕುಮಾರ್‌, ಜಲ ಸಂಪನ್ಮೂಲ ಸಚಿವ

ಸೀಟು ಹಂಚಿಕೆಗೂ ಮೊದಲು ನಾನು ರಾಹುಲ್‌ ಜೊತೆ ಪ್ರತ್ಯೇಕವಾಗಿ ಮಾತನಾಡಿ, ತುಮಕೂರು ಗೆಲ್ಲುವ ಕ್ಷೇತ್ರ, ಬಿಟ್ಟು ಕೊಡಬಾರದು ಎಂದಿದ್ದೆ. ಆದರೆ, ರಾಹುಲ್‌ ಅವರು ಜೆಡಿಎಸ್‌ ನಾಯಕರ ಜೊತೆ ಮಾತುಕತೆ ನಡೆಸಿ, ತುಮಕೂರನ್ನು ಬಿಟ್ಟು ಕೊಟ್ಟಾಗ ಅದನ್ನು ಒಪ್ಪಲೇಬೇಕಾಯಿತು. ಮೈತ್ರಿ ಉಳಿಸಿಕೊಳ್ಳಲು ತುಮಕೂರು ಕ್ಷೇತ್ರವನ್ನು ತ್ಯಾಗ ಮಾಡಬೇಕಾಯಿತು.
– ಡಾ.ಜಿ.ಪರಮೇಶ್ವರ್‌, ಉಪ ಮುಖ್ಯಮಂತ್ರಿ.

Advertisement

Udayavani is now on Telegram. Click here to join our channel and stay updated with the latest news.

Next