Advertisement

ಅಭಿವ್ಯಕ್ತಿಗೂ ಮುನ್ನ ಯೋಚಿಸಬೇಕಿದೆ

01:06 PM Apr 28, 2017 | Team Udayavani |

ದಾವಣಗೆರೆ: ಪ್ರಸ್ತುತ ವಾತಾವರಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಧಕ್ಕೆ ತರುವ ಕೆಲಸ ನಡೆಯುತ್ತಿರುವುದು ಅತ್ಯಂತ ನೋವಿನ ವಿಚಾರ ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ವಿಷಾದಿಸಿದ್ದಾರೆ. ಬಸವ ಜಯಂತಿ, ಬಸವ ಪ್ರಭಾತ್‌ ಪೇರಿ ಶತಮಾನೋತ್ಸವ ಅಂಗವಾಗಿ ಗುರುವಾರ ಏರ್ಪಡಿಸಿದ್ದ ಶ್ರೀ ಮೃತ್ಯುಂಜಯ ಅಪ್ಪ, ಹಡೇಕರ್‌ ಮಂಜಪ್ಪನವರ ಸ್ಮರಣೋತ್ಸವ ಹಾಗೂ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

Advertisement

ನಾಡಿನ ಖ್ಯಾತ ಸಾಹಿತಿ ಡಾ| ಎಂ.ಎಂ. ಕಲಬುರುಗಿ ತಮ್ಮ ವಿಚಾರಗಳ ಮಂಡನೆ ಮಾಡಿದ್ದಕ್ಕೆ ಗುಂಡಿಗೆ ಬಲಿಯಾಗಬೇಕಾಗಿ ಬಂದಿದ್ದು ದುರಂತ ಎಂದರು. 12ನೇ ಶತಮಾನದಲ್ಲಿಬಸವಣ್ಣನವರು ಅನುಭವ ಮಂಟಪ ಪ್ರಾರಂಭಿಸುವ ಮೂಲಕ ಪ್ರತಿಯೊಬ್ಬ ಶರಣರು ತಮ್ಮ  ಅಭಿಪ್ರಾಯ, ವಿಚಾರಧಾರೆಯನ್ನು ಅಭಿವ್ಯಕ್ತಿಗೊಳಿಸುವ ಮುಕ್ತ ಸ್ವಾತಂತ್ರ ನೀಡಿದ್ದರು.

ಈಗ ಅಂತಹ ವಾತಾವರಣ ಇಲ್ಲ. ಸ್ವಾಮೀಜಿಗಳು ಒಳಗೊಂಡಂತೆ ಪ್ರಗತಿಪರರು, ವಿಚಾರವಂತರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಅಭಿವ್ಯಕ್ತಿಗೊಳಿಸಲು ಭಯ ಪಡುವ ವಾತಾವರಣ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಅಣ್ಣ ಬಸವಣ್ಣನವರು ಮಾಡಿರುವ ಸಾಧನೆ ಬಗ್ಗೆ ಹಲವಾರು ವಿಮರ್ಶೆ, ಪ್ರಬಂಧ ಮಂಡನೆ, ಸಂಶೋಧನೆ ನಡೆದಿವೆ.

ಬಸವಣ್ಣ ಇಂದು ನಮ್ಮೊಂದಿಗೆ ಇಲ್ಲದೇ ಇರಬಹುದು. ಆದರೆ, ಅವರ ವಿಚಾರಧಾರೆ, ತತ್ವಾದರ್ಶ, ಸಾಮಾಜಿಕ ಚಿಂತನೆ ನಮ್ಮ ಮುಂದೆ ಇವೆ. ಮುಂದೆಯೂ ಇರುತ್ತದೆ. ಸೂರ್ಯ ಚಂದ್ರ ಇರುವರೆಗೂ ಬಸವಣ್ಣನವರು ತಮ್ಮ ವಿಚಾರಗಳ ಮೂಲಕ ಬದುಕಿರುತ್ತಾರೆ ಎಂದು ತಿಳಿಸಿದರು. 

ಮ್ಯಾಗ್ನಾಕಾರ್ಟಕ್ಕಿಂತಲೂ ಮುನ್ನವೇ ಬಸವಣ್ಣನವರು ಪ್ರಾರಂಭಿಸಿದ ಅನುಭವ ಮಂಟಪ ಜಗತ್ತಿನ ಮೊಟ್ಟ ಮೊದಲ ಸಂಸತ್‌ ಎಂಬ ಕೀರ್ತಿಗೆ ಪಾತ್ರವಾಗಿದೆ. ಸೂರ್ಯ ಮುಳುಗದ ಸಾಮ್ರಾಜ್ಯ ಆಳಿದಂತಹ ಬ್ರಿಟಿಷರೇ ಅನುಭವ ಮಂಟಪ ವಿಶ್ವದ ಮೊದಲ ಸಂಸತ್‌ ಎಂದು ಒಪ್ಪಿಕೊಂಡು ಲ್ಯಾಂಬರ್ಟ್‌ ನಗರದಲ್ಲಿ ಬಸವಣ್ಣನವರ ಪ್ರತಿಮೆ ಸ್ಥಾಪಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. 

Advertisement

ಸರ್ವರೂ ಸಮಾನರು. ಎಲ್ಲರೂ ದೇವರ ಮಕ್ಕಳು ಎಂಬ ಉದಾತ್ತ ಚಿಂತನೆಯ ಸಂದೇಶ ಸಾರಿದ ಬಸವಣ್ಣನವರು ಜಾತಿ, ವರ್ಗ, ಲಿಂಗ ತಾರತಮ್ಯ ರಹಿತವಾದ ಕಲ್ಯಾಣ ರಾಜ್ಯ ಕಟ್ಟಿದ್ದು ಅಚ್ಚರಿ ಮೂಡಿಸುವಂತದ್ದು. ಈಗಲೂ ನಾವೆಲ್ಲರೂ ಒಗ್ಗೂಡಿ ಬಸವಣ್ಣನವರ ಕಲ್ಯಾಣ ರಾಜ್ಯವನ್ನ ಮತ್ತೆ ಕಟ್ಟಬೇಕಾದ ಜರೂರು ಇದೆ ಎಂದು ತಿಳಿಸಿದರು. 

ಮಹಾನ್‌ ಸಮಾಜ ಸುಧಾರಕ, ಆರ್ಥಿಕ ತಜ್ಞ ಬಸವಣ್ಣನವರ ವಿಚಾರಧಾರೆಯಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿಯವರ ಸಮಾನತೆ, ಸಂವಿಧಾನ ಶಿಲ್ಪಿ ಅಂಬೇಡ್ಕರ್‌ರವರ ಸಾಮಾಜಿಕ ನ್ಯಾಯ, ಕಾಲ್‌ಗ‌ì ಮಾರ್ಕ್ಸ್ರವರ ಶ್ರಮದ ಮೌಲ್ಯ ಇವೆ. ಭ್ರಷ್ಟಾಚಾರವನ್ನು 12ನೇ ಶತಮಾನದಲ್ಲೇ ಬಸವಣ್ಣನವರು ತೀವ್ರವಾಗಿ ಖಂಡಿಸಿದ್ದರು. ಇಂದು ಭ್ರಷ್ಟಾಚಾರ ಮಹಾ ಪಿಡುಗಾಗಿದೆ.

ಹಣ ಮಾಡುವುದೇ ಧರ್ಮ ಎನ್ನುವಂತೆ ವರ್ತಿಸುವ ಜನಪ್ರತಿನಿಧಿಗಳು, ಅಧಿಕಾರಿಗಳು ತಮ್ಮ ಮುಂದಿನ 3-4 ತಲೆಮಾರು ಕೂತು ತಿನ್ನುವಷ್ಟು ಹಣ ಸಂಪಾದನೆ ಮಾಡುತ್ತಿದ್ದಾರೆ. ಸ್ವಿಸ್‌ ಬ್ಯಾಂಕ್‌ ನಲ್ಲಿಡುತ್ತಿದ್ದಾರೆ ಎಂದರು. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಜಿ.ಎಚ್‌. ರಾಜಶೇಖರ್‌ ಗುಂಡಗಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಶ್ರೀ ಕೇತೇಶ್ವರ ಸ್ವಾಮೀಜಿ, ಎಂ. ಬಸವರಾಜ್‌, ವೀಣಾ ಕೃಷ್ಣಮೂರ್ತಿ, ಎಚ್‌.ಕೆ. ಸತ್ಯಭಾಮ, ಕೆ.ಎಸ್‌. ವೀರಭದ್ರಪ್ಪ ತೆಲಗಿ, ಬಿ. ಮಹಾಂತೇಶ್‌ ನಿಟ್ಟೂರು, ಸುಭಾಷಿಣಿ ಮಂಜುನಾಥ್‌ ಇತರರು ಇದ್ದರು. ಗಂಗಾಧರ ನಿಟ್ಟೂರು ನಿರೂಪಿಸಿದರು. ಡಿ.ಎನ್‌. ನಾಯ್ಕ, ಎಂ.ಪಿ. ಅನಸೂಯ, ಎಸ್‌. ಉಮಾದೇವಿ, ಎ.ಬಿ. ರುದ್ರಮ್ಮ, ಶ್ರೀನಿಧಿ ಇತರರು ಕವನ ವಾಚಿಸಿದರು.   

Advertisement

Udayavani is now on Telegram. Click here to join our channel and stay updated with the latest news.

Next