ಬೆಳಗ್ಗಿನ ಸಮಯ. ಮನೆಯಲ್ಲಿ ಒಂದೇ ಸಮನೇ ಗಲಾಟೆ. ನನ್ನ ಮಗಳು ನಾನು ಪ್ಲೇ ಹೋಮ್‌ಗೆ ಹೋಗುದಿಲ್ಲ ಅಂತ ಹಠಮಾಡಿ ಕೂತಿದ್ದಳು. ನಾನು ಅವಳನ್ನು ಸಮಾಧಾನ ಮಾಡಿದ್ದೇ ಮಾಡಿದ್ದು ಏನೂ ಪ್ರಯೋಜನ ಆಗಲಿಲ್ಲ. ಅವಳಿಷ್ಟದ ಚಾಕಲೇಟು, ಕೇಕ್ ತಂದು ಕೊಡುತ್ತೇನೆ, ಮುದ್ದಾದ ಬಾರ್ಬಿ ಗೊಂಬೆ ತಗೆದುಕೊಡುತ್ತೇನೆ ಎಂದು ಪ್ರೀತಿಯಿಂದ ಬ್ಲ್ಯಾಕ್‌ಮೇಲ್ ಮಾಡಿದರೂ ಒಪ್ಪಲಿಲ್ಲ. ಇವತ್ತು ಅಂತೂ ಹೋಗೋದೆ ಇಲ್ಲ ಅಂತಾ ಕೂತೇ ಬಿಟ್ಟಳು. ನಾಳೆ ಕೂಡ ಹೋಗದಿದ್ದರೆ ಏನೂ ಮಾಡೋದಪ್ಪಾ ಅಂತ ಚಿಂತಿಸುತ್ತ ಕೂತೆ. ಮಾರನೆಯ ದಿನ ಹೇಗಾದರೂ ಮಾಡಿ ಅವಳಿಗೆ ತಿಳಿ ಹೇಳಿದೆ. ಸ್ಕೂಲ್‌ನಲ್ಲಿ ನಿನಗೆ ತುಂಬಾ ಫ್ರೆಂಡ್ಸ್ ಸಿಗ್ತಾರೆ, ಮಿಸ್ ಡಾನ್ಸ್, ಸಾಂಗ್ಸ್, ರೈಮ್ಸ್. ಗೇಮ್ಸ್ ಎಲ್ಲಾನೂ ಹೇಳಿ ಕೊಡ್ತಾರೆ ಎಂದೆಲ್ಲ ಹೇಳಿ ಕೊನೆಗೂ ಪ್ಲೇಹೋಮ್ ಹೋಗಲು ಖುಷಿಯಿಂದ ಒಪ್ಪಿಕೊಂಡಳು.
ಮೂರು ವರ್ಷದ ಮಗು ಮನೆಯಲ್ಲೇ ತನಗೆ ಬೇಕಾದ ಹಾಗೆ ಆಡಿಕೊಂಡು, ಬೋರ್ ಆದಾಗ ತನಗೆ ಬೇಕಾದ ಕಾರ್ಟೂನ್ ನೋಡಿಕೊಂಡು, ಹಸಿವಾದಾಗ ತಿಂದುಕೊಂಡು, ಅಮ್ಮನ ಮಡಲಲ್ಲಿ ಸುಸ್ತಾದಾಗ ಮಲಗಿಕೊಂಡು ಸಮಯ ಕಳೆಯುತ್ತದೆ. ಆದರೆ, ಸಡನ್ ಆಗಿ ಅವರನ್ನು ಪ್ಲೇಹೋಮ್ ಹೋಗಬೇಕು ಅಂದರೆ ಮನಸ್ಸು ಒಪ್ಪಿಕೊಳ್ಳುದಿಲ್ಲ. ಇನ್ನು ಆ ಮುದ್ದು ಮಗುವಿನ ಮನವೊಲಿಸಿ ಅವರನ್ನು ಪ್ಲೇಹೋಮ್‌ಗೆ ಕಳಿಸುವುದು ಕಷ್ಟದ ಕೆಲಸ.
ಒಂದು ವೇಳೆ ನಿಮ್ಮ ಮಗುವನ್ನು ಪ್ಲೇಹೋಮ್ ಸೇರಿಸಿದ್ದೀರಿ ಎಂದಾದಲ್ಲಿ ಅನೇಕ ವಿಷಯಗಳನ್ನು ಗಮನದಲ್ಲಿಡುವುದು ಅತೀ ಅಗತ್ಯವಾಗಿರುತ್ತದೆ. ಮಗು ತನ್ನ ಮನೆಯನ್ನು ಬಿಟ್ಟರೆ ಹೊರಗೆ ತುಂಬಾ ಹೊತ್ತು ಕಳೆಯುವ ಜಾಗ ಎಂದರೆ ಪ್ಲೇಸ್ಕೂಲ್. ಮೊದಲನೇ ಸಲ ಮಗು ಹೆತ್ತವರನ್ನ, ಹೆಚ್ಚಾಗಿ ಸದಾಕಾಲ ಜೊತೆಗಿರುವ ಅಮ್ಮನ್ನು ಬಿಟ್ಟು ಹಗಲು ಪೂರ್ತಿ ಕಳೆಯುವ ಜಾಗ ಪ್ಲೇಹೋಮ್. ಆದುದರಿಂದ ಪ್ಲೇಹೋಮ್ ಆರಿಸಿಕೊಳ್ಳುವಾಗ ಜಾಗ್ರತೆ ವಹಿಸಬೇಕಾದುದು ಅಗತ್ಯ. ಮಗು ಮನೆಯಲ್ಲಿ ಗಲಾಟೆ ಮಾಡುತ್ತದೆ, ತನ್ನ ಕೆಲಸ ಮಾಡಲು ಬಿಡುವುದಿಲ್ಲ ಮಗುವಿನ ತುಂಟಾಟ ಸಹಿಸಲು ಆಗದು ಎಂದು ಮಗುವನ್ನು ಸಿಕ್ಕಸಿಕ್ಕಿದ ಪ್ಲೇಹೋಮ್‌ಗೆ ಸೇರಿಸಿದರೆ ಮಗುವಿನ ಭವಿಷ್ಯ ಹಾಳಾದಂತೆ.
ಪ್ಲೇಹೋಮ್ ಸೇರಿಸುವ ಮೊದಲು ಅದರ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಅಂದರೆ ಅಲ್ಲಿನ ವಾತಾವರಣ, ಕಲಿಕೆಯ ರೀತಿ, ಅಲ್ಲಿನ ರೀತಿ-ನೀತಿಗಳನ್ನು ಅರಿತುಕೊಳ್ಳುವುದು ಉತ್ತಮ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಮುದ್ದು ಕಂದ ಹೋಗುವ ಪ್ಲೇಹೋಮ್‌ಗೆ ಭದ್ರತೆ ಇದೆಯಾ ಎಂದು ಗಮನಿಸುವುದು ತುಂಬಾ ಮುಖ್ಯ. ಅಲ್ಲದೆ ಅಲ್ಲಿನ ಚಟುವಟಿಕೆಗಳು ಮಗುವಿನ ಬೆಳವಣಿಗೆಗೆ ಪೂರಕವಾಗಿದೆಯೇ ಎಂದು ಗಮನಿಸಬೇಕು. ಅಲ್ಲಿ ಶಿಕ್ಷಕರು ಮಗುವಿಗೆ ಕಲಿಸುವ ರೀತಿ, ಅವರೊಂದಿಗೆ ಮಗು ಹೇಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ತಿಳಿದಿರಬೇಕು.
ಬೆಳೆಯುವ ಮನಸ್ಸಿಗೆ ಘಾಸಿಯಾದರೆ ಅದು ವಾಸಿಯಾಗುವುದು ಕಷ್ಟ. ಪ್ಲೇಹೋಮ್ ಕೂಡ ಹಾಗೆಯೇ ಮಗುವಿಗೆ ತಾನು ಹೋಗುವ ಪ್ಲೇಹೋಮ್ ಇಷ್ಟವಾದರೆ ಸರಿ. ಒಂದು ವೇಳೆ ಪ್ಲೇಹೋಮ್ ಬಗ್ಗೆ ತಿರಸ್ಕಾರ ಭಾವನೆ ಒಂದು ಸಲ ಮೂಡಿದರೆ ಅದನ್ನು ಬೇಗ ಅಳಿಸಲು ಸಾಧ್ಯವಿಲ್ಲ. ನಮ್ಮ ಮಗುವಿನ ಭವಿಷ್ಯ ನಮ್ಮ ಕೈಯಲ್ಲಿ, ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು.
ಸುಲಭಾ ಆರ್. ಭಟ್