Advertisement

ಸವಾಲೆಸೆಯುವ ಮುನ್ನ ಶ್ರೀರಾಮುಲು ಯೋಚಿಸಿ ಮಾತನಾಡಲಿ: ಸಿದ್ದರಾಮಯ್ಯ

08:19 PM Jul 05, 2020 | Sriram |

ಬೆಂಗಳೂರು: ಆರೋಗ್ಯ ಸಚಿವ ಶ್ರೀರಾಮುಲು ಪ್ರತಿಪಕ್ಷಗಳಿಗೆ ಸವಾಲೆಸೆಯುವ ಮುನ್ನ ಯೋಚಿಸಿ ಮಾತನಾಡಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

Advertisement

ವೈದ್ಯಕೀಯ ಉಪಕರಣ ಖರೀದಿಯಲ್ಲಿ ಲೂಟಿಹೊಡೆದಿದ್ದರೆ ದಾಖಲೆ ಬಿಡುಗಡೆ ಮಾಡಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಸವಾಲು ಹಾಕಿದ್ದ ಆರೋಗ್ಯ ಸಚಿವ ಶ್ರೀರಾಮುಲುಗೆ ಸಿದ್ದರಾಮಯ್ಯ ಟ್ವೀಟ್‌ ಮೂಲಕ ಪ್ರತ್ಯುತ್ತರ ನೀಡಿದ್ದು,ರಾಮುಲು ಅವರೇ, ಬಳ್ಳಾರಿಯ ನಿಮ್ಮ ಅಣ್ತಮ್ಮಂದಿರು ಇದೇ ರೀತಿ ಸವಾಲು ಹಾಕಿ ಕೊನೆಗೆ ದಾಖಲೆ ಬಿಡುಗಡೆ ಮಾಡಿದಾಗ ಜೈಲು ಸೇರಿದ್ದರು. ಸವಾಲೆಸೆಯುವಾಗ ಇದು ನಿಮ್ಮ ಗಮನದಲ್ಲಿರಲಿ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಕೋವಿಡ್‌ ನಿಯಂತ್ರಣಕ್ಕೆ ತ್ರಿಮೂರ್ತಿ ಸಚಿವರನ್ನು ನೇಮಿಸಿರುವುದು ಸೋಂಕಿತರಿಗೆ ನೆರವಾಗಲೆಂದೊ ಅಥವಾ ಸರ್ಕಾರದಲ್ಲಿರುವ ಭಿನ್ನಾಭಿಪ್ರಾಯವನ್ನು ಶಮನ ಮಾಡಲಿಕ್ಕೋ? ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ, ಸೃಷ್ಟಿ, ಪಾಲನೆ,ಲಯ ಇವು
ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರ ಕರ್ತವ್ಯವಾಗಿವೆ. ಈ ಮೂರು ಕರ್ತವ್ಯಗಳಲ್ಲಿ ತ್ರಿಮೂರ್ತಿ ಸಚಿವರು ಯಾವ ಕೆಲಸ ಮಾಡಲಿದ್ದಾರೆ ಎಂದು ವ್ಯಂಗ್ಯವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪ್ರಶ್ನಿಸಿದ್ದಾರೆ.

ಸಕಾಲದಲ್ಲಿ ಆಂಬುಲೆನ್ಸ್ ಬರದೆ ಸಾವನಪ್ಪಿದ್ದ ಕೋವಿಡ್ ಸೋಂಕಿತರ ಮನೆಗೆ ತೆರಳಿ ಕುಟುಂಬದ ಕ್ಷಮೆ ಕೇಳಿರುವ ಬಿಬಿಎಂಪಿ ಆಯುಕ್ತ ಅನಿಲ್‌ ಕುಮಾರ್‌, ಎಲ್ಲ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ. ಜನತೆ ಅಧಿಕಾರಿಗಳಿಂದ ನಿರೀಕ್ಷಿಸುವುದು ಇಂತಹ ಸೂಕ್ಷ್ಮ ಅಂತಕರಣದ ಮಾನವೀಯ ನಡವಳಿಕೆಯನ್ನು ಎಂದು ಸಿದ್ದರಾಮಯ್ಯ ಅನಿಲ್‌ ಕುಮಾರ್‌ ಕ್ಷಮಾಪಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನಿಧಿಯಿಂದ ರಾಜ್ಯದ ಕೋವಿಡ್‌ ಚಿಕಿತ್ಸೆಗೆ ಎಷ್ಟು ನೆರವು ನೀಡಲಾಗಿದೆ ಎಂದು ಸುಳ್ಳು ಆಶ್ವಾಸನೆ ನೀಡುವ ಮೋದಿ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಕೇಳಿದ್ದರೆ ರಾಜ್ಯದ ಜನತೆಗೆ ಕೊಂಚ ನೆಮ್ಮದಿಯಾದರೂ ಸಿಗುತ್ತಿತ್ತು. ಕೋವಿಡ್‌ ನಿಯಂತ್ರಣಕ್ಕಾಗಿ ಮೋದಿ ಅವರಿಂದ ಶಹಬಾಸ್‌ಗಿರಿ ಪಡೆದ ಯಡಿಯೂರಪ್ಪನವರು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಸರ್ಕಾರದ ಕೋವಿಡ್‌ ವೈಫಲ್ಯತೆಗಳ ವರದಿಗಳನ್ನು ತೋರಿಸಿದ್ದರೆ ಪ್ರಧಾನಿ ಅವರಿಂದ ಇನ್ನಷ್ಟು ಶಹಬಾಸ್‌ಗಿರಿ ಸಿಗುತ್ತಿತ್ತೇನೋ ಎಂದು ಸಿದ್ದರಾಮಯ್ಯ ವ್ಯಂಗವಾಡಿದ್ದಾರೆ.

Advertisement

ಅಲ್ಲದೇ ಆಂಧ್ರ ಸರ್ಕಾರ ಅಲ್ಟ್ರಾ ಮಾಡರ್ನ್ ಸಲಕರೆಯಿಂದ ಸಜ್ಜುಗೊಂಡಿರುವ 1000 ಆಂಬುಲೆನ್ಸ್ ಗಳನ್ನು 200 ಕೋಟಿ ಹಣ ನೀಡಿ ಸೇವೆಗೆ ಸಿದ್ದಮಾಡಿಕೊಂಡಿದೆ. ರಾಜ್ಯ ಸರ್ಕಾರ ಬೇರೆಯವರಿಂದ ನೋಡಿಯಾದರೂ ಕಲಿಯಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next