Advertisement

ಬೀಟ್‍ರೂಟ್ ಹಲ್ವಾ ಮಾಡೋದು ಎಷ್ಟು ಸುಲಭ…. ಕೆಲವೇ ನಿಮಿಷಗಳಲ್ಲಿ ಮಾಡುವ ರೆಸಿಪಿ

05:38 PM Aug 19, 2022 | ಶ್ರೀರಾಮ್ ನಾಯಕ್ |

ಭಾರತ ಬಹು ಸಾಂಸ್ಕೃತಿಕ ಮತ್ತು ಬಹು ಧಾರ್ಮಿಕ ಬೀಡು. ಆದ್ದರಿಂದ ಇಲ್ಲಿ ವರ್ಷದ ಪ್ರತಿದಿನವೂ ಒಂದಲ್ಲಾ ಒಂದು ಹಬ್ಬ ಅಥವಾ ವಿಶೇಷವಿದ್ದೇ ಇರುತ್ತದೆ. ಅದರಲ್ಲೂ ಪ್ರಮುಖವಾದ ಹಬ್ಬಗಳು ಬಂತೆಂದರೆ ದೇಶದ ಚಿತ್ರಣವೇ ಬದಲಾಗುತ್ತದೆ.  ಭಾರತದ ಇತಿಹಾಸ ಮತ್ತು ಸಂಸ್ಕೃತಿಯನ್ನು ಮೆರೆಯಲು ಹಿಂದೂ ಹಬ್ಬಗಳು ಪ್ರಮುಖ ಪಾತ್ರ ವಹಿಸುತ್ತವೆ. ಈಗಾಗಲೇ ಒಂದರ ಹಿಂದೊಂದು ಹಬ್ಬಗಳು ಸಾಲಾಗಿ ಬರುವುದರಿಂದ ಮನೆಯಿಂದ ದೂರವಿದ್ದವರು ತಮ್ಮ ತಮ್ಮ ಸ್ವಗ್ರಾಮಗಳಿಗೆ ಹಿಂದಿರುಗಿ ಎಲ್ಲರೊಡನೆ ಬೆರೆತು ಹಬ್ಬ ಆಚರಿಸುವ ಕಾರಣ ಪ್ರತಿ ಮನೆಯಲ್ಲಿ ಸಂಭ್ರಮ ಮತ್ತು ಸಂತೋಷ ತುಂಬಿ ತುಳುಕುತ್ತದೆ.

Advertisement

ಗೌರಿ ಹಬ್ಬ, ಗಣೇಶ ಚತುರ್ಥಿ, ನವರಾತ್ರಿ, ದಸರಾ ಮತ್ತು ದೀಪಾವಳಿ ಹಬ್ಬಗಳು ಇವುಗಳಲ್ಲಿ ಪ್ರಮುಖವಾಗಿವೆ. ಈ ಹಬ್ಬಗಳಿಗೆ ಗೃಹಿಣಿಯರು ರುಚಿಯಾದ ಭಕ್ಷ್ಯಗಳನ್ನು ಸಿದ್ಧಪಡಿಸುವ ಕೆಲಸ ಆರಂಭವಾಗಿದೆ. ಅಡುಗೆಯ ಜಾಣ್ಮೆಯನ್ನು ಹಬ್ಬಕ್ಕೆ ಮನೆಗೆ ಬರುವ ಅತಿಥಿಗಳ ಎದುರು ಪ್ರದರ್ಶಿಸಿ ಅವರಲ್ಲಿ ತೃಪ್ತಿಯ ಮಂದಹಾಸವನ್ನು ಮೂಡಿಸುವುದು ನಿಮ್ಮ ಕೆಲಸವಾಗಿದೆ. ಹಬ್ಬದ ಸಂಭ್ರಮದಲ್ಲಿ ನೀವು ಪಾಲ್ಗೊಂಡು ಬಾಯಿ ಸಿಹಿ ಮಾಡುವ ಸರಳವಾದ ಸಿಹಿ ತಯಾರಿಸಲು ನೀವು ತಡಕಾಡುತ್ತಿದ್ದೀರಿ ಎಂದಾದಲ್ಲಿ ಇಲ್ಲಿದೆ ವಿಶೇಷ ಖಾದ್ಯ “ಬೀಟ್‌ ರೂಟ್ ಹಲ್ವಾ”.

ಈ ಭಕ್ಷ್ಯವು ಆರೋಗ್ಯಕರವಾಗಿದ್ದು ,ಮಕ್ಕಳಿಗಂತೂ ತುಂಬಾನೇ ಇಷ್ಟ ಪಡುವ ರೆಸಿಪಿಯಾಗಿದೆ. ಕೆಲವೇ ನಿಮಿಷಗಳಲ್ಲಿ ಸ್ವಾದಿಷ್ಟವಾಗಿ ತಯಾರಿಸಬಹುದಾದ ಈ ಹಲ್ವಾ ನಿಮಗೆ ಹೆಚ್ಚಿನ ತ್ರಾಸನ್ನು ಉಂಟು ಮಾಡುವುದಿಲ್ಲ.

ಬೇಕಾಗುವ ಸಾಮಗ್ರಿಗಳು:
ಬೀಟ್‍ರೂಟ್- 4, ಹಾಲು- 2 ಕಪ್, ಸಕ್ಕರೆ - 1/2 ಕಪ್, ಏಲಕ್ಕಿ ಪುಡಿ-1 ಟೀ ಚಮಚ, ತುಪ್ಪ-3 ಟೇಬಲ್ ಚಮಚ , ಗೋಡಂಬಿ ಸ್ವಲ್ಪ, ಒಣ ದ್ರಾಕ್ಷಿ ಸ್ವಲ್ಪ, ಬಾದಾಮಿ ಒಂದು ಹಿಡಿ, ಕೋವಾ 100 ಗ್ರಾಂ, ಮಂದಗೊಳಿಸಿದ ಹಾಲು ಸ್ವಲ್ಪ.

ತಯಾರಿಸುವ ವಿಧಾನ
-ಬೀಟ್‍ರೂಟನ್ನು ಚೆನ್ನಾಗಿ ತೊಳೆದು, ಹ್ಯಾಂಡ್ ಗ್ರೇಟರಿನಿಂದ ಸಿಪ್ಪೆಯನ್ನು ಸುಲಿಯಿರಿ.
-ತುಪ್ಪವನ್ನು ಆಳವಾದ ತಳವಿರುವ ಬಾಣಲೆಯಲ್ಲಿ ಹಾಕಿಕೊಂಡು ಕಾಯಿಸಿ.
-ಗೋಡಂಬಿ, ಬಾದಾಮಿ ಬೀಜಗಳನ್ನು ತುಪ್ಪದಲ್ಲಿ ಹಾಕಿ, ಕಡಿಮೆ ಉರಿಯಲ್ಲಿ ಸ್ವಲ್ಪ ಹೊತ್ತು ಹುರಿಯಿರಿ. ಇದರಿಂದ ಅವುಗಳು ಗರಿಗರಿಯಾಗುತ್ತವೆ.
-ನಂತರ ಅವುಗಳನ್ನು ಬಾಣಲೆಯಿಂದ ತೆಗೆದು ಪಕ್ಕದಲ್ಲಿಡಿ.
-ಸಿಪ್ಪೆ ತೆಗೆದ ಬೀಟ್‍ರೂಟ್‍ಗಳನ್ನು ಬೆಚ್ಚಗಿನ ತುಪ್ಪದಲ್ಲಿ ಹಾಕಿ ಮತ್ತು ಸ್ವಲ್ಪ ಹೊತ್ತು ಕಡಿಮೆ ಹುರಿಯಲ್ಲಿ ಹುರಿಯಿರಿ.
-ಈಗ, ಇದಕ್ಕೆ ಹಾಲು ಮತ್ತು ಕೋವಾವನ್ನು ಹಾಕಿ. ಕಡಿಮೆ ಹುರಿಯಲ್ಲಿ ಹುರಿಯಿರಿ.
-ನಂತರ, ಇದಕ್ಕೆ ಸಕ್ಕರೆ, ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಕಡಿಮೆ ಗಾತ್ರದ ಹುರಿಯಲ್ಲಿ ಬೇಯಿಸಿ ಮತ್ತು ಆಗಾಗ ಚೆನ್ನಾಗಿ ಕಲೆಸಿರಿ.
-ಇದರ ರುಚಿ ಮತ್ತಷ್ಟು ಹೆಚ್ಚಾಗಲು ಮಂದಗೊಳಿಸಿದ ಹಾಲನ್ನು ಬೆರೆಸಿ.
-ಹಾಲು ಮತ್ತಷ್ಟು ಮಂದಗೊಳ್ಳುವವರೆಗೆ ಹಾಗೂ ಮಿಶ್ರಣವು ಗಟ್ಟಿಯಾಗುವವರೆಗೆ ಬೇಯಿಸುತ್ತ ಇರಿ.
– ಹುರಿಯನ್ನು ಆರಿಸಿ ಮತ್ತು ಗೋಡಂಬಿ, ಬಾದಾಮಿ ಮತ್ತು ಒಣ ದ್ರಾಕ್ಷಿಗಳಿಂದ ಹಲ್ವಾವನ್ನು ಅಲಂಕರಿಸಿ.
-ಆರೋಗ್ಯಕರವಾದ ಬೀಟ್‍ರೂಟ್ ಹಲ್ವಾ ಸವಿಯಲು ಸಿದ್ಧ.

Advertisement

* ಶ್ರೀರಾಮ್ ನಾಯಕ್

Advertisement

Udayavani is now on Telegram. Click here to join our channel and stay updated with the latest news.

Next