ಕೊರಟಗೆರೆ : ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ತೋವಿನಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕರಸನಹಳ್ಳಿ ಗ್ರಾಮದಲ್ಲಿ ಬೆಳಿಗ್ಗೆಯೇ ಆಹಾರವನ್ನು ಅರಸಿ ಬಂದಂತಹ 2 ಕರಡಿಗಳು ಊರಿನ ಹೊರ ಭಾಗದ ಗ್ರಾಮಠಾಣ ಜಮೀನಿನಲ್ಲಿ ಇರುವ ಹಳೆಯ ಬಾವಿಯಲ್ಲಿ ಅವಿತು ಕುಳಿತಿರುವ ಘಟನೆ ಬೆಳಕಿಗೆ ಬಂದಿದೆ.
ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಕರಡಿಗಳನ್ನು ನೋಡಿ ಊರಿನ ಹಿರಿಯರ ಗಮನಕ್ಕೆ ತಂದಿದ್ದಾರೆ. ಬಳಿಕ ಅರಣ್ಯಾ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಕರೆ ಮಾಡಿ ಘಟನೆಯನ್ನು ತಿಳಿಸಿದ್ದಾರೆ.
ಮಾಹಿತಿ ತಿಳಿದ ತಕ್ಷಣವೇ ಕೊರಟಗೆರೆ ಅರಣ್ಯ ಇಲಾಖೆ ಅಧಿಕಾರಿ ಸುರೇಶ್ ಸ್ಥಳಕ್ಕೆ ಭೇಟಿ ನೀಡಿ ಸ್ಥಳವನ್ನು ಪರಿಶೀಲಿಸಿದರು. ಎರಡು ಕರಡಿಗಳ ರಕ್ಷಣೆಗೆ ಮುಂದಾಗಿದ್ದಾರೆ.
ನಂತರ ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ನೀಡಿದ್ದಾರೆ.
ಅಪಾಯದ ವಾತಾವರಣವಿರುವುದರಿಂದ ಗಡಿಬಿಡಿಗೊಂಡಂತಹ ಊರಿನ ಗ್ರಾಮಸ್ಥರಿಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡಿದ್ದಾರೆ.
ನಂತರ ಘಟನೆಯ ಬಗ್ಗೆ ತಹಶೀಲ್ದಾರ್ ಗಮನಕ್ಕೆ ತರಲಾಯಿತು. ನಾಹಿದಾ ಜಮ್ ಜಮ್ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಅರಿವು ಮೂಡಿಸಿದ್ದಾರೆ.
ಕೊರಟಗೆರೆ ಮತ್ತು ಮಧುಗಿರಿಯ ಅರಣ್ಯ ಇಲಾಖೆ ಅಧಿಕಾರಿಗಳು ಸತತ ಕಾರ್ಯಾಚರಣೆಯಿಂದ ಎರಡು ಕರಡಿಗಳನ್ನು ರಕ್ಷಣೆ ಮಾಡಿ ಕಾಡಿನತ್ತ ಓಡಿಸಿದ್ದಾರೆ.