ಬಳ್ಳಾರಿ: ಮೈಸೂರಿನ ಕಲಾಮಂದಿರದ ಮನೆಯಂಗಳದದಲ್ಲಿ ಚಾರ್ವಾಕ ಸೋಶಿಯಲ್ ಅಂಡ್ ಕಲ್ಚರಲ್ ಟ್ರಸ್ಟ್ ಎವಿಎಸ್ ಎಸ್ ಸಂಸ್ಥೆ ಆಯೋಜಿಸಿದ್ದ ಆಹಾರದ ಹಕ್ಕು ವ್ಯಕ್ತಿ ಸ್ವಾತಂತ್ರ್ಯ ವಿಷಯದ ಸಂವಾದದ ಕಾರ್ಯಕ್ರಮದಲ್ಲಿ ಗೋ ಮಾಂಸ ಸೇವಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಗೋ ಮಾಂಸ ಸೇವನೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಗೋ ಮಾಂಸವನ್ನು ಮನೆಯಲ್ಲಿ ಬೇಕಾದರೆ ತಿಂದು ಸಾಯಲಿ. ಆದರೆ ಸಾರ್ವಜನಿಕವಾಗಿ ಗೋ ಮಾಂಸ ತಿಂದಿರುವುದು ಅಕ್ಷಮ್ಯ ಅಪರಾಧ, ಇದನ್ನು ಯಾರೊಬ್ಬರು ಕ್ಷಮಿಸಲ್ಲ ಎಂದು ಹೇಳಿದರು.
ಕಲಾ ಮಂದಿರದಲ್ಲಿ ಗೋ ಮಾಂಸ ತಿಂದವರನ್ನು ಬಹಿಷ್ಕರಿಸಬೇಕು. ಇದು ಸಾರ್ವಜನಿಕರಿಗೆ ಮಾಡಿದ ಅಪಮಾನ. ಗೋ ಮಾಂಸ ಸೇವಿಸಿದವರ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗೋ ಮಾಂಸವನ್ನು ಸಾರ್ವಜನಿಕವಾಗಿ ತಿನ್ನುವುದು ಎಷ್ಟು ಸರಿ? ಬೇಕಾದರೆ ಅವರ ಮನೆಯಲ್ಲಿ ತಿಂದು ಸಾಯಲಿ ಎಂದು ಬಿಎಸ್ ಯಡಿಯೂರಪ್ಪ ಕಿಡಿಕಾರಿದ್ದಾರೆ.
ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ:
ಮೈಸೂರಿನ ಕಲಾಮಂದಿರದಲ್ಲಿ ಬಹಿರಂಗವಾಗಿ ಗೋ ಮಾಂಸ ಸೇವಿಸಿದವರ ವಿರುದ್ಧ ಕ್ರಮ ಕೈಗೊಂಡು ಬಂಧಿಸಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಮೈಸೂರಿನ ಎಸ್ ಟಿಎಫ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.